ತುಮಕೂರು ಲೈವ್

ಭಾರತ ಬಂದ್ ಗೆ ತಿಪಟೂರಿನಲ್ಲಿ ಬೆಂಬಲ

Publicstory. in


Tipturu: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಿ ನಾಳೆ ನಡೆಯುತ್ತಿರುವ ಭಾರತ ಬಂದ್ ಗೆ ತಿಪಟೂರಿನ ತಾಲ್ಲೂಕಿನ ತಹಸಿಲ್ದಾರ್ ಕಛೇರಿಯ ಮುಂದೆ ಪ್ರತಿಭಟನೆ ಧರಣಿ ನಡೆಸಲಾಗುವುದು ಎಂದು ರೈತ ಸಂಘಟನೆಗಳು ತಿಳಿಸಿವೆ.ಕರೋನಾ ಲಾಕ್ಡೌನ್ ನಿಂದ ರೈತರು
ತತ್ತರಿಸಿ ಹೋಗಿದ್ದು ರೈತರ ಮತ್ತು ಕಾರ್ಮಿಕರ ಬದುಕು ದುಸ್ತರವಾಗಿರುವ ಈ ಸಂದರ್ಭದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರೈತ ಮತ್ತು ವಿರೋಧಿ ನೀತಿಗಳನ್ನು ತಂದಿರುವುದು ನಿಜಕ್ಕೂ ಅಮಾನವೀಯವಾದ ನಡೆ ಎಂದು ಕಿಡಿಕಾರಿವೆ.

ಇಂತಹ ನೀತಿಗಳನ್ನು ಖಂಡಿಸಿ ದೇಶದ ರಾಜಧಾನಿ ದೆಹಲಿಯಲ್ಲಿ ರೈತರ ಬೃಹತ್ ಪ್ರತಿಭಟನೆಗಳು ನಡೆಯುತ್ತಿದೆ. ಕೊರೆಯುವ ಚಳಿಯನ್ನು ಲೆಕ್ಕಿಸದೆ ಲಕ್ಷಾಂತರ ರೈತರು ದೆಹಲಿಯಲ್ಲಿ ಅನಿರ್ದಿಷ್ಟ ಮುಷ್ಕರಕ್ಕೆ ಹೂಡಿದ್ದಾರೆ. ಇಂತಹ ಐತಿಹಾಸಿಕ ಹೋರಾಟದಲ್ಲಿ ಬೇರೆ ಬೇರೆ ದೇಶದ ರೈತರು ಸಹ ತಮ್ಮ ಬೆಂಬಲವನ್ನು ಈ ಹೋರಾಟಕ್ಕೆ ವ್ಯಕ್ತಪಡಿಸಿದ್ದಾರೆ.ಕೇಂದ್ರ ಸರ್ಕಾರ ರೈತರ ಹೋರಾಟವನ್ನು ಹತ್ತಿಕ್ಕಲು ಇನ್ನಿಲ್ಲದ ಬಲ ಪ್ರಯೋಗವನ್ನು ಮಾಡುತ್ತಾ ಬಂದಿರುವುದನ್ನು ಪ್ರಪಂಚದ ಮೂಲೆಮೂಲೆಗಳಿಂದ ಚಿಂತನಶೀಲ ಜನತೆ ಖಂಡಿಸಿದ್ದಾರೆ. ಕೇಂದ್ರ ಸರ್ಕಾರ ತಂದಿರುವ ಎಲ್ಲಾ ರೈತ ವಿರೋಧಿ ನೀತಿಗಳನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸಿದ ದಿನದಿಂದಲೂ ಈ ಹೋರಾಟ ಬೆಳೆದು ಬಂದಿದೆ.ರೈತರು ಬೆಳೆದ ಬೆಳೆಗೆ ಕನಿಷ್ಠ ಮೌಲ್ಯವನ್ನು ಖಾತರಿಪಡಿಸದ, ಸರ್ಕಾರಿ ನಿಯಂತ್ರಿತ ಮಾರುಕಟ್ಟೆಯನ್ನು ಸರ್ವನಾಶ ಮಾಡಿ ಕಾರ್ಪೊರೇಟ್ ಕಂಪನಿಗಳ ಹಿಡಿತಕ್ಕೆ ಅನುವು ಮಾಡಿಕೊಡುವಂತಹ ರೈತ ವಿರೋಧಿ ಬಂಡವಾಳಶಾಹಿ ಪರ ನೀತಿಗಳ ವಿರುದ್ಧ ಸತತ ಹೋರಾಟ ಬೆಳೆದು ಬಂದಿದೆ.ದೆಹಲಿಗೆ ಹೊಂದಿಕೊಂಡಿರುವ ರಾಜ್ಯಗಳಾದ ಪಂಜಾಬ್, ಹರಿಯಾಣ, ಮಧ್ಯ ಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ ಹಾಗೂ ಇತರೆ ರಾಜ್ಯಗಳಿಂದಲೂ ಕೂಡ ಸಾಗರೋಪಾದಿಯಾಗಿ ಲಕ್ಷಾಂತರ ರೈತರು ದೇಶದ ರಾಜಧಾನಿಗೆ ಹೊರಟಿದ್ದು ಕೇಂದ್ರ ಸರ್ಕಾರದ ನಿದ್ದೆಗೆಡಿಸಿದೆ.ಇಂಥ ಸಂದರ್ಭದಲ್ಲಿ ಅನ್ನದಾತ ರೈತರ ಹೋರಾಟಕ್ಕೆ ಬೆಂಬಲವಾಗಿ ನಿಲ್ಲುವುದು ಸಮಾಜದ ಎಲ್ಲ ವರ್ಗದ ಜನರ ಜವಾಬ್ದಾರಿ. ದೇಶವ್ಯಾಪಿ ನಡೆಯುತ್ತಿರುವ ಹೋರಾಟಕ್ಕೆ ಎಲ್ಲ ರಾಜ್ಯಗಳ ರೈತರು ಬೆಂಬಲವಾಗಿ ನಿಂತಿದ್ದಾರೆ. ರಾಷ್ಟ್ರಮಟ್ಟದಲ್ಲಿ ಇನ್ನೂರಕ್ಕೂ ಹೆಚ್ಚು ರೈತ ಸಂಘಟನೆಗಳು ‘ಭಾರತ್ ಬಂದ್’ ಗೆ ಕರೆ ಕೊಟ್ಟಿದ್ದಾರೆ.ಈ ಹಿನ್ನೆಲೆಯಲ್ಲಿ ತಿಪಟೂರು ತಾಲೂಕಿನಲ್ಲಿ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ರೈತ ಕೃಷಿ ಕಾರ್ಮಿಕ ಸಂಘಟನೆ, ಕರ್ನಾಟಕ ಪ್ರಾಂತ್ಯ ರೈತ ಸಂಘ, ಜನಸ್ಪಂದನಾ ಟ್ರಸ್ಟ್, ಸೌಹಾರ್ದ ತಿಪಟೂರು, ಬೆಲೆ ಕಾವಲು ಸಮಿತಿ,
ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮತ್ತೆ ಇತರೆ ಸಂಘಟನೆಗಳು ಸೇರಿ ತಾಲೂಕಿನ ತಹಸೀಲ್ದಾರರ ಕಚೇರಿ ಮುಂದೆ ಭಾರತ್ ಬಂದ್ ಬೆಂಬಲಿಸಿ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ.ಆದುದರಿಂದ ರೈತರು, ವ್ಯಾಪಾರಸ್ಥರು, ಆಟೋ ಚಾಲಕರು, ನಾಗರಿಕರು ಮತ್ತು ಎಲ್ಲಾ ದುಡಿಯುವ ಜನತೆ ಈ ಹೋರಾಟಕ್ಕೆ ಬೆಂಬಲಿಸಿ, ಸ್ವಯಂ ಪ್ರೇರಣೆಯಿಂದ ‘ಬಂದ್’ ಮಾಡುವ ಮೂಲಕ ಅನ್ನ ಬೆಳೆಯುವ ರೈತನಿಗೆ ಬೆಂಬಲ ಸೂಚಿಸಿ ಈ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಮತ್ತು ತಾಲೂಕಿನ ಎಲ್ಲಾ ರೈತ ಸಂಘಟನೆಗಳು ಬೆಂಬಲಿಸಿವೆ ಎಂದು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಮತ್ತು ಐಕ್ಯ ಹೋರಾಟ ಸಮಿತಿ ಪ್ರಕಟಣೆ ತಿಳಿಸಿದೆ.

Comment here