ತುಮಕೂರ್ ಲೈವ್

ಪೌರತ್ವ ತಿದ್ದುಪಡಿ ಕಾಯ್ದೆ: ತುಮಕೂರಿನಲ್ಲಿ ಪ್ರತಿಭಟನೆ

Publicstory. In


ತುಮಕೂರು; ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆಯಬೇಕೆಂದು ಆಗ್ರಹಿಸಿ ತುಮಕೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಟೌನ್ ಹಾಲ್ ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಎನ್ಆರ್ಸಿ ಮತ್ತು ಸಿಎಎ ಯಿಂದ ಅಜಾದಿ ಬೇಕೆಂದು ಘೋಷಣೆ ಕೂಗಿದರು.

ಪ್ರಗತಿಪರ ನಾಗರಿಕ ಸಂಘಟನೆಗಳ ಒಕ್ಕೂಟ, ದಲಿತಪರ ಸಂಘಟನೆಗಳು ಮತ್ತು ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿ ಕೇಂದ್ರ ಸಿಎಎ ಕಾಯ್ದೆ ಜಾರಿಯ ಮೂಲಕ ದೇಶವನ್ನು ಒಡೆಯುವ ಕೆಲಸಕ್ಕೆ ಕೈಹಾಕಿದೆ ಎಂದು ದೂರಿದರು.

ಜಿಲ್ಲಾಧಿಕಾರಿಗಳ ಕಚೇರಿ ಮುಂದಿನ ಆವರಣ ಪೂರ್ತಿ ಪ್ರತಿಭಟನಾಕಾರರಿಂದ ತುಂಬಿ ಹೋಗಿತ್ತು. ಅಜಾದಿ ಘೋಷಣೆಗಳನ್ನು ಕೂಗುತ್ತಿದ್ದ ಪ್ರತಿಭನಾಕಾರರು ಸಂವಿಧಾನ ವಿರೋಧಿ, ಜನವಿರೋಧಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಪೌರತ್ವ ನೋಂದಣಿ ಕಾಯ್ದೆ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಗಳು ಸಂವಿಧಾನದ ಆಶಯಗಳಿಗೆ ವಿರುದ್ದವಾಗಿವೆ. ಸಂವಿಧಾನದ ಆರ್ಟಿಕಲ್ 14 ಮತ್ತು 21ನ್ನು ಉಲ್ಲಂಘಿಸುತ್ತವೆ. ಇದೊಂದು ಅಪಾಯಕಾರಿ ಬೆಳವಣಿಗೆ ಸಮಾಜವನ್ನು ಛಿದ್ರಗೊಳಿಸಲು ಬಿಜೆಪಿ ಯತ್ನಿಸುತ್ತಿದೆ. ಸರ್ಕಾರವೇ ಸಂವಿಧಾನ ಉಲ್ಲಂಘನೆ ಮಾಡುತ್ತಿದೆ ಎಂದು ಧರಣಿ ನಿರತರು ಆರೋಪಿಸಿದರು.

ಧರಣಿಯಲ್ಲಿ ರಾಷ್ಟ್ರಗೀತೆಯನ್ನು ಹಾಡಲಾಯಿತು. ಎಲ್ಲರೂ ಎದ್ದು ನಿಂತು ರಾಷ್ಟ್ರಗೀತೆ ಹಾಡಿದರು. ಕೊನೆಯಲ್ಲಿ ಭಾರತಕ್ಕೆ ಜಯವಾಗಲಿ ಘೋಷಣೆಗಳು ಮೊಳಗಿದವು. ಪೊಲೀಸರು ಕೂಡ ರಾಷ್ಟ್ರಗೀತೆಗೆ ಗೌರವ ಸೂಚಿಸಿದರು. ನಂತರ ನಗುತ್ತಿದ್ದ ದೃಶ್ಯ ಕಂಡು ಬಂತು.

ಜಿಲ್ಲಾಧಿಕಾರಿ ಕಚೇರಿ ಎದುರಿನ ಜಾಗ ಪೂರ್ತಿ ಜನಸಾಗರದಿಂದ ತುಂಬಿ ಹೋಗಿತ್ತು. ಹೀಗಾಗಿ ಜಿಲ್ಲಾಧಿಕಾರಿ ಕಚೇರಿ ಭಾಗದಲ್ಲಿ ವಾಹನಗಳ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿತ್ತು. ಸ್ವಯಂ ಸೇವಕರು ಪ್ರತಿಭಟನಾಕಾರರನ್ನು ಶಿಸ್ತಿನಿಂದ ಕೂರುವಂತೆ ಹೇಳುತ್ತಿದ್ದ ದೃಶ್ಯವೂ ಕಂಡುಬಂತು. ಜಿಲ್ಲಾಧಿಕಾರಿಗಳ ಕಚೇರಿಗೂ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹಾಕಲಾಗಿತ್ತು. ಪೊಲೀಸರು ಜಿಲ್ಲಾಧಿಕಾರಿ ಕಚೇರಿಗೆ ಪ್ರವೇಶಿಸುವ ಪ್ರತಿಯೊಬ್ಬ ಅಧಿಕಾರಿಗಳ ಗುರುತಿನ ಚೀಟಿ ನೋಡಿದ ಮೇಲೆಯೇ ಅವರನ್ನು ಒಳಬಿಡುತ್ತಿದ್ದರು.

ಪ್ರತಿಭಟನೆಯಲ್ಲಿ ವಕೀಲರು, ವಿದ್ಯಾರ್ಥಿಗಳು, ಯುವಜನರು ಸೇರಿದಂತೆ ಸಹಸ್ರಾರು ಜನ ಸೇರಿದ್ದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಮಾತನಾಡಿದ ಮುಖಂಡರು ಸಿಎಎ ಮತ್ತು ಎನ್ಆರ್ ಸಿ ಧರ್ಮದ ಆಧಾರದ ಮೇಲೆ ದೇಶವನ್ನು ಒಡೆಯುವ ಉದ್ದೇಶವನ್ನು ಹೊಂದಿದೆ. ಯಾವುದೇ ಕಾರಣಕ್ಕೂ ಇವುಗಳನ್ನು ದೇಶದಲ್ಲಿ ಜಾರಿಗೊಳಿಸಬಾರದು. ಕೇಂದ್ರ ಸರ್ಕಾರ ಇವುಗಳ ಜಾರಿಗೆ ಮುಂದಾದರೆ ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.

ಸಿಎಎ ಮತ್ತು ಎನ್ಆರ್ಸಿ ಬಗ್ಗೆ ವಿಶ್ವದಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ನಿವೃತ್ತ ನ್ಯಾಯಮೂರ್ತಿಗಳು ಸಹ ಈ ಕಾಯ್ದೆಗಳು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿವೆ. ಹಾಗಾಗಿ ಜಾರಿ ಮಾಡಬಾರದೆಂದು ಹೇಳುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಸಮಾಜವನ್ನು ಒಡೆಯುವ ಕೆಲಸದಲ್ಲಿ ನಿರತವಾಗಿದೆ ಎಂದು ದೂರಿದರು.

ಪ್ರತಿಭಟನೆಯಲ್ಲಿ ಜನಪರ ಚಿಂತಕೆ ಕೆ.ದೊರೈರಾಜ್, ಪರಿಸರವಾದಿ ಸಿ.ಯತಿರಾಜು, ಮಾಜಿ ಶಾಸಕರಾದ ಷಫೀ ಅಹಮದ್, ರಪೀಕ್ ಅಹಮದ್, ಮುಖಂಡರಾದ ಪಿ.ಎನ್.ರಾಮಯ್ಯ, ಎ.ನರಸಿಂಹಮೂರ್ತಿ, ಸೈಯದ್ ಮುಜೀಬ್, ಬಿ.ಉಮೇಶ್, ನಿಸಾರ್ ಅಹಮದ್, ಉಬೇದ್ ಅಹಮದ್, ಬಿ.ಎಸ್. ಮಂಜುನಾಥ್, ಶಕೀಲ್, ಇನಾಯತ್, ಮುಕ್ತಿಯಾರ್, ಇಸ್ಮಾಯಿಲ್, ಷಫೀ, ಜಾಕೀರ್ ಹುಸೇನ್, ಬೆಳ್ಳಿ ಲೋಕೇಶ್, ಎನ್.ಕೆ.ಸುಬ್ರಮಣ್ಯ ಮೊದಲಾದವರು ಹಾಜರಿದ್ದರು.

Comment here