ತುಮಕೂರು ಲೈವ್

ತುಮಕೂರಿನಲ್ಲಿ ಮತ್ತೊಂದು ಕರೊನಾ ಸಾವು: ಜಯಪುರ, ಹೌಸಿಂಗ್ ಬೋರ್ಡ್ ಸೀಲ್ ಡೌನ್

ತುಮಕೂರು: ನಾಲ್ಕು ದಿನಗಳ ಹಿಂದೆ ಮೃತಪಟ್ಟ ವ್ಯಕ್ತಿಯಲ್ಲಿ ಕೊರೊನಾ ವೈರಸ್ ಇರುವುದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ತುಮಕೂರು ನಗರದ ಜಯಪುರ ಮತ್ತು ಹೌಸಿಂಗ್ ಬೋರ್ಡ್ ನ್ನು ಸೀಲ್ ಡೌನ್ ಮಾಡಲಾಗಿದೆ.

ಏಪ್ರಿಲ್ 26ರಂದು ವ್ಯಕ್ತಿ ಮೃತಪಟ್ಟಾಗ ಅಂದು ಸಂಬಂಧಿಕರಿಗೆ ಶವವನ್ನು ನೀಡಲಾಗಿತ್ತು. ನಾಗವಲ್ಲಿ ಸಮೀಪ ಜನರು, ಸಂಬಂಧಿಕರು‌ ಸೇರಿಕೊಂಡು ಅಂತ್ಯಕ್ರಿಯೆ‌ ನೆರವೇರಿಸಿದ್ದರು.

ಆದರೆ ಇಂದು ಜಿಲ್ಲಾಡಳಿತ ಏಪ್ರಿಲ್ 25ರಂದು ತೆಗೆದುಕೊಂಡಿದ್ದ ರಕ್ತ ಮಾದರಿ ತೆಗೆದುಕೊಂಡಿರುವ ವರದಿ ಬಂದಿದೆ. ಅದರಲ್ಲಿ ಮೃತ ವ್ಯಕ್ತಿಗೆ ಪಾಸಿಟೀವ್ ಇರುವುದು ಕಂಡುಬಂದಿದೆ ಎಂಬ ಕಾರಣ ನೀಡಿ ಸಾವಿಗೀಡಾಗಿದ್ದ ವ್ಯಕ್ತಿ ಇದ್ದ ಜಯಪುರ ಮತ್ತು ಹೌಸಿಂಗ್ ಬೋರ್ಡ್ ಅನ್ನು ಸೀಲ್ ಡೌನ್ ಮಾಡಲಾಗಿದೆ.

ಆದರೆ ಆರೋಗ್ಯ ಇಲಾಖೆ ಇಂದು ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ನಲ್ಲಿ ಮೃತಪಟ್ಟ ವ್ಯಕ್ತಿಗೆ ಸೋಂಕಿರುವುದನ್ನು ದೃಢಪಡಿಸಿಲ್ಲ. ‌ಆದರೆ‌ ಸಂಜೆ ಜಿಲ್ಲಾಧಿಕಾರಿ ಸೋಂಕು ಇರುವುದು ಖಾತರಿಪಡಿಸಿದರು. ಜಯಪುರ ಮತ್ತು ಹೌಸಿಂಗ್ ಬೋರ್ಡ್ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ.

ಮೃತ ವ್ಯಕ್ತಿ ಕುಟುಂಬ ಸದಸ್ಯರನ್ನು ಕ್ವಾರಂಟೈನ್ ನಲ್ಲಿಡಲಾಗಿದ್ದು ಜಯಪುರಕ್ಕೆ ಯಾರೂ ಒಳಹೋಗದಂತೆ ಮತ್ತು ಹೊರಬರದಂತೆ ಬ್ಯಾರಿಕೇಡ್, ಶೀಟ್ ಗಳನ್ನು ಅಳವಡಿಸಲಾಗಿದೆ.

ಮೃತ ವ್ಯಕ್ತಿಗೆ ಇಬ್ಬರು ಮಕ್ಕಳಿದ್ದು ಒಬ್ಬ ಪೂನಾದಲ್ಲಿ ಮತ್ತೊಬ್ಬ ಬೆಂಗಳೂರಿನಲ್ಲಿದ್ದಾರೆ. ತಂದೆಯ ದಫನ್ ಗೆ ಬೆಂಗಳೂರಿನಲ್ಲಿದ್ದ ಪುತ್ರ ಮಾತ್ರ ಬಂದಿದ್ದರು. ಮೃತದೇಹ ದಫನ್ ಮಾಡಿ ಮೂರು ದಿನ ಕಳೆದ ನಂತರ ಕೊರೊನ ಪಾಸಿಟೀವ್ ಎಂದು ಹೇಳಿ ಜಯಪುರವನ್ನು ಸೀಲ್ ಡೌನ್ ಮಾಡಿರುವುದು ಜನರಲ್ಲಿ ಭಯ ಹುಟ್ಟಿಸಿದೆ.

ಮೃತ ವ್ಯಕ್ತಿ ಮೊದಲು ನಗರದ‌ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ನಂತರ ಗುಣಮುಖರಾಗದ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದರು ಎಂದು ಹೇಳಲಾಗುತ್ತಿದೆ.

Comment here