ತುಮಕೂರು ಲೈವ್

ನಮ್ಗೂ 50‌ ಲಕ್ಷ ವಿಮೆ‌ ನೀಡಿ…

Publicstory. in


ತುಮಕೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗಳಿಗೂ 50 ಲಕ್ಷ ರೂಪಾಯಿ ವಿಮೆಯನ್ನು ನೀಡಬೇಕು, ಚಾಲಕರು, ನಿರ್ವಾಹಕರು ಹಾಗೂ ತಾಂತ್ರಿಕ ಸಿಬ್ಬಂದಿಗಳಿಗೆ ಅಗತ್ಯ ಸುರಕ್ಷತಾ ಸಲಕರಣೆಗಳಾದ ಸ್ಯಾನಿಟೈಜರ್, ಮಾಸ್ಕ್, ಕೈಕವಚಗಳನ್ನು ನೀಡಬೇಕು. ಅನಾರೋಗ್ಯವಿರುವ ಸಿಬ್ಬಂದಿಗೆ ರಜೆ ನೀಡಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನೌಕರರ ಸಂಘ ಸಿಐಟಿಯು ಒತ್ತಾಯಿಸಿದೆ.

ಮೇ 4 ರಿಂದ ಕೆಲಸಕ್ಕೆ ಹಾಜರಾಗಿರುವ ಎಲ್ಲರಿಗೆ ಹಾಜರಾತಿ ನೀಡಬೇಕು. ಕೆಲಸಕ್ಕೆ ಹಾಜರಾದಾಗ್ಯೂ ಕೆಲಸ ನೀಡದ ರಜೆ ಹಾಕುವ ಪದ್ದತಿಯನ್ನು ಕೈಬಿಡಬೇಕು. ಹಾಗೂ ಕೊರೊನ ಸಂಕಷ್ಟದ ಸ್ಥಿತಿಯಲ್ಲಿ ಹೆಚ್ಚು ಕೆಲಸದ ಒತ್ತಡವನ್ನು ಹೇರಬಾರದು.

ಕೆಲಸಕ್ಕೆ ಹಾಜರಿದ್ದರೂ ಕರ್ತವ್ಯ ನೀಡದ ಆಡಳಿತ ಮಂಡಳಿಯ ಕ್ರಮಕ್ಕೆ ಬದಲಾಗಿ ಚಾಲಕರು, ನಿರ್ವಾಹಕರ ವೈಯಕ್ತಿಕ ಖಾತೆಗಳ ರಜೆಗಳನ್ನು ಕಡಿತಗೊಳಿಸಬಾರದು. ಸಾರಿಗೆ ನೌಕರರಿಗೆ ಕ್ಯಾಂಟಿನ್ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ತುಮಕೂರು ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರಕುಮಾರ್‍ರವರಿಗೆ ಮನವಿ ಪತ್ರ ನೀಡಿದರು.

ಬೇಡಿಕೆಗಳ ಬಗ್ಗೆ ಕೂಲಂಕಷವಾಗಿ ಚರ್ಚಿಸಿದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಸಂಸ್ಥೆಯ ಕೇಂದ್ರ ಕಚೇರಿಯಿಂದ ಸಂಕಷ್ಟ ನಿರ್ವಹಣೆಯ ಸಂಬಂಧ ನಡೆಸುತ್ತಿರುವ ಪ್ರಯತ್ನಗಳ ಭಾಗವಾಗಿ ಬರುತ್ತಿರುವ ಸುತ್ತೋಲೆಗಳ ಅನ್ವಯ ಕೆಲಸ ನಿರ್ವಹಿಸುತ್ತಿರುವುದಾಗಿ ಇದು ಒಂದು ಆಕಸ್ಮಿಕ ಪರಿಸ್ಥಿತಿಯಾಗಿದ್ದು, ಯಾವುದೇ ಕೊರತೆಗಳಿದ್ದಲ್ಲಿ ನೌಕರರು ತಮ್ಮ ಗಮನಕ್ಕೆ ತಂದರೆ ತಕ್ಷಣವೇ ಪರಿಹರಿಸಲಾಗುವುದು ಎಂದರು.

ಚರ್ಚೆಯಲ್ಲಿ ವಿಭಾಗೀಯ ಟ್ರಾಫಿಕ್ ಕಂಟ್ರೋಲರ್ ಪ್ರಕೃದ್ದೀನ್, ಭದ್ರತಾ ಜಾಗೃತಿ ಅಧಿಕಾರಿ ಲಕ್ಷ್ಮಣ್ ಹಾಜರಿದ್ದರು. ಕರ್ನಾಕಟ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನೌಕರರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಸೈಯದ್ ಮುಜೀಬ್, ಜಿಲ್ಲಾಧ್ಯಕ್ಷ ಎ.ಆರ್. ದೇವರಾಜು, ಪ್ರಧಾನ ಕಾರ್ಯದರ್ಶಿ ಸಮೀವುಲ್ಲಾ, ಖಜಾಂಚಿ ರಾಜಣ್ಣ ಕೆ, ಉಪಾಧ್ಯಕ್ಷರಾದ ಪಿ.ಶಶಿಧರ್, ಸಂಘಟನಾ ಕಾರ್ಯದರ್ಶಿ ಜಿ.ರಮೇಶ್, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಹಾಜರಿದ್ದರು.

ಸಾರಿಗೆ ಸಿಬ್ಬಂದಿಯ ಅಹವಾಲು ಸಮಾಧಾನದಿಂದ ಆಲಿಸಿದ ಹಾಗೂ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿರುವ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಗಜೇಂದ್ರ ಕುಮಾರ್ ಅವರಿಗೆ ಸಂಘದ ಜಿಲ್ಲಾ ಸಮಿತಿಯು ಅಭಿನಂದಿಸಿದೆ.

Comment here