ತುಮಕೂರು ಲೈವ್

ತುಮಕೂರಿಗೆ ಹದಿನೈದು ದಿ‌ನದಲ್ಲಿ ಬರಲಿದೆ ಹೇಮಾವತಿ ನೀರು: ಸಿ.ಎಸ್.ಪುರ ಕೆರೆಗೆ ಹರಿಸಲು ಆಗ್ರಹ

Publicstory. in


Gubbi: ಮುಂದಿನ ತಿಂಗಳ ಮೊದಲ ವಾರದಲ್ಲಿ ತುಮಕೂರಿಗೆ ಹೇಮಾವತಿ ನೀರು ಹರಿಸಲಿದ್ದು, ಅದನ್ನು ನೇರವಾಗಿ ಸಿ.ಎಸ್. ಪುರ ಕೆರೆ ತುಂಬಿಸಲು ಕ್ರಮ ಕೈಗೊಳ್ಳಬೇಕು ಎಂದು ಬೆಲೆ ಕಾವಲು ಸಮಿತಿ ಸಲಹೆಗಾರರೂ ಆದ ವಕೀಲ ಮಹೇಂದ್ರ ಕೃಷ್ಣಮೂರ್ತಿ ಒತ್ತಾಯಿಸಿದ್ದಾರೆ.

ಸಿ.ಎಸ್. ಕೆರೆಗೆ ಕುಡಿಯುವ ನೀರಿನ ಹಂಚಿಕೆಯಾಗಿದೆ. ಕುಡಿಯುವ ನೀರಿಗಾಗಿ ಮೂವತ್ತು ಏಳು ಗ್ರಾಮಗಳು ಬರಲಿದ್ದು, ಈ ಎಲ್ಲ ಗ್ರಾಮಗಳಿಗೆ ನೀರಿನ ಕೊರತೆ ಎದುರಾಗಿದೆ. ಹೀಗಾಗಿ ಸಿ.ಎಸ್.ಪುರ ಕೆರೆಗೆ ನೀರು ಬಿಡುವಂತೆ ಸರ್ಕಾರದ ಮೇಲೆ ಒತ್ತಡ ಹಾಕುವಂತೆ ಶಾಸಕ ಮಸಾಲಾ ಜಯರಾಮ್ ಅವರನ್ನು ಒತ್ತಾಯಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಸಿ.ಎಸ್. ಪುರ ಕೆರೆಗೆ ಹಂಚಿಕೆಯಾದ ನೀರನ್ನು ಕಳೆದ ಹತ್ತು ವರ್ಷಗಳಿಂದಲೂ ಬಿಡುತ್ತಿಲ್ಲ. ಈ ವರ್ಷ ಕೂಡ ಹಂಚಿಕೆಯ ಪ್ರಮಾಣದಷ್ಟು ನೀರು ಬಿಟ್ಟಿಲ್ಲ . ಹೀಗಾಗಿ ಮುಂದಿನ ತಿಂಗಳಿಂದ ಬಿಡುವ ಹೇಮಾವತಿ ನೀರನ್ನು ಸಿಎಸ್ ಪುರ ಕೆರೆಗೆ ಹರಿಸಲು ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಶಾಸಕರಾದ ಮಸಾಲಾ ಜಯರಾಂ ಅವರ ಶ್ರಮದಿಂದಾಗಿ ಸಿ.ಎಸ್. ಕೆರೆಗೆ ಸಲ್ಪ ನೀರು ತುಂಬಿಸಲು ಸಾಧ್ಯವಾಗಿದೆ. ಆದರೆ ನೀರಿನ ಹಂಚಿಕೆ ಸಂದರ್ಭದಲ್ಲಿ ಮೂಲವಾಗಿ ಹೇಮಾವತಿ ಜಲಾಶಯದಲ್ಲಿ ನೀರು‌ ಹರಿಸುವುದನ್ನು ನಿಲ್ಲಿಸಿದ ಕಾರಣ ಸಿ.ಎಸ್. ಕೆರೆಗೆ ಹರಿಯಬೇಕಾದ ನೀರು ಹರಿಯಲಿಲ್ಲ. ಹೀಗಾಗಿ ಹಂಚಿಕೆಯಾದಷ್ಟು ನೀರನ್ನು ಪಡೆಯಲು ಸಾಧ್ಯವಾಗಿಲ್ಲ. ಈಗ ಮತ್ತೊಮ್ಮೆ ನೀರನ್ನು ಬಿಡುತ್ತಿರುವುದರಿಂದ ಉಳಿದ ನೀರನ್ನು ಸಿಎಸ್ ಪುರ ಕೆರೆಗೆ ಬಿಡಲು ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಅವರು ಹೇಳಿದ್ದಾರೆ.

ಶಾಸಕರು ಹೇಮಾವತಿ ನೀರು ಪಡೆಯುವ ವಿಚಾರದಲ್ಲಿ ಮೊದಲಿಂದಲೂ ಮುತುವರ್ಜಿ ವಹಿಸುತ್ತಿರುವುದು ಸ್ವಾಗತಾರ್ಹ. ಅವರದೇ ಸರ್ಕಾರ ಇರುವ ಕಾರಣ ಹೆಚ್ಚುವರಿ ನೀರನ್ನು ಸಿಎಸ್ ಕೆರೆಗೆ ತರಲು ಶ್ರಮಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಜೆ ಸಿ ಮಾಧುಸ್ವಾಮಿ ಅವರೊಂದಿಗೆ ಶಾಸಕರು ಉತ್ತಮ ಒಡನಾಟ ಮತ್ತು ಸಂಬಂಧ ಹೊಂದಿದ್ದು, ಸಿಎಸ್ ಪುರ, ಮಾವಿನಹಳ್ಳಿ ಮತ್ತು ಕಲ್ಲೂರು ಕೆರೆಗಳಿಗೆ ಕೆರೆಗಳನ್ನು ತುಂಬಿಸಲು ಪ್ರಯತ್ನಿಸಬೇಕು ಎಂದು ಆಗ್ರಸಹಿಸಿದ್ದಾರೆ.

ಈ ಭಾಗದಲ್ಲಿ ಅಂತರ್ಜಲ ತುಂಬಾ ಕೆಳಗೆ ಹೋಗಿದೆ. ಇದು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಹೀಗಾಗಿ ಶಾಸಕರು ನೀರನ್ನು ಬಿಡಿಸಲು ಮುಂದಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಹೇಮಾವತಿ ನಾಲಾ ವಲಯದ ಆಧುನೀಕರಣದಿಂದ ಜಿಲ್ಲೆಗೆ ಅನುಕೂಲವಾಗಲಿದ್ದು, ಇದನ್ನು ಕೂಡ ಆದಷ್ಟು ಬೇಗ ಮುಗಿಸಲು ಒತ್ತಡ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.

ಸಿಎಸ್ ಪುರ ಕೆರೆ ತುಂಬಿಸಲು ಕುಣಿಗಲ್ ಮುಖ್ಯ ನಾಲೆಗೆ ಎಕ್ಸ್ ಪ್ರೆಸ್ ನಾಲೆಯ ಕಾಮಗಾರಿ ಕೈಗೊಳ್ಳಬೇಕಾಗಿದೆ. ಆದರೆ ಇನ್ನೂ ಸಹ ಕಾಮಗಾರಿ ಆರಂಭಗೊಳ್ಳದೇ ಇರುವುದು ರೈತರ ಆತಂಕವನ್ನು ಹೆಚ್ಚಿಸಿದೆ. ಶಾಸಕರು ಕೂಡಲೇ ಕಾಮಗಾರಿ ಆರಂಭಕ್ಕೆ ಕ್ರಮ ವಹಿಸಬೇಕು. ಶಾಸಕರು ಈ ಹಿಂದೆ ಭರವಸೆ ನೀಡಿದಂತೆ ಸಿಎಸ್ ಪುರ ಕೆರೆಗೆ ನೀರು ತರಲು ಎಲ್ಲ ರೀತಿಯ ಪ್ರಯತ್ನ ಹಾಕಿರುವುದು ಸ್ವಾಗತಾರ್ಹ ಎಂದು ಅವರು ಇದೇ ಸಂದರ್ಭ ಹೇಳಿದ್ದಾರೆ.

Comment here