ತುಮಕೂರ್ ಲೈವ್

ತುಮಕೂರು ಸ್ಮಾರ್ಟ್ ಸಿಟಿಯಲ್ಲಿ ಅವ್ಯವಹಾರ ನಡೆದಿಲ್ವಂತೆ

ಸ್ಮಾರ್ಟ್ ಸಿಟಿ ಯೋಜನಾ ಪಟ್ಟಿಯಲ್ಲಿ ಎರಡನೇ ಸುತ್ತಿನಲ್ಲಿ ಆಯ್ಕೆಯಾಗಿರುವ ತುಮಕೂರು ಸ್ಮಾರ್ಟ್‍ಸಿಟಿ ಯೋಜನಾ ಪ್ರಕ್ರಿಯೆಗಳು ಸರ್ಕಾರದ ಕಾರ್ಯಾದೇಶದಂತೆ ನಡೆಯುತ್ತಿದೆ ಎಂದು ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ವಿ.ಅಜಯ್ ಪ್ರತಿಕ್ರಿಯೆ ನೀಡಿದ್ದಾರೆ.
ಸ್ಮಾರ್ಟ್‍ಸಿಟಿ ಯೋಜನೆಯಡಿ ನಗರದಲ್ಲಿ ನಡೆಯುತ್ತಿರುವ ಕಾಮಗಾರಿಗಳು ಗುಣಮಟ್ಟದಿಂದ ಕೂಡಿಲ್ಲ. ಕಳಪೆಯಿಂದ ನಡೆಯುತ್ತಿದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆದೇಶದ ಮೇರೆಗೆ ತುಮಕೂರು ನಗರದಲ್ಲಿ ಕೈಗೊಂಡಿರುವ ಯೋಜನೆಗಳ ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಕಾರ್ಯದೇಶವನ್ನು ನೀಡಲಾಗಿದೆ. ಅದರಂತೆ ಈಗಾಗಲೇ 50.17 ಕೋಟಿ ರೂ.ಗಳ ಯೋಜನೆಯನ್ನು ಪೂರ್ಣಗೊಳಿಸಿದ್ದು, 716.50 ಕೋಟಿ ರೂ.ಗಳ ಯೋಜನೆಯು ಅನುಷ್ಠಾನ ಹಂತದಲ್ಲಿದೆ ಎಂದು ಅವರು ತಿಳಿಸಿದ್ದಾರೆ.
ಸ್ಮಾರ್ಟ್ ಸಿಟಿ ಯೋಜನೆಯಡಿ 82.18 ಕೋಟಿ ರೂ.ವೆಚ್ಚದಲ್ಲಿ ಇಂಟಿಗ್ರೇಟೆಡ್ ಬಸ್ ಟರ್ಮಿನಲ್, 58 ಕೋಟಿ ರೂ. ವೆಚ್ಚದಲ್ಲಿ ಟ್ರಾಮ ಕೇರ್ ಸೆಂಟರ್, 56 ಕೋಟಿ ರೂ. ವೆಚ್ಚದಲ್ಲಿ 24×7 ಕುಡಿಯುವ ನೀರಿನ ಸೌಲಭ್ಯ, 52.30 ಕೋಟಿ ರೂ.ವೆಚ್ಚದಲ್ಲಿ ಮಹಾತ್ಮಗಾಂಧಿ ಸ್ಟೇಡಿಯಂ ಅಭಿವೃದ್ಧಿ ಯೋಜನೆಗಳನ್ನು ಸಂಬಂಧಪಟ್ಟ ಇಲಾಖೆಗಳಿಂದ ತಾಂತ್ರಿಕ ವರದಿಗಳ ವಿಸ್ತøತ ವರದಿಯನ್ನು (ಡಿ.ಪಿ.ಆರ್) ಪಡೆದು ಅನುಮೋದಿಸಿ ಯೋಜನೆಯ ಅನುಷ್ಠಾನವನ್ನು ಸಂಬಂಧಪಟ್ಟ ಇಲಾಖೆಗಳಿಂದ ನಿರ್ವಹಿಸಲು ಯೋಜಿಸಲಾಗಿದೆ. ಕಾಮಗಾರಿಗಳಿಗೆ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಅನುದಾನವನ್ನು ಬಿಡುಗಡೆ ಮಾಡಲಾಗುತ್ತಿದೆಯಲ್ಲದೆ ಟೆಂಡರ್ ಪ್ರಕ್ರಿಯೆ ಮತ್ತು ಅನುಷ್ಟಾನದ ಹೊಣೆಯನ್ನು ಸಂಬಂಧಪಟ್ಟ ಇಲಾಖೆಗಳು ಹೊಂದಿವೆ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.
ಕೇಂದ್ರ ಸರ್ಕಾರದ ಆದೇಶದಂತೆ ಸ್ಮಾರ್ಟ್ ಸಿಟಿ ಯೋಜನೆಗಳ ಅನುಷ್ಠಾನವನ್ನು ಏಕಕಾಲದಲ್ಲಿ ಕೈಗೊಂಡಿದ್ದರಿಂದ ತಾತ್ಕಾಲಿಕವಾಗಿ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿದೆ. ಇದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮತ್ತು ಕಾಮಗಾರಿಯ ಅನುಷ್ಠಾನದಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ “ಸಮನ್ವಯ ಸಮಿತಿ”ಯನ್ನು ಸಹ ರಚಿಸಿದ್ದು, ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲು ಅನುಕೂಲವಾಗಿದೆ ಎಂದು ಅವರು ಹೇಳಿದ್ದಾರೆ.
ಕಾಮಗಾರಿಯಲ್ಲಿ ಗುಣಮಟ್ಟವನ್ನು ನಿಯಮಾವಳಿ ಪ್ರಕಾರ ನಗರದಲ್ಲಿರುವ ವಿವಿಧ ಇಂಜಿನಿಯರಿಂಗ್ ಕಾಲೇಜ್ ಹಾಗೂ ಪ್ರತಿಷ್ಠಿತ ಬೆಂಗಳೂರಿನ ಆರ್.ವಿ.ಕಾಲೇಜ್‍ನಿಂದ ಅವಶ್ಯಕವಾದ ಎಲ್ಲಾ ರೀತಿಯ ಪರೀಕ್ಷೆಗೊಳಪಡಿಸಲಾಗಿದೆ. ಅಲ್ಲದೆ ಕಾಮಗಾರಿಯ ಗುಣಮಟ್ಟದ ಬಗ್ಗೆ ಎಂದು ರಾಜ್ಯ ಸರ್ಕಾರದ ಲೋಕೋಪಯೋಗಿ ಇಲಾಖೆಯ Quality Control Department Cell ನಿಂದ ವರದಿ ನೀಡಲು ಸಹ ಕೋರಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳಲ್ಲಿ ಯಾವುದೇ ಅವ್ಯವಹಾರ ನಡೆದಿರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Comment here