Uncategorized

ಪಾವಗಡ:ಸಂಕಾಪುರ ಸುವರ್ಚಲಾ ಆಂಜನೇಯ

ಆಂಜನೇಯಸ್ವಾಮಿ ಬ್ರಹ್ಮಚಾರಿ ಅಲ್ಲವೇ? ಆದರೆ ತುಮಕೂರು ಜಿಲ್ಲೆ ಪಾವಗಡ ತಾಲೂಕು ನಲಿಗಾನಹಳ್ಳಿ ಬಳಿಯ ಸಂಕಾಪುರದ ಸುವರ್ಚಲಾ ಆಂಜನೇಯ ಸ್ವಾಮಿ ದೇಗುಲದಲ್ಲಿ ಪ್ರತಿ ಜ್ಯೇಷ್ಠ ಮಾಸದಲ್ಲಿ ಆಂಜನೇಯ ಸ್ವಾಮಿಗೆ ಕಲ್ಯಾಣೋತ್ಸವ ನಡೆಯುತ್ತದೆ.

500 ವರ್ಷಕ್ಕೂ ಮೀರಿದ ಇತಿಹಾಸವಿರುವ ದೇಗುಲದ ವಿಗ್ರಹವನ್ನು ವ್ಯಾಸ ಮಹರ್ಷಿಗಳು ಪ್ರತಿಷ್ಠಾಪಿಸಿದ್ದಾರೆ ಎಂಬುದು ನಂಬಿಕೆ. ಇಲ್ಲಿನ ಗುಂಡ್ಲಹಳ್ಳಿ ದೊಡ್ಡ ಕೆರೆಗೆ ಸಂಬಂಧಿಸಿದ ಶಾಸನವೂ ಕೆಲ ಐತಿಹಾಸಿಕ ಕುರುಹುಗಳನ್ನು ನೀಡುತ್ತದೆ.

ಕೇರಳ, ತಮಿಳುನಾಡು ಸೇರಿದಂತೆ ಹಲ ಪ್ರದೇಶಗಳಿಂದ ದೇಗುಲಕ್ಕೆ ಭಕ್ತರು ವಿವಿಧ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಇಲ್ಲಿಗೆ ಬರುತ್ತಾರೆ. ಸಾಕಷ್ಟು ಪ್ರಚಾರ ಪಡೆಯದಿದ್ದರೂ ದೇಗುಲದ ಬಗ್ಗೆ ತಿಳಿದಿರುವ ಭಕ್ತಾದಿಗಳು ಮಂಗಳವಾರ, ಶನಿವಾರ, ಹುಣ್ಣಿಮೆ, ಅಮಾವಾಸ್ಯೆ ಹಾಗೂ ವಿಶೇಷ ದಿನಗಳಂದು ಹೆಚ್ಚಿನ ಸಂಖ್ಯೆಯಲ್ಲಿ ದೇಗುಲಕ್ಕೆ ಬರುತ್ತಾರೆ.

ಇಲ್ಲಿನ ಆಂಜನೇಯ ಸ್ವಾಮಿ ಹೆಸರೇ ಸುವರ್ಚಲಾ ಆಂಜನೇಯಸ್ವಾಮಿ. ಸುವರ್ಚಲಾ ದೇವಿ ಸೂರ್ಯ ಪುತ್ರಿ. ವಾಯು ಪುತ್ರ ಆಂಜನೇಯಸ್ವಾಮಿ. ಪರಾಶರ ಸಂಹಿತೆಯಲ್ಲಿ ಲೋಕ ಕಲ್ಯಾಣಕ್ಕಾಗಿ ಸುವರ್ಚಲಾ ದೇವಿ, ಆಂಜನೇಯಸ್ವಾಮಿ ಕಲ್ಯಾಣ ನಡೆಯುತ್ತದೆ. ವಿವಾಹವಾದರೂ ಆಂಜನೇಯಸ್ವಾಮಿ ಬ್ರಹ್ಮಚಾರಿಯಾಗಿಯೇ ಉಳಿಯುತ್ತಾರೆ. ಪುರಾಣಗಳು, ಪರಾಶರ ಸಂಹಿತೆಯಲ್ಲಿನ ಉಲ್ಲೇಖದ ಪ್ರಕಾರ ಜ್ಯೇಷ್ಠ ಮಾಸದ ನವಮಿಯಂದು ಸುವರ್ಚಲಾ ದೇವಿ ಹಾಗೂ ಆಂಜನೇಯಸ್ವಾಮಿ ಕಲ್ಯಾಣೋತ್ಸವ ಭಕ್ತಿಶ್ರದ್ಧೆಯಿಂದ ನಡೆಸಲಾಗುತ್ತದೆ.
ಸುವರ್ಚಲಾಆಂಜನೇಯಸ್ವಾಮಿ ರಥೋತ್ಸವ ವೈಶಾಖ ಮಾಸದ ದಶಮಿಯಂದು ಪರಿವಾರ ರಾಮ, ಸುವರ್ಚಲಾಆಂಜನೇಯಸ್ವಾಮಿ ರಥೋತ್ಸವ ನಡೆಯುತ್ತದೆ. ಉಳಿದಂತೆ ವಿಶೇಷ ದಿನಗಳಲ್ಲಿ ಪವಮಾನ, ಮನ್ಯುಸೂಕ್ತ ಹೋಮ, ಮೂಲ ಮಂತ್ರ ಇತ್ಯಾದಿ ಹೋಮ, ಹವನ, ವಿಶೇಷ ಪೂಜೆಗಳು ನಡೆಯುತ್ತವೆ. ಬೃಹತ್ ಗಾತ್ರದ ಮರ, ಗಿಡಗಳನ್ನೊಳಗೊಂಡ ಪ್ರಾಕೃತಿಕ ಸಂಪತ್ತು ದೇಗುಲದ ಸೊಬಗನ್ನು ಇಮ್ಮಡಿಗೊಳಿಸಿದೆ. ದೇಗುಲ ಪ್ರಾಂಗಣದಲ್ಲಿ ಸತ್ಯನಾರಾಯಣಸ್ವಾಮಿ, ಪರಿವಾರ ರಾಮ ದೇವರು, ಮಹಾಬಲೇಶ್ವರ, ಗಣಪತಿ, ದತ್ತಾತ್ರೇಯ, ಸುಬ್ರಹ್ಮಣ್ಯ, ನವಗ್ರಹ, ಶಾರಾದಾಂಬೆ, ಶಂಕರಾಚಾರ್ಯರು, ದೇವಿ ದೇಗುಲಗಳಿವೆ. ದೇಗುಲಕ್ಕೆ ಕಾಲಿಟ್ಟ ಕೂಡಲೇ ಹೊರ ಜಗತ್ತಿನ ಸುಃಖದುಃಖಗಳ ನೆನಪು ಅಳಿಸಿ, ಭಕ್ತಿ ಭಾವ ಮೂಡುತ್ತದೆ. ಪ್ರದೇಶದಲ್ಲಿ ಸಿಗುವ ತಣ್ಣನೆಯ ಶುದ್ಧ ಗಾಳಿ, ಮರಗಿಡಗಳನ್ನು ಹೊದ್ದಿರುವ ಹಸಿರು ಮನಸ್ಸನ್ನು ಪ್ರಫುಲ್ಲಗೊಳಿಸುತ್ತದೆ.
ಧರ್ಮಯ್ಯ ಅವರಿಗೆ ದೈವ ಪ್ರೇರಣೆ ದಶಕಗಳ ಹಿಂದೆ ದೇಗುಲವಿದ್ದ ಪ್ರದೇಶವು ಸೀಮೆ ಜಾಲಿಯಿಂದ ಆವೃತಗೊಂಡಿತ್ತು. ದೇಗುಲದ ಧರ್ಮಕರ್ತರಾದ ಧರ್ಮಯ್ಯ ಅವರಿಗೆ ಸೀಮೆ ಜಾಲಿಗಳ ನಡುವಲ್ಲಿ ಆಂಜನೇಯಸ್ವಾಮಿ ವಿಗ್ರಹ ಇರುವ ವಿಚಾರ ದೈವ ಪ್ರೇರಣೆಯಿಂದಲೇ ತಿಳಿಯಿತಂತೆ. ನಂತರ ಆಂಜನೇಯ ಸ್ವಾಮಿ ವಿಗ್ರಹವನ್ನು ಮಳೆ, ಬಿಸಿಲಿನಿಂದ ರಕ್ಷಿಸಲು ಗರಿಯ ಚಪ್ಪರ ಹಾಕಿಸಿ, ಮೂಲ ವಿಗ್ರಹಕ್ಕೆ ಮಂಟಪ ಕಟ್ಟಿಸಿ ಪೂಜೆ ಆರಂಭಿಸಲಾಯಿತು. ದೇಗುಲದ ಸಮೀಪದಲ್ಲಿಯೇ ಬಾವಿ ತೋಡಿಸಿ, ದೇವರಿಗೆ ಜಲಾಭಿಷೇಕಕ್ಕೆ ಏರ್ಪಾಡು ಮಾಡಲಾಯಿತು. ಕಾಲಾ ನಂತರ ದೇಗುಲ ಸಾಕಷ್ಟು ಅಭಿವೃದ್ಧಿಯಾಗಿದೆ.
ಮಾನಸಿಕ ಸಮಸ್ಯೆ ಇರುವವರಿಂದ ಭೇಟಿ ನೂರಾರು ವರ್ಷಗಳ ಆಂಜನೇಯ ವಿಗ್ರಹಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸಲು ಧರ್ಮಯ್ಯ ಕುಟುಂಬದವರು ಕಟಿಬದ್ಧರಾಗಿದ್ದಾರೆ. ಧರ್ಮಯ್ಯ ಅವರು ತೀರಿಕೊಂಡ ನಂತರ ಅವರ ಮಗ ಎಂ.ಡಿ. ಅನಿಲ್ ಕಮಾರ್, ಸಹೋದರ, ಸಹೋದರಿಯರು ದೇವಸ್ಥಾನದ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದಾರೆ. ದೇಗುಲದ ಬಳಿ ಹಸುಗಳನ್ನು ಸಾಕಿದ್ದು, ಪುಟ್ಟ ಗೋಶಾಲೆಯನ್ನು ನಿರ್ವಹಿಸಲಾಗುತ್ತಿದೆ. ದೇಗುಲಕ್ಕೆ ಕೇರಳ, ತಮಿಳುನಾಡು, ಬೆಂಗಳೂರು, ತುಮಕೂರಿನಿಂದ ಮಾನಸಿಕ ಸಮಸ್ಯೆ ಇರುವವರು ಭೇಟಿ ನೀಡುತ್ತಾರೆ. ಅವರ ನಂಬಿಕೆ ಪ್ರಕಾರ ದೇಗುಲಕ್ಕೆ ಭೇಟಿ ನೀಡಿದರೆ ಸಮಸ್ಯೆ ಬಗೆಹರಿಯುತ್ತದೆ.

ಮಧ್ಯರಾತ್ರಿ ವೇಳೆ ಗಂಟೆಜಾಗಟೆ ಸದ್ದು ಕೇಳುತ್ತದಂತೆ ಇನ್ನು ಗ್ರಹ ಚೇಷ್ಟೆಯಿಂದ ಬಳಲುತ್ತಿರುವವರು ಗ್ರಹ ಚೇಷ್ಟೆ ಬಿಡುಗಡೆ ವೇಳೆಯಲ್ಲಿ ದೇಗುಲ ಮುಂಭಾಗದ ವೃಕ್ಷಕ್ಕೆ ಕೈ, ತಲೆಯಿಂದ ಮೊಳೆ ಹೊಡೆಯುವುದನ್ನು ಪ್ರತ್ಯಕ್ಷವಾಗಿ ಕಾಣಬಹುದು. ಮಧ್ಯ ರಾತ್ರಿಯ ವೇಳೆ ದೇಗುಲದಲ್ಲಿ ಗಂಟೆಜಾಗಟೆ ಸದ್ದು ಕೇಳಿಸುತ್ತದೆ ಎಂದು ಕೆಲವರು ಹೇಳುತ್ತಾರೆ. ಈಗಲೂ ಋಷಿಮುನಿ ಸಂಚಾರ ಪ್ರದೇಶದಲ್ಲಿ ಇದೆ ಎಂದು ಹೇಳಲಾಗುತ್ತದೆ. ಇವೆಲ್ಲ ಅವರವರ ಅನುಭವ ಆದರೂ ಬ್ರಹ್ಮಚಾರಿ ಆಂಜನೇಯನಿಗೆ ಕಲ್ಯಾಣೋತ್ಸವ ಎಂಬುದು ಅಚ್ಚರಿಯ ಸಂಗತಿ.

Comment here