ತುಮಕೂರು ಲೈವ್

ತುಮಕೂರು: 500ರ‌ ಹತ್ತಿರ ಸಾಗುತ್ತಿರುವ ಕೊರೊನಾ, Sp ಕಚೇರಿ ಸೀಲ್ಡ್ ಡೌನ್, ಗರ್ಭಿಣಿಯರನ್ನು ಬಿಡದ ಸೋಂಕು

Publicstory


ತುಮಕೂರು; ಜಿಲ್ಲೆಯಲ್ಲಿ ಕೊರೊನಾ ರುದ್ರ ತಾಂಡವ ನಿಲ್ಲುವಂತೆ ಕಾಣುತ್ತಿಲ್ಲ. ಭಾನುವಾರವೂ ಮತ್ತೇ 25 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಇವರಲ್ಲಿ ಗರ್ಭಿಣಿಯರು, ಪೊಲೀಸರು ಸೇರಿದ್ದಾರೆ.

ಒಟ್ಟು 25 ಪ್ರಕರಣಗಳು ಪಾಸಿಟಿವ್ ಬಂದಿವೆ.
ಹೊಸ ಸೋಂಕಿತರ ಪೈಕಿ ಮೂವರು ಗರ್ಭಿಣಿಯರಾಗಿದ್ದಾರೆ. ಉಳಿದಂತೆ 11 ಜನ ರೋಗದ ಲಕ್ಷಣಗಳಿದ್ದವರು, 11 ಜನರು ಯಾವುದೇ ರೋಗ ಲಕ್ಷಣಗಳಿಲ್ಲದವರು ಹಾಗೂ 3 ಮಂದಿ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದವರಾಗಿದ್ದಾರೆ. ಉಳಿದ ಮೂವರು ಪೊಲೀಸರು ಸೋಂಕಿಗೆ ಒಳಗಾಗಿದ್ದಾರೆ. ಮಧುಗಿರಿಯಲ್ಲಿ ಒಂದು ಸಾವು ಸಂಭವಿಸಿದೆ.

ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಸಿಬ್ಬಂದಿಯೊಬ್ಬರೂ ಸೇರಿದಂತೆ ಮೂರು ಮಂದಿ ಪೊಲೀಸರಿಗೆ ಕೊರೊನ ಸೋಂಕು ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿದೆ.

ಎಸ್ಪಿ ಕಚೇರಿಯನ್ನು ಸ್ಯಾನಿಟೈಜ್ ಮಾಡಲಾಗಿದೆ. ಪೊಲೀಸರಲ್ಲಿ ಹೆಚ್ಚಾಗಿ ಸೋಂಕು ಕಂಡು ಬರುತ್ತಿರುವುದು ಅವರ ಮಾನಸಿಕ ಸ್ಥೈರ್ಯಕ್ಕೆ ಸವಾಲಾಗಿದೆ.

ಕೊರೊನ ಸೋಂಕಿತ ಭೇಟಿ ಹಿನ್ನೆಲೆಯಲ್ಲಿ ಈಗಾಗಲೇ ಮಧುಗಿರಿ ಡಿವೈಎಸ್ಪಿ ಕಚೇರಿ ಮತ್ತು ಕೋಡಿಗೇನಹಳ್ಳಿ ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿತ್ತು. ಈಗ ಜಿಲ್ಲಾ ಪೊಲೀಸ್ ವರಿಷ್ಠರ ಕಚೇರಿಯನ್ನು ಸೀಲ್ ಮಾಡಿದೆ.

ಸೋಂಕಿತ ಸಿಬ್ಬಂದಿಯ ಪ್ರಯಾಣ ಇತಿಹಾಸ, ಪ್ರಾಥಮಿಕ ಮತ್ತು ಮಾಧ್ಯಮಿಕ ಸಂಪರ್ಕಿತರ ವಿವರವನ್ನು ಆರೋಗ್ಯ ಮತ್ತು ಕುಟುಂಬ ಇಲಾಖೆ ಸಂಗ್ರಹಿಸುತ್ತಿದೆ. ಇಬ್ಬರು ಕೆಎಸ್.ಆರ್.ಪಿ ಪೊಲೀಸರಿಗೂ ಕೊರೋನ ದೃಢಪಟ್ಟಿದೆ.

ವೀರಸಾಗರದ ಮುನಿಸಿಪಲ್ ಕಚೇರಿಯಲ್ಲೂ ವ್ಯಕ್ತಿಯೊಬ್ಬರಿಗೆ ಸೋಂಕು ಇರುವುದು ಪತ್ತೆಯಾಗಿದೆ. ಇಂದು ತುಮಕೂರು ಜಿಲ್ಲೆಯಲ್ಲಿ 25 ಪ್ರಕರಣಗಳು ಕಂಡುಬಂದಿದ್ದು, ತುಮಕೂರಿನಲ್ಲಿ 11 ಕೇಸುಗಳು ದಾಖಲಾಗಿವೆ. .
ಸಪ್ತಗಿರಿ ಬಡಾವಣೆ, ಎಸ್.ಐ.ಟಿ ಬಡಾವಣೆ ಸೇರಿದಂತೆ ಜಿಲ್ಲೆಯ ಕುಣಿಗಲ್, ಪಾವಗಡ, ಕೊರಟಗೆರೆ ತಾಲೂಕುಗಳಲ್ಲೂ ಕೊರೊನ ಪ್ರಕರಣಗಳು ವರರಿಯಾಗಿವೆ.

ಜಿಲ್ಲೆಯಲ್ಲಿ ಸೋಂಕು ಪೀಡಿತರ ಸಂಖ್ಯೆ 478 ಮುಟ್ಟಿದ್ದು, 500 ಗಡಿ ದಾಟುವ ದಿನ ದೂರವಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಸೋಂಕು ಪೀಡಿತರ ಬದಲಿಗೆ ಗುಣಮುಖರಾಗಿ ಹೊರ ಹೋಗುತ್ತಿರುವ ಸಂಖ್ಯೆ ಕಡಿಮೆಯಾಗಿದ್ದು, ಇದು ಆತಂಕ ಮೂಡಿಸಿದೆ. ಸಾವಿನ ಸಂಖ್ಯೆಯೂ ಏರುತ್ತಿದ್ದು, ಇದು ಸಹ ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಹೇಳಲಾಗುತ್ತಿದೆ.

ಹಳ್ಳಿಗಳಲ್ಲಿ ಸೋಂಕು ಹೆಚ್ಚುತ್ತಿದ್ದು, ಸೋಂಕು ನಿಯಂತ್ರಣ ಮಾಡುವಲ್ಲಿ ಮುನ್ನೆಚ್ಚರಿಕೆ ಮೂಡಿಸುವಲ್ಲಿ ಜಿಲ್ಲಾಡಳಿತ ಸೋಲುತ್ತಿದೆ. ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಆಡಳಿತ ಸಹಭಾಗಿತ್ವದಲ್ಲಿ ಕೆಲಸ ಮಾಡುತ್ತಿಲ್ಲ. ಅಧಿಕಾರಿಗಳ ನಡುವಿನ ಸಹಭಾಗಿತ್ವದ ಕೊರತೆಯೂ ಸೋಂಕು ಹೆಚ್ಚಲು ಕಾರಣವಾಗುತ್ತಿದೆ. ಮಾಸ್ಕ್ ಧರಿಸದಿದ್ದರೆ ದಂಡ ಹಾಕುವುದಾಗಿ ಪತ್ರಿಕಾ ಹೇಳಿಕೆ ನೀಡಿ ಜಿಲ್ಲಾ ಪಂಚಾಯತ್ ಸಿಇಒ ಕಚೇರಿಯಲ್ಲಿ ಕುಳಿತುಕೊಂಡರೆ ಸಾಲದು, ಹಳ್ಳಿಗಳಿಗೆ, ಗ್ರಾಮ, ತಾಲ್ಲೂಕು ಪಂಚಾಯತ್ ಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅರಿಯಬೇಕಾಗಿದೆ. ಜಿಲ್ಲಾಧಿಕಾರಿ ಅವರಯ ಸಿಇಒ ಅವರಿಗೆ ಈ ಬಗ್ಗೆ ತಾಖೀತು ಮಾಡಬೇಕು ಎಂದು ತುಮಕೂರು ವಿ.ವಿ. ಸಿಂಡಿಕೇಟ್ ಮಾಜಿ ಸದಸ್ಯ ಮಂಜುನಾಥ್ ಪ್ರತಿಕ್ರಿಯಿಸಿದರು.

ಇನ್ನೂ ಇಂದು, ತುಮಕೂರಿನಲ್ಲಿ 11, ತುರುವೇಕೆರೆಯಲ್ಲಿ 7, ಪಾವಗಡದಲ್ಲಿ ಮೂವರಿಗೆ, ಕೊರಟಗೆರೆ, ಮಧುಗಿರಿಯಲ್ಲಿ ಒಬ್ಬರಿಗೆ, ಕುಣಿಗಲ್ ನಲ್ಲಿ ಇಬ್ಬರಿಗೆ ಸೋಂಕು ತಗುಲಿದೆ.

Comment here