ಜನಮನ

ಬಾಲ್ಯವೇ ನೀ ಮತ್ತೊಮ್ಮೆ ಬಂದುಬಿಡು…

ಚಿದು


ಆಟಿಕೆಗೂ ಬರವಿತ್ತು,ಆಟ ಸಾಗುತಲಿತ್ತು! ಮೋರಿಯ ನೀರಲ್ಲೂ ದೋಣಿಯಾಟವಿತ್ತು.

ಅಪ್ಪ ಹಬ್ಬಕ್ಕೆ ಕೊಡಿಸುತ್ತಿದ್ದ ಬಟ್ಟೆಯಿತ್ತು. ಸಂಬಂಧ ಬೆಸೆಯುವ ಆತ್ಮೀಯ ಭೇಟಿಗಳಿತ್ತು.

ಹೂಂಗುಟ್ಟುತ್ತಾ ಮಲಗಲು ಅಜ್ಜಿಯ ಕತೆಯಿತ್ತು!
ಒಂದೇ ಹಲಸನ್ನು ಹಂಚಿ ತಿನ್ನುವ ಹಳಸದ
ಸಂಬಂಧಗಳಿತ್ತು!

ತುಟಿ ಕೆಂಪಾಗಿಸುತಿದ್ದ ಪೆಪ್ಪರ್ಮೆಂಟಿತ್ತು.
ಕೈಗೆ ಕಟ್ಟಲು ತೆಂಗಿನಗರಿಯ
ಕೈ ಗಡಿಯಾರವಿತ್ತು.

ಮಳೆಗಾಲದಲ್ಲಿ ಹರಿದ ಛತ್ರಿಯಿತ್ತು.
ನೆನೆದು ಒದ್ದೆಯಾಗುವ ಹುಚ್ಚುತನವಿತ್ತು.

ಜ್ವರ ಬಂದರೆ ರಜೆಯೆಂಬ ಖುಷಿಯಿತ್ತು.
ಜ್ವರದ ರಾತ್ರಿಗಳಲಿ ಅಮ್ಮನ ಕಾವಲು ಇತ್ತು.

ಶಾಲೆಯಲ್ಲಿ ಮಾತನಾಡಲು ಕ್ಲಾಸ್ ಲೀಡರ್ ಭಯವಿತ್ತು.
ಖುಷಿಕೊಡುತ್ತಿದ್ದ ಲಾಂಗ್-ಬೆಲ್ ಇತ್ತು.

ಚೀಲದಲ್ಲಿ ಬಣ್ಣದ ಬಳಪವಿತ್ತು.
ಮತ್ತೆ ಮತ್ತೆ ತಪ್ಪುತ್ತಿದ್ದ ಉಕ್ತಲೇಖನವಿತ್ತು.

ಕಣ್ಣೀರು ತರಿಸುವ ರೋಗ ನಿರೋಧಕ ಚುಚ್ಚುಮದ್ದು ಇತ್ತು.
ತರಗತಿಯಲ್ಲಿ ಮಾಡಿದ ತಪ್ಪಿಗೆ ಮೈದಾನ ಸುತ್ತುವ ಶಿಕ್ಷೆ ಇತ್ತು.

ಏನೂ ಇಲ್ಲ ಎನ್ನುತ್ತಿದ್ದ ನನಗೆ ಆಗ ಎಲ್ಲವೂ ಇತ್ತು.
ಎಲ್ಲಕ್ಕೂ ಮಿಗಿಲಾದ ಮುಗ್ಧತೆಯಿತ್ತು!!.

ಓ ಬಾಲ್ಯವೇ…
ನೀ ಮತ್ತೆ ಬಂದುಬಿಡು…
ನನ್ನ ಮತ್ತೆ .. ಮಗುವಾಗಿಸು..

Comment here