ಭಾನುವಾರದ ಕವಿತೆ

ಭಾನುವಾರದ ಕವನ: ಏಳಲೇಬೇಕು

ಬದುಕು ಯಾವತ್ತೂ ಸ್ವಾತಂತ್ರದಿಂದ ಕೂಡಿಲ್ಲ. ಇಷ್ಟವಿದೆಯೋ, ಇಲ್ಲವೋ ಅನಿವಾರ್ಯತೆಗೆ ಸಿಲುಕಿಬಿಡುತ್ತದೆ. ಒಬ್ಬರಿಗೊಬ್ಬರು, ಒಂದಕ್ಕೊಂದು ಸಂಬಂಧದ ಜಟಿಲತೆಯೇ ಬದುಕು.
ಧೀಮತಿ ಅವರು ಬರೆದಿರುವ ಈ ಕವನ ಬೆಳಿಗಿನ ಜಾವದ ಕನವರಿಕೆಯಂತೆ ಭಾವಿಸಿಕೊಂಡರೂ ಅದು ಬದುಕಿನಾಳವನ್ನು ತೆರೆದಿಟ್ಟಿದೆ.

ಏಳಲೇಬೇಕು

ಬೆಳಗ್ಗಿನ ಮರು ನಿದ್ರೆ
ಬಲು ಮತ್ತು

ರಾತ್ರಿ ಕಂಡ ಕನಸುಗಳ
ಮಸುಕು ನೆನಪು

ನಿಜವೊ ಸ್ವಪ್ನವೋ
ಅರಿಯದ ಗಳಿಗೆ

ಎಲ್ಲೊ ರಸ್ತೆಯಲ್ಲಿ
ಸ್ಕೂಟಿ ಸದ್ದು

ಕೆಲಸದವಳ ಪಾತ್ರೆ
ತೊಳೆಯುವ ಶಬ್ದ

ಅಮ್ಮ ಬೇಗೆದ್ದು
ಕೂಗಿಸಿದ ಕುಕ್ಕರ್

ಹೂವಿನವಳ
ಹೂ ದನಿ

ಅಂಗಳದಲ್ಲಿ ಬಿದ್ದಿರುವ
ಪೇಪರ್

ಸಂಪು ತುಂಬಿ ಹರಿದು
ಹೋಗುತ್ತಿರುವ ನೀರು

ಕೈ ತಾಗಿದರೆ ಪಕ್ಕದಲ್ಲೆ
ಮಿನುಗಿದ ಮೊಬೈಲ್

ಏಳಲೇ ಬೇಕು
ಗಂಟೆ ಏಳಕ್ಕಾದರೂ

ಎಲ್ಲರೂ ಎದ್ದು ತಮ್ಮ
ಕೆಲಸ ಶುರು ಮಾಡಿರುವುದಕ್ಕಾಗಿ

ಅರೆ ಬರೆ ನಿದ್ರೆ…
ಸೋರಿದ ಕಟವಾಯಿ

ರಜಾಯಿಯ ಮೆತ್ತೆ
ದಿಂಬಿನ ಗೌರಿ ಮಲ್ಲಿಗೆಯ ಗಮ

ಎಲ್ಲವ ಬಿಟ್ಟು ಏಳಲೇ ಬೇಕು
ಎಲ್ಲರೂ ಎದ್ದಿರುವುದಕ್ಕಾಗಿ

ಏನಿಲ್ಲವೆಂದರೂ
ಬೆಳಗಿನ ಕಾಫಿಗಾಗಿ

ಬದುಕಿದ್ದೇನೆ
ಎಂದು ತೋರಿಸಲಿಕ್ಕಾಗಿ.


ಧೀಮತಿ

Comment here