Publicstory. in
ತುಮಕೂರು: ತಾಲ್ಲೂಕಿನ ಬೆಳಗುಂಬದ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಕೊರೊನಾ ಸಂಬಂಧಿಸಿದ ವ್ಯಕ್ತಿಗಳಿಗೆ ಕ್ವಾರಂಟೈನ್ ಗೆ ಬಳಸಿಕೊಳ್ಳಬಾರದು ಎಂದು ಗ್ರಾಮ ಪಂಚಾಯತಿ ಸದಸ್ಯ ಬೆಳಗುಂಬ ವೆಂಕಟೇಶ್ ಒತ್ತಾಯಿಸಿದ್ದಾರೆ.
ತುಮಕೂರು ತಾಲ್ಲೂಕು ಬೆಳಗುಂಬ ಗ್ರಾಮವು ತುಮಕೂರು ನಗರಕ್ಕೆ ಹೊಂದಿಕೊಂಡಿದ್ದು, ಇದು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತದೆ. ಈವರೆಗೂ ಈ ಗ್ರಾಮವು ಕೊರೊನಾ ಆತಂಕದಿಂದ ಮುಕ್ತವಾಗಿದ್ದು, ಇಲ್ಲಿನ ಗ್ರಾಮಸ್ಥರು ನಿಶ್ಚಿಂತರಾಗಿದ್ದಾರೆ. ಸರ್ಕಾರದ ಕ್ರಮಗಳು ಮತ್ತು ಗ್ರಾಮಸ್ಥರ ಸಹಕಾರ ಇದಕ್ಕೆ ಕಾರಣವಾಗಿದೆ ಎಂದು ಜಿಲ್ಲಾಧಿಕಾರಿ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ದಿನಾಂಕ 08-05-2020, ಶುಕ್ರವಾರ ರಾತ್ರಿಯಿಂದ ಇದ್ದಕ್ಕಿದ್ದಂತೆ ಬೆಳಗುಂಬ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. ಇಲ್ಲಿ ಕ್ವಾರಂಟೈನ್ ಮಾಡಲಾಗುತ್ತದೆ ಎಂಬ ಸುದ್ದಿ ಹಬ್ಬಿದೆ.
ಬೆಳಗುಂಬ ಗ್ರಾಮದ ಒಳಭಾಗದಲ್ಲೇ ಇರುವ ಹಾಗೂ ಸುತ್ತಲೂ ವಾಸದ ಮನೆಗಳನ್ನು ಹೊಂದಿರುವ ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕೊರೊನಾ ಸಂಬಂಧಿತ ವ್ಯಕ್ತಿಗಳಿಗೆ ಕ್ವಾರಂಟೈನ್ ಮಾಡಲು ವ್ಯವಸ್ಥೆ ಮಾಡಲಾಗುವುದೆಂಬ ವದಂತಿ ದಟ್ಟವಾಗಿ ಹಬ್ಬಿದ್ದು, ಇದು ಸ್ಥಳೀಯ ಗ್ರಾಮಸ್ಥರನ್ನು ತೀವ್ರವಾದ ಆತಂಕಕ್ಕೆ ತಳ್ಳಿದೆ ಎಂದು ತಿಳಿಸಿದ್ದಾರೆ.
ಈವರೆಗೆ ಈ ಗ್ರಾಮವು ಯಾವುದೇ ಸೋಂಕಿಲ್ಲದೆ, ಇಲ್ಲಿನ ಜನರು ಸುರಕ್ಷಿತವಾಗಿದ್ದಾರೆ. ಆದರೆ ಈಗ ಗ್ರಾಮದ ಮಧ್ಯೆ ಇರುವ ಈ ಶಾಲೆಯನ್ನು ಕ್ವಾರಂಟೈನ್ ಗೆ ಬಳಸಿಕೊಂಡರೆ, ಈ ಗ್ರಾಮದಲ್ಲಿ ಕೊರೊನಾ ಸೋಂಕು ಹರಡಬಹುದೆಂಬ ಭೀತಿ ಗ್ರಾಮಸ್ಥರನ್ನು ಕಾಡತೊಡಗಿದೆ ಎಂದು ವಿವರಿಸಿದ್ದಾರೆ.
ಬೆಳಗುಂಬ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಯಾವುದೇ ಕಾರಣಕ್ಕೂ ಕ್ವಾರಂಟೈನ್ ಗೆ ಬಳಸಬಾರದೆಂಬುದು ಬೆಳಗುಂಬ ಗ್ರಾಮಸ್ಥರ ಒಕ್ಕೊರಲ ಬೇಡಿಕೆಯಾಗಿದೆ. ಆದ್ದರಿಂದ ದಯವಿಟ್ಟು ತಾವು ಈ ಬಗ್ಗೆ ವಿಶೇಷ ಗಮನವನ್ನು ನೀಡಿ, ಬೆಳಗುಂಬ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಕ್ವಾರಂಟೈನ್ ಗೆ ಉಪಯೋಗಿಸಿಕೊಳ್ಳಬಾರದೆಂದು ತಮ್ಮಲ್ಲಿ ಕಳಕಳಿಯಿಂದ ಗ್ರಾಮಸ್ಥರ ಪರವಾಗಿ ವಿನಂತಿಸಿಕೊಳ್ಳುತ್ತಿದ್ದೇನೆ ಎಂದು ಮನವಿ ಪತ್ರದಲ್ಲಿ ಹೇಳಿದ್ದಾರೆ.
Comment here