ತುಮಕೂರು ಲೈವ್

ಪರಿಶ್ರಮಕ್ಕೆ ಸರಿಸಮನಾದದ್ದು ಯಾವುದು ಇಲ್ಲ

ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ನಗರದ ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನ ವಿವೇಕಾನಂದ ಅಧ್ಯಯನ ಕೇಂದ್ರದ ಮೂಲಕ ಪ್ರಥಮ‌ ಪಿ ಯು ಸಿ ವಿದ್ಯಾರ್ಥಿಗಳಿಗಾಗಿ ” ಯುವಜನತೆಯ ಮುಂದಿರುವ ಸವಾಲುಗಳು ಎಂಬ ವಿಶೇಷ ಉಪನ್ಯಾಸವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕಾರರಾಗಿ ಡಾ. ವೀರೇಶಾನಂದ ಸರಸ್ವತಿ ಸ್ವಾಮೀಜಿ ಅವರು ಮಾತನಾಡಿದರು.

ಯುವಕರು ರಾಷ್ಟ್ರದ ಆಸ್ತಿ. ನಿಮ್ಮ ಪರಿಶ್ರಮಕ್ಕೆ ಸರಿಸಮನಾದದ್ದು ಯಾವುದು ಈ ಪ್ರಪಂಚದಲ್ಲಿಲ್ಲ. ಮಕ್ಕಳು ಆಯಾ ವಯಸ್ಸಿನ ಜವಾಬ್ದಾರಿಗಳನ್ನು ಅರಿತುಕೊಳ್ಳದೆ ಹೋದರೆ ನಮ್ಮ ಅಸ್ತಿತ್ವವು ಮನುಷ್ಯರೂಪದಲ್ಲಿರುವ ಒಂದು ಮೃಗದಂತಾಗುತ್ತದೆ. ಮಕ್ಕಳು ಏಕಾಗ್ರತೆ ಸಾಧಿಸಬೇಕು, ಸಮಯ ಪರಿಪಾಲನೆ ಮಾಡಬೇಕು ಮತ್ತು ಸ್ವಾವಲಂಬನೆಯ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು’ ಎಂದರು.

ದುಷ್ಚಟಗಳು ಪ್ರಾರಂಭದಲ್ಲಿ ಜೇಡರಬಲೆಯಂತೆ, ಕಾಲಕ್ರಮೇಣ ಅದು ಕಬ್ಬಿಣದ ಸರಪಳಿಯಂತಾಗುತ್ತದೆ. ನಿಮ್ಮನ್ನು ನೀವು ನಿಯಂತ್ರಿಸಿಕೊಳ್ಳದೆ ಸದಾ ಬಾಹ್ಯಶಕ್ತಿಗಳೇ ನಿಮ್ಮನ್ನು ನಿಯಂತ್ರಿಸಬೇಕು ಎಂದು ಬಯಸಿದರೆ ಅದು ವ್ಯಕ್ತಿತ್ವದ ಅಪರಿಪೂರ್ಣ ವಿಕಸನವಾಗುತ್ತದೆ’ ಎಂದು ಹೇಳಿದರು.

ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ ಬಸವರಾಜು ಬಿ ವಿ.ರವರು ಜ್ಯೋತಿ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕನ್ನಡ ವಿಭಾಗದ ಉಪನ್ಯಾಸಕರಾದ ಸಿದ್ದಲಿಂಗಯ್ಯ ಅವರು ಸ್ವಾಗತಿಸಿ ಪರಿಚಯಿಸಿದರು. ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕರಾದ ಗಂಗಾಧರ್ ಕೆ ವಿ ಅವರು ವಂದಿಸಿದರು.

ವಿವೇಕಾನಂದ ಅಧ್ಯಯನ ಕೇಂದ್ರದ ಸಂಯೋಜಕರು ಹಾಗೂ ಕನ್ನಡ ಉಪನ್ಯಾಸಕಿಯಾದ ಡಾ. ಶ್ವೇತಾರಾಣಿ ಹೆಚ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

Comment here