ತುಮಕೂರು ಲೈವ್

ತುರುವೇಕೆರೆ ಪಟ್ಟಣ ಕೆರೆ ರಕ್ಷಣೆಗೆ ಟೊಂಕಕಟ್ಟಿದ ಸಮಾನ ಮನಸ್ಕರು

ತುರುವೇಕೆರೆ: ಸಾವಿರಾರು ವರ್ಷಗಳ ಇತಿಹಾಸ ಹೊಂದಿದ್ದು ಸದ್ಯ ಹೂಳು ತುಂಬಿ ಒತ್ತುವರಿಗೆ ಒಳಗಾಗಿರುವ ಪಟ್ಟಣದ ಕೆರೆ ಸಂರಕ್ಷಣೆಗೆ ತಾಲ್ಲೂಕಿನ ಕೆರೆ ಹಿತರಕ್ಷಣೆಯ ಸಮಾನ ಮನಸ್ಕರ ಗುಂಪೊಂದು ಚಾಲನೆ ನೀಡಿದೆ
ಪಟ್ಟಣದ ಬೇಟೆರಾಯಸ್ವಾಮಿ ದೇವಾಲಯದಲ್ಲಿ ನಡೆದ ಕೆರೆ ಸಂರಕ್ಷಣೆ ಹಿತಾಸಕ್ತರ ಪೂರ್ವಭಾವೀ ಸಭೆಯಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಟಿ.ವಿ.ನಟರಾಜ್ ಪಂಡಿತ್ ‘ ಕೆರೆಯಲ್ಲಿ ನೂರಾರು ವರ್ಷಗಳಿಂದ ಸುಮಾರು 40 ಅಡಿ ಮೀರಿ ಹೂಳು ತುಂಬಿ ನಿಂತಿದೆ. ಸಮರ್ಪಕ ನಿರ್ವಹಣೆಯಿಲ್ಲದೆ ಕೆರೆ ನೀರು ಮಾಲಿನ್ಯಕ್ಕೊಳಗಾಗಿದೆ. ಕೆರೆಯ ನೀರು ಸಂಗ್ರಹಣಾ ಸಾಮಥ್ರ್ಯ ಕುಸಿದಿದೆ. ಈ ಹಿನ್ನಲೆಯಲ್ಲಿ ಕೆರೆಗೆ ತುರ್ತು ಕಾಯಕಲ್ಪ ಮಾಡುವ ಅಗತ್ಯವಿದೆ ಎಂದು ಹಲವು ಅಂಕಿ ಅಂಶಗಳ ಮೂಲಕ ಮನವರಿಕೆ ಮಾಡಿಕೊಟ್ಟರು.
ಕೃಷಿಕ ಟಿ.ಆರ್.ಪಾಂಡುರಂಗ ಮಾತನಾಡಿ ಕೆರೆಯ ಅಚ್ಚುಕಟ್ಟು ಸಾಕಷ್ಟು ಒತ್ತುವರಿಯಾಗಿದ್ದು ಕೆರೆ ಅಂಗಳವನ್ನು ಅವೈಜ್ಞಾನಿಕವಾಗಿ ಅಗೆದು ಕೆರೆಯ ಅಂದ ಹಾಗೂ ಸ್ವರೂಪ ಹಾಳುಗೆಡವಲಾಗಿದೆ. ಪ್ರಾಥಮಿಕ ಹಂತದಲ್ಲಿ ಕೆರೆಯನ್ನು ಸ್ವಚ್ಛಗೊಳಿಸುವ ಕಾರ್ಯ ಕೈಗೊಂಡು ಆ ನಂತರ ಹೂಳು ಎತ್ತುವ ಕಾರ್ಯಕ್ಕೆ ಚಾಲನೆ ನೀಡಬೇಕು ಎಂದರು
ವರ್ತಕ ಎಸ್.ಎಂ. ಕುಮಾರಸ್ವಾಮಿ ಮಾತನಾಡಿ ಕೆರೆ ಸಂರಕ್ಷಣೆ ಕುರಿತು ಸಮುದಾಯದಲ್ಲಿ ಜಾಗೃತಿ ಮೂಡಿಸಿ ಕೆರೆ ಅಚ್ಚುಕಟ್ಟು ಪ್ರದೇಶದ ರೈತರು, ವರ್ತಕರು, ಗುತ್ತಿಗೆದಾರರು ಹೀಗೆ ಎಲ್ಲಾ ಕ್ಷೇತ್ರದ ಸಂಪನ್ಮೂಲ ವ್ಯಕ್ತಿಗಳನ್ನು ಸಂಘಟಿಸುವ ಮೂಲಕ ಕೆರೆ ಕಾಯಕಲ್ಪಕಕ್ಕೆ ಮುಂದಾಗಬೇಕು. ಈ ನಿಟ್ಟಿನಲ್ಲಿ ಪಟ್ಟಣ ಪಂಚಾಯ್ತಿಯೂ ಸೇರಿದಂತೆ ಎಲ್ಲಾ ಸಂಬಂಧಿಸಿದ ಇಲಾಖೆಗಳು ಹಾಗೂ ಸಂಘ, ಸಂಸ್ಥೆಗಳ ಸಹಭಾಗಿತ್ವ ಮುಖ್ಯ ಎಂದರು.
ಕೆರೆ ಸಂರಕ್ಷಣೆಗೆ ಸಂಬಂಧಿಸಿದಂತೆ ಒಂದು ಕೆರೆ ಸಂರಕ್ಷಣಾ ಸಮಿತಿ ರಚಿಸಿ ಸಮಿತಿಯ ನೇತೃತ್ವದಲ್ಲಿ ಕೆರೆ ಸಂರಕ್ಷಣೆ ಕುರಿತು ಮುಂದಿನ ಯೋಜನೆ ರೂಪಿಸಲು ತೀರ್ಮಾನಿಸಲಾಯಿತು. ಸಭೆಯಲ್ಲಿ ನಂಜುಂಡಸ್ವಾಮಿ, ಟಿ.ಎನ್.ರಾಜೀವ್, ಡಿ.ಆರ್.ಸೋಮಶೇಖರ್, ಸಿ.ಎಸ್.ಗಂಗಾಧರಸ್ವಾಮಿ, ಪಾಲ್ ಕುಮಾರ್, ಟಿ.ಎಚ್.ರಾಮಕೃಷ್ಣಯ್ಯ, ಅಶ್ವಿನ್, ಸುರೇಶ್ ಪಟೇಲ್,ಕೊಟ್ರೇಶ್,ಬರಹಗಾರ ತುರುವೇಕೆರೆ ಪ್ರಸಾದ್ ಇತರರು ಭಾಗವಹಿಸಿದ್ದರು.

Comment here