Publicstory. in
Tumkur: ನಮ್ಮಸುತ್ತಮುತ್ತ ಹಾಗೂ ಪರಿಸರದಲ್ಲಿ ಹೆಚ್ಚುತ್ತಿರುವ ಧ್ವೇಷವನ್ನು ತೊಲಗಿಸಿ ಪ್ರೀತಿಯನ್ನು ಹಂಚುವ ಕೆಲಸ ಮಾಡಲು ಎಲ್ಲರೂ ಪಣ ತೊಡಬೇಕಾಗಿದೆ ಎಂದು ಜನಪರ ಚಿಂತಕ ಕೆ.ದೊರೈರಾಜ್ ಹೇಳಿದರು.
ತುಮಕೂರಿನ ಸ್ವಾತಂತ್ರ್ಯ ಚೌಕದಲ್ಲಿ ಜನಪರ ಸಂಘಟನೆಗಳ ವತಿಯಿಂದ ಹಮ್ಮಿಕೊಂಡಿದ್ದ ಹುತಾತ್ಮನಾದ ಗಾಂಧಿ ಕಾರ್ಯಕ್ರಮವನ್ನು ಉದ್ಗಾಟಿಸಿ ಅವರು ಮಾತನಾಡಿದರು. ಗಾಂಧೀಜಿ ಅಹಿಂಸೆಯ ಬೆಳಕು ಚೆಲ್ಲಿದರು. ಹೀಗಾಗಿ ಅದರ ಬೆಳಕಿನಲ್ಲೇ ನಾವು ನಡೆಯಬೇಕಾಗಿದೆ ಎಂದರು.
ನಮ್ಮದು ಕೊಲ್ಲುವ ಸಂಸ್ಕೃತಿಯಲ್ಲ. ಕೊಲ್ಲುವ ಮತ್ತು ದ್ವೇಷದ ಮನೋಭಾವವನ್ನು ಅಳಿಸಿಹಾಕಿ ಪ್ರೀತಿ ಮತ್ತು ಸಹನೆಯ, ಧರ್ಮನಿರಪೇಕ್ಷೆಯ ಸಂವಿಧಾನದಡಿಯಲ್ಲಿ ನಾವು ಬಾಳ್ವೆ ನಡೆಸಬೇಕು. ಜಾತಿ ಧರ್ಮ, ಪ್ರಾದೇಶಿಕತೆ ಸೇರಿದಂತೆ ಎಲ್ಲವನ್ನು ಎಲ್ಲರನ್ನು ಒಳಗೊಂಡು ಪರಸ್ಪರ ಸಹಬಾಳ್ವೆಯಿಂದ ಬದುಕು ನಡೆಸಬೇಕು ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಾ.ಹ.ರಮಾಕುಮಾರಿ ಮಾತನಾಡಿ, ಯುದ್ದೋನ್ಮಾದದ ದಿನಗಳಲ್ಲಿ ನಾವು ಗಾಂಧಿ ಹುತಾತ್ಮ ದಿನವನ್ನು ದುಃಖದಿಂದ ಆಚರಿಸುತ್ತಿದ್ದೇವೆ. ನಮ್ಮ ದೇಶ ಅಹಿಂಸೆಗೆ ಹೆಸರಾದುದು. ಹಿಂಸೆ ಶಾಶ್ವತ ಪರಿಹಾಋವನ್ನು ಒದಗಿಸುವುದಿಲ್ಲ. ಯುದ್ದೋನ್ಮಾದ ನಿವಾರಣೆ ಮಾಡಿ ಸಂವಿಧಾನದ ಆಶಯದಂತೆ ಸಂತೋಷವಾಗಿ ಜೀವನ ನಡೆಸಬೇಕಾಗಿದೆ ಎಂದರು.
ಎಐಟಿಯುಸಿ ಮುಖಂಡ ಗಿರೀಶ್ ಮಾತನಾಡಿ, ಶಾಂತಿ ಸ್ಥಾಪನೆಗೆ ಶ್ರಮಿಸಿದವರಿಗೆ ಗುಂಡಿಕ್ಕಿ ಕೊಂದರು. ಇಂದು ರಾಷ್ಟ್ರದಲ್ಲಿ ಆಳ್ವಿಕೆ ನಡೆಸುತ್ತಿರುವವರು ಜನರ ನಡುವೆ ದ್ವೇಷ ಹರಡುತ್ತಿದ್ದಾರೆ. ಇಂತಹ ಕೆಲಸವನ್ನು ಬಿಡಬೇಕು ಎಂದು ತಾಕೀತು ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಒಂದು ದಿನ ಶಾಂತಿ ಮಂತ್ರ ಜಪಿಸುತ್ತಾರೆ. ಮತ್ತೊಂದು ದಿನ ಇನ್ನೊಂದು ದೇಶವನ್ನು ಉಡಾಯಿಸುವ ಮಾತಾಡುತ್ತಾರೆ. ಮತಕ್ಕಾಗಿ ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ಕಾರ್ಯಕ್ರಮದ ಸಂಚಾಲಕರಾದ ಈ.ಶಿವಣ್ಣ, ಬಿ.ಉಮೇಶ್, ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ, ಡಿವೈಎಫ್ ಐ ಜಿಲ್ಲಾಧ್ಯಕ್ಷ ಎಸ್.ರಾಘವೇಂದ್ರ, ಸ್ಲಂಜನಾಂದೋಲನ ಸಂಚಾಲಕ ಎ.ನರಸಿಂಹಮೂರ್ತಿ, ಯುವ ಮುಖಂಡ ತಾಜುದ್ದೀನ್ ಷರೀಪ್, ನಿಸಾರ್ ಅಹಮದ್ ಮೊದಲಾದವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಲೇಖಕಿ ಅನ್ನಪೂರ್ಣ ವೆಂಕಟನಂಜಪ್ಪ, ಇಂದಿರಮ್ಮ, ರಾಣಿ ಚಂದ್ರಶೇಖರ್, ಷಣ್ಮುಖಪ್ಪ, ಫಿಟ್ ವೆಲ್ ಸುಜಿತ್ ನಾಯಕ್, ಕಾಳೇಶ್ವರಿ ಮುತ್ತುರಾಜು, ಲೋಕೇಶ್, ಕಟ್ಟಡ ಕಾರ್ಮಿಕ ಖಲೀಲ್, ಚಾಲಕ ಇಂತಿಯಾಜ್ ಪಾಷ, ಚೇತನ್, ಶೆಟ್ಟಾಳಯ್ಯ, ವಿದ್ಯಾರ್ಥಿಗಳು ಹಾಜರಿದ್ದರು.,
Comment here