ತುಮಕೂರು ಲೈವ್

ಭಾಷೆ‌ ಆಯುಧವಲ್ಲ: ತುರುವೇಕೆರೆ ಪ್ರಸಾದ್

ಸಮಾರಂಭದಲ್ಲಿ ಬರಹಗಾರ ತುರುವೇಕೆರೆ ಪ್ರಸಾದ್ ಅವರ ಕರೋನಾ ಚುಟುಕು ಸಂಕಲನ ‘ಮಾಸ್ಕೊಡಗಾಮ’ ಕೃತಿಯನ್ನು ಲೋಕಾರ್ಪಣೆ ಮಾಡಲಾಯಿತು

Publicstory. in


ತುರುವೇಕೆರೆ: ಭಾಷೆ ಒಂದು ಆಯುಧವಲ್ಲ, ಅದು ಬಹು ಆಮಾಮದ ಒಂದು ಸಾಂಸ್ಕøತಿಕ ಪರಿಭಾಷೆ. ಭಾಷೆ ನಮ್ಮ ಸಂಸ್ಕೃತಿ, ಪರಂಪರೆ, ಜೀವನಕ್ರಮದೊಂದಿಗೆ ಹಾಸು ಹೊಕ್ಕಾಗಿದೆ.ನಮ್ಮ ಸಂಸ್ಕತಿ, ಪರಂಪರೆಯನ್ನು ಹೊರತು ಪಡಿಸಿದ ಭಾಷೆ ಕೇವಲ ಒಂದು ಅಸ್ಥಿಪಂಜರವಿದ್ದಂತೆ! ಹಾಗಾಗಿ ಕನ್ನಡ ಭಾಷೆಯ ಅಭಿವೃದ್ಧಿ ಸಮಗ್ರ ಕನ್ನಡಿಗರ ಬದುಕಿನ ಅಭಿವೃದ್ಧಿ ಎಂದು ಬರಹಗಾರ ತುರುವೇಕೆರೆ ಪ್ರಸಾದ್ ಅಭಿಪ್ರಾಯಪಟ್ಟರು.

ಪಟ್ಟಣದ ಕನ್ನಡ ಭವನದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ತಾಲ್ಲೂಕು ಘಟಕ ಹಮ್ಮಿಕೊಂಡಿದ್ದ 65ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡಿಗರ ವೇದನೆ, ಸಂವೇದನೆ, ನಿವೇದನೆಗೆ ಮಾದ್ಯಮವಾಗಬೇಕಾದ ಭಾಷೆ ರಾಜಕೀಯ ಶಕ್ತಿ, ವ್ಯಕ್ತಿಗಳ ಷಡ್ಯಂತ್ರಗಳಿಗೆ ಸಿಲುಕಿದೆ. ಸಮರ್ಪಕವಾದ ಕನ್ನಡಪರ ನೀತಿ-ನಿರೂಪಣೆಗಳಿಲ್ಲದೆ ಕನ್ನಡಿಗರು ರಾಷ್ಟ್ರಮಟ್ಟದಲ್ಲಿ ಅವಕಾಶಗಳಿಂದ ವಂಚಿತರಾಗುವಂತಾಗಿದೆ ಎಂದರು.

ಸಮಸ್ತ ಕನ್ನಡಿಗರಿಗೆ ಸಮಾನಾವಕಾಶ ನೀಡಬೇಕು, ಇಲ್ಲವೇ ಭಾಷೆ ಕುರಿತ ಸಂಕುಚಿತ ಮನೋಭಾವ, ತಾರತಮ್ಯ ಶಿಕ್ಷಣ ನೀತಿ, ದುರಭಿಮಾನದ ದಂದ್ವ ನೀತಿಗಳನ್ನು ಬಿಟ್ಟು ಅವರಿಗೆ ಭಾಷೆಯ ಆಯ್ಕೆಯ ಬಗ್ಗೆ ಸ್ವಾತಂತ್ರ್ಯ ನೀಡಿ ಕನ್ನಡಿಗರ ಸ್ವಾಭಿಮಾನವನ್ನು ಗೌರವಿಸಬೇಕು. ಈ ನಿಟ್ಟಿನಲ್ಲಿ ಕನ್ನಡಪರ ಸಂಘಟನೆಗಳು ಒಟ್ಟಾಗಿ ಹೋರಾಟ ನಡೆಸಬೇಕಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಂ.ರಾಜು ಮಾತನಾಡಿ ಕನ್ನಡ ಸಮೃದ್ಧ ಭಾಷೆ. ಆದರೆ ಇಂಗ್ಲೀಷ್ ಪಾರಮ್ಯದಿಂದಾಗಿ ಕನ್ನಡಕ್ಕೆ ಸಿಗಬೇಕಾದ ಸ್ಥಾನಮಾನ ಸಿಗುತ್ತಿಲ್ಲ‌ ಎಂದರು.

ಒಂದು ಭಾಷೆ ಅನ್ನದ ಭಾಷೆ ಆಗಬೇಕಾದರೆ ಸರ್ಕಾರ ಹಾಗೂ ಕನ್ನಡ ಪರ ಸಂಘಟನೆಗಳು ಕನ್ನಡಿಗರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಆದ್ಯತೆ ನೀಡಬೇಕು. ನಮ್ಮಲ್ಲಿ ಹೆಚ್ಚು ಕೈಗಾರಿಕೆಗಳ ಹಾಗೂ ವ್ಯವಹಾರಗಳ ಅಭಿವೃದ್ಧಿಯಾದಾಗ ಈ ಆತ್ಮನಿರ್ಭರ ಕ್ರಮ ಕೈಗೊಳ್ಳಲು ಸಾಧ್ಯ ಎಂದು ಹೇಳಿದರು.

ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಸಾ.ಶಿ.ದೇವರಾಜ್ ಮಾತನಾಡಿ ಕವಿತೆಗಳು ಧ್ಯಾನದಲ್ಲಿ ಹುಟ್ಟುವಂತೆ ವ್ಯವಸ್ಥೆಯ ಅಧ್ವಾನಗಳಲ್ಲೂ ಮೈದಾಳಬೇಕು. ಕವಿಗಳು ಭಾವನಾತ್ಮಕ ಕವಿತೆಗಳಿಗೆ ನೀಡುವಷ್ಟೇ ಆದ್ಯತೆಯನ್ನು ಕ್ರಾಂತಿಕಾರಿಕ ಕವಿತೆಗಳಿಗೂ ನೀಡಬೇಕು. ಸಂಭ್ರಮದಂತೆಯೇ ಸಂಕಟಗಳೂ ಕವಿತೆಯ ಒಳಧ್ವನಿಯಾಗಬೇಕು ಎಂದು ಸಲಹೆ ನೀಡಿದರು.

ಸಮಾರಂಭದಲ್ಲಿ ಬರಹಗಾರ ತುರುವೇಕೆರೆ ಪ್ರಸಾದ್ ಅವರ ಕರೋನಾ ಕಾಲದ ಚುಟುಕುಗಳ ಸಂಕಲನ “ಮಾಸ್ಕೊಡಗಾಮ”ಕೃತಿಯನ್ನು ಲೋಕಾರ್ಪಣೆ ಮಾಡಲಾಯಿತು.

ವೇದಿಕೆಯ ರಾಜ್ಯ ಸಂಚಾಲಕ ಹೊಸ್ಮನೆ ಗಿರೀಶ್‍ಬಾಬು ಹಾಗೂ ಚಲನಚಿತ್ರ ನಟ ಲಕ್ಷ್ಮೀಕಾಂತ್ ಅವರನ್ನು ಸನ್ಮಾನಿಸಲಾಯಿತು.

ಟಿ.ಸುಷ್ಮಾ ಪ್ರಾರ್ಥಿಸಿದರು. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಅಧ್ಯಕ್ಷೆ ಎಂ.ಕೆ. ಲತಾಮಣಿ ಸ್ವಾಗತಿಸಿದರು.

ಗೌರವಾಧ್ಯಕ್ಷ ಎಂ.ಶ್ರೀನಿವಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ರಕ್ಷಣಾ ವೇದಿಕೆಯ ಉಪಾಧ್ಯಕ್ಷ ದರ್ಶನ್ ಮಾವಿನಹಳ್ಳಿ ಉಪಸ್ಥಿರಿದ್ದರು.

ಕವಿಗೋಷ್ಠಿಯಲ್ಲಿ ರಾಕೇಶ್ ಕುಣಪಿ, ದರ್ಶನ್ ನರಿಗೇನಹಳ್ಳಿ, ಲೀಲಾ.ಎಸ್, ಕೀರ್ತನ್, ಇಬ್ರಾಹಿಂ ಪಾಷಾ, ನಾಗೇಶ್, ಶ್ರೀಕಾಂತ್, ಗುರುಪ್ರಸಾದ್, ಇತರರು ಕವನ ವಾಚಿಸಿದರು. ಬಿ.ಎನ್.ಚೇತನ್ ಮತ್ತು ಕೆ.ಆರ್. ರಮೇಶ್ ಕಾರ್ಯಕ್ರಮ ನಿರೂಪಿಸಿದರು.

Comment here