ತುಮಕೂರು ಲೈವ್

ಬಿಜೆಪಿ ಶಾಸಕರ ಕೈಗೊಂಬೆಯಂತೆ ಕೆಲಸ ಮಾಡುವ ತಹಶೀಲ್ದಾರ್

Publicstory


ತುರುವೇಕೆರೆ: ತಾಲ್ಲೂಕಿನ ಗ್ರಾಮ ಪಂಚಾಯಿತಿ ಚುನಾವಣಾ ಮೀಸಲಾತಿ ಪಟ್ಟಿಯನ್ನು ಬಿಜೆಪಿಗೆ ಪೂರಕವಾಗಿ ತಹಶೀಲ್ದಾರ್ ಸಿದ್ದಪಡಿಸಿದ್ದಾರೆಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್ ನೇರ ಆರೋಪ ಮಾಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡುತ್ತಾ,
ಈಗಗಾಲೇ ತಾಲ್ಲೂಕಿನ 27 ಗ್ರಾಮ ಪಂಚಾಯಿತಿಗಳ ಸದಸ್ಯರ ಚುನಾವಣಾ ಮೀಸಲಾತಿ ಪಟ್ಟಿಯನ್ನು ಸರ್ಕಾರ ಹೊರಡಿಸಿದೆ. ಈ ಪಟ್ಟಿಯು ಸಂಪೂರ್ಣವಾಗಿ ಪೂರ್ವಾಗ್ರಹದಿಂದ ಕೂಡಿದ್ದು ಬಿಜೆಪಿಯು ತಾಲ್ಲೂಕು ಆಡಳಿತವನ್ನು ಬಳಸಿಕೊಂಡು ತನಗೆ ಅನುಕೂಲವಾಗುವಂತೆ ಮೀಸಲಾತಿಯನ್ನು ನೋಡಿಕೊಳ್ಳಲಾಗಿದೆ.

ಗ್ರಾ.ಪಂ ಚುನಾವಣಾ ಪಟ್ಟಿಯಲ್ಲೇ ಹೀಗೆ ಪಾರದರ್ಶಕತೆ ಇಲ್ಲವಾದರೆ ಇನ್ನು ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳ ಪಟ್ಟಿ ನ್ಯಾಯಯುತವಾಗಿರುತ್ತದೆಯೇ ಎಂದು ಪ್ರಶ್ನಿಸಿದರು.

ಭೈತರಹೊಸಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾಮಾನ್ಯ ವರ್ಗ ಜನರಿದ್ದಾರೆ ಆದರೆ ಅಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ನೀಡಲಾಗಿದೆ. ಬಾಣಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಣಿಕೇನಹಳ್ಳಿ ಬ್ಲಾಕ್ ಒಂದರಲ್ಲಿ ಬಿಸಿಎಂಎಗೆ ಮಾತ್ರವೇ ನೀಡಿದ್ದು ಹೆಚ್ಚಿನ ಸಂಖ್ಯೆಯಲ್ಲಿರುವ ಸಾಮಾನ್ಯ ವರ್ಗವನ್ನು ಕಡೆಗಣಿಸಲಾಗಿದೆ.

ದಬ್ಬೇಘಟ್ಟ ಪಂಚಾಯಿತಿ ವ್ಯಾಪ್ತಿಯ ಹೊಡಕೇಘಟ್ಟ ಗ್ರಾಮದಲ್ಲಿ ಕೇವಲ ಸಾಮಾನ್ಯ ವರ್ಗಕ್ಕೇ ಆದ್ಯತೆ ನೀಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡವನ್ನು ಕಡೆಗಣಿಸಲಾಗಿದೆ. ಸೋಮಲಾಪುರದಲ್ಲೂ ಬಿಸಿಎಂಎಗೆ ಇದುವರೆವಿಗೂ ಅವಕಾಶವೇ ನೀಡಲಾಗಿಲ್ಲ. ಹೀಗೆ ತಾಲ್ಲೂಕಿನಾದ್ಯಂತ ಮೀಸಲಾತಿಯಲ್ಲಿ ಲೋಪದೋಷಗಳಿವೆ‌‌ ಎಂದು ಆರೋಪಿಸಿದರು.

ತಾಲ್ಲೂಕಿನ ಯಾವ ಭಾಗದಲ್ಲಿ ಜೆಡಿಎಸ್ ಪ್ರಭಾವವಿದೆಯೋ ಅಲ್ಲೆಲ್ಲಾ ಸಾಮಾನ್ಯ ವರ್ಗದ ಮೀಸಲಾತಿ ಇಲ್ಲದಂತೆ ನೋಡಿಕೊಳ್ಳಲಾಗಿದೆ. ಕೆಲವು ಪಂಚಾಯಿತಿಗಳಲ್ಲಿ ಮೀಸಲಾತಿಯನ್ನು ಬದಲಾವಣೆ ಮಾಡದೆ ಯಥಾಸ್ಥಿತಿಯಲ್ಲೇ ಮಾಡಿದೆ.
ತಹಶೀಲ್ದಾರ್ ಅವರು ಬಿಜೆಪಿ ಶಾಸಕರ ಕೈಗೊಂಬೆಯಾಗಿ ಮೀಸಲಾತಿ ಪಟ್ಟಿ ತಯಾರಿಸಿದ್ದಾರೆ ಎಂದು ದೂರಿದರು.

ತಾಲ್ಲೂಕು ಕಚೇರಿ ಸೇರಿದಂತೆ ತಾಲ್ಲೂಕು ಆಡಳಿತ ನಿರ್ವಹಣೆ ಮಾಡುವಲ್ಲಿ ವಿಫಲರಾಗಿದ್ದು ಕೇವಲ ಉಸ್ತವ ಮೂರ್ತಿಯಂತೆ ಕೆಲಸ ಮಾಡುತ್ತಿದ್ದಾರೆಂದು ಗಂಭೀರ ಆರೋಪ ಮಾಡಿದರು.

ಗ್ರಾಮಪಂಚಾಯಿತಿಗಳ ಚುನಾವಣಾ ಮೀಸಲಾತಿ ಪಟ್ಟಿ ಬಿಜೆಪಿ ಪರವಾಗಿರುವ ಬಗ್ಗೆ ಜೆಡಿಎಸ್ ವರಿಷ್ಟರಾ್ ಎಚ್.ಡಿ.ದೇವೇಗೌಡರು ಹಾಗು ಕುಮಾರ ಸ್ವಾಮಿಯವರು ಆಕ್ಷೇಪ ವ್ಯಕ್ತಪಡಿಸಿದ್ದು ಅವರು ಸೂಚನೆ ನೀಡಿದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಲು ಸಿದ್ದವೆಂದು ಎಚ್ಚರಿಸಿದರು.

ಸುದ್ದಿ ಗೋಷ್ಠಿಯಲ್ಲಿ ಕೊಳಾಲ ಗಂಗಾಧರ್, ವಿಜಯೇಂದ್ರ, ವೆಂಕಟಾಪುರಯೋಗೀಶ್, ಕುಶಾಲ್ಕುಮಾರ್, ಜಫ್ರುಲ್ಲಾ, ರಾಮಚಂದ್ರು ಇದ್ದರು.

Comment here