ತುಮಕೂರ್ ಲೈವ್

ತುಮಕೂರು ಸ್ಮಾರ್ಟ್ ಸಿಟಿ ಅವ್ಯವಹಾರ: 18ಕ್ಕೆ ವರದಿ ಸಲ್ಲಿಕೆ?

Public story.in


ತುಮಕೂರು: ತುಮಕೂರು ನಗರದಲ್ಲಿ ಸುಮಾರು 900 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಂಡಿರುವ ಕಾಮಗಾರಿಗಳು ಕಳಪೆಯಿಂದ ಕೂಡಿವೆ, ಅನಗತ್ಯವಾಗಿ ಕಾಮಗಾರಿ ಕೈಗೊಂಡು ಹಣ ವ್ಯರ್ಥ ಮಾಡಲಾಗಿದೆ,ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ನೇಮಿಸಿದ್ದ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜೈಪ್ರಕಾಶ್ ಕೆ. ಅವರ ನೇತೃತ್ವದಲ್ಲಿ ನೇಮಿಸಿದ್ದ ಸ್ಮಾರ್ಟ್ ಸಿಟಿ ಅನುಷ್ಠಾನ ತಂಡಕ್ಕೆ ಡಿ.18ರಂದು ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಈ ತಂಡವೂ ಈಗಾಗಲೇ ದೂರು ಬಂದಿರುವ ಕಾಮಗಾರಿಗಳ ಗುಣಮಟ್ಟ ಮತ್ತಿತರರ ವಿಷಯಗಳ ಬಗ್ಗೆ ಅಧ್ಯಯನ ನಡೆಸಬೇಕಾಗಿದೆ. ಅಗತ್ಯವಿದ್ದರೆ ತಜ್ಞರ ಅಭಿಪ್ರಾಯವನ್ನು ಪಡೆಯಲು ಸಹ ತಂಡಕ್ಕೆ ಸ್ವಾತಂತ್ರ ನೀಡಲಾಗಿದೆ. ಈ ತಂಡ ಏನು ವರದಿ ನೀಡಲಿದೆ ಎಂಬ ಕುತೂಹಲ ಮನೆಮಾಡಿದೆ.

ಈ ತಂಡಕ್ಕೆ ವರದಿ ನೀಡುವಂತೆ ಸೂಚಿಸಿದ್ದ ಬೆನ್ನಲ್ಲೆ ಸ್ಮಾರ್ಟ್ ಸಿಟಿ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕರನ್ನು ರಾಜ್ಯ ಸರ್ಕಾರ ವರ್ಗ ಮಾಡಿರುವುದು ಸಹ ಹಲವು ಊಹಾಪೋಹಗಳಿಗೆ ಕಾರಣವಾಗಿದೆ.

ಕಪ್ಪು ಪಟ್ಟಿಗೆ ಗುತ್ತಿಗೆದಾರರು


ಸ್ಮಾರ್ಟ್ ಸಿಟಿ ಕಾಮಗಾರಿಗಳಲ್ಲಿ ಅವ್ಯವಹಾರ, ಕಳಪೆ ಕಂಡುಬಂದಿದ್ದರೆ ಅಂತಹ ಕಾಮಗಾರಿಗಳ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವ ಪ್ರಸ್ತಾವನೆಯನ್ನು ಸಹ ನೀಡುವಂತೆ ತಂಡಕ್ಕೆ ನಿರ್ದೇಶನ ನೀಡಲಾಗಿದೆ.

ಈ ತಂಡ ಯಾವುದಾದರೂ ಗುತ್ತಿಗೆದಾರರನ್ನು ಪಟ್ಟಿಗೆ ಸೇರಿಸಲು ಶಿಫಾರಸು ಮಾಡಲಿದೆಯೇ ಇಲ್ಲವೇ ಎಂಬ ಬಗ್ಗೆಯೂ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಕಚೇರಿ ಅಂಗಗಳಲ್ಲಿ ಊಹಾಪೋಹಗಳು ಹರಿದಾಡುತ್ತಿವೆ.

ಡಿಸೆಂಬರ್ 18ರಂದು ಸಂಸದ ಜಿ.ಎಸ್.ಬಸವರಾಜ್ ಅವರು ಅಧಿಕಾರಿಗಳ ಸಭೆಯನ್ನು ಕರೆದಿದ್ದಾರೆ. ಈ ಸಭೆಯಲ್ಲೇ ವರದಿ ಮಂಡನೆ ಮಾಡುವಂತೆ ಜಯಪ್ರಕಾಶ್ ಅವರಿಗೆ ಈಗಾಗಲೇ ಲಿಖಿತವಾಗಿಯೇ ನಿರ್ದೇಶನ ನೀಡಲಾಗಿದೆ.

ಸಭೆಯು ಅಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಕರೆಯಲಾಗಿದೆ. ಸಭೆಗೆ ಸ್ಮಾರ್ಟ್ ಸಿಟಿ ಲಿಮಿಟೆಡ್ ಗೆ ಸಂಬಂಧಿಸಿದಂತೆ ಎಲ್ಲ ಅಧಿಕಾರಿಗಳು, ಸಲಹಾ ಸಮಿತಿ ಸದಸ್ಯರು ಹಾಗೂ ದಿಶಾ ಸಮಿತಿ ಸದಸ್ಯರನ್ನು ಆಹ್ವಾನಿಸಲಾಗಿದೆ. ಸಭೆಯಲ್ಲಿ ಕೆಲವು ಪ್ರಮುಖ ವಿಚಾರಗಳು ಮಂಡನೆಯಾಗಲಿವೆ ಎಂದು ತಿಳಿದುಬಂದಿದೆ.

ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಎಲ್ಲ ಕಾಮಗಾರಿಗಳ ಮಾಹಿತಿಯನ್ನು ಅಂತರ್ಜಾಲ ತಾಣಕ್ಕೆ ಸ್ಮಾರ್ಟ್ ಸಿಟಿ ವೆಬ್ ಸೈಟ್ ಗೆ ಹಾಕುವ ಸಂಬಂಧ ಮಹತ್ವದ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳುವ ಸಾಧ್ಯತೆ ಇದೆ.

Comment here