ಜನಮನ

ಮಕ್ಕಳು-ಮಣ್ಣು ಬೇರ್ಪಡಿಸಿದರೆ ಮುಂದೆ ಕಾದಿದೆ ಸಂಕಷ್ಟ…..

ರಂಗನಕೆರೆ ಮಹೇಶ್


ನಮ್ಮೂರಿನ ಮುಖ್ಯರಸ್ತೆ ಡಾಂಬರು ರಸ್ತೆಯಾಗಿ ಅಭಿವೃದ್ಧಿ ಕಾರ್ಯ ನಡೆಯುತ್ತಿತ್ತು…ಒಂದು ದಿನ ಬೆಳ್ಳಂಬೆಳಿಗ್ಗೆ ನಮ್ಮೂರಿನಿಂದ ಪಕ್ಕದೂರಿಗೆ ಹೋಗುತ್ತಿದ್ದೆ. ರಸ್ತೆ ಪಕ್ಕದಲ್ಲಿ ಸಣ್ಣ ಮಕ್ಕಳು ಆಟದಲ್ಲಿ ತೊಡಗಿದ್ದನ್ನು ನೋಡೋಣ ಅಂತ ಬೈಕ್ ಇಳಿದೆ.

ನಿಜಕ್ಕೂ ಮಕ್ಕಳ ರಸ್ತೆ ಕಾಮಗಾರಿಯ ಆಟ ನನ್ನನ್ನು ಬೆಕ್ಕಸಬೆರಗಾಗಿಸಿತು. ರಸ್ತೆ ಕಾಮಗಾರಿಗಾಗಿ ಹಾಕಿದ್ದ ಮರಳು, ಜಲ್ಲಿ ಬಳಸಿ ಮಕ್ಕಳು ರಸ್ತೆ ನಿರ್ಮಾಣದಲ್ಲಿ ಥೇಟ್ ಮುಖ್ಯರಸ್ತೆ ಮಾಡಿದಂತೆಯೇ ಮಾಡುತ್ತಿದ್ದರು.

ಅವರ ಗ್ರಾಮದಲ್ಲಿ ನಡೆದ ರಸ್ತೆ ಕಾಮಗಾರಿಯನ್ನು ಗಮನಿಸಿದ್ದ ಮಕ್ಕಳು ಇದೇ ರೀತಿಯ ಆಟದಲ್ಲಿ ತೊಡಗಿದ್ದರು.
ಪ್ರಸ್ತುತ ದಿನಗಳಲ್ಲಿ ಮಣ್ಣಿನ ಸಂಪರ್ಕ ಮಕ್ಕಳನ್ನು ದೂರಕ್ಕೆ ಕೊಂಡೊಯ್ದಿದೆ.

ಮಕ್ಕಳು ಮಣ್ಣಿನೊಂದಿಗೆ ಆಟವಾಡುವುದು ಬಹು ಅಪರೂಪವಾಗಿದೆ. ಇಂದು ತಾಯಂದಿರು ಸಹ ಮಣ್ಣಿನೊಂದಿಗೆ ಮಕ್ಕಳನ್ನು ಬೆರೆಯಲು ಬಿಡುತ್ತಿಲ್ಲ. ಶಾಲೆಯಿಂದ ಮನೆಗೆ ಬಂದರೆ ಸಾಕು ಬರೀ ಓದು, ಟ್ಯೂಷನ್, ಹೋಮ್ ವರ್ಕ್ ಮಾಡುವ ಯಂತ್ರಗಳನ್ನಾಗಿಸುತ್ತಿದ್ದೇವೆ.

ಇನ್ನೂ ಕೆಲ ಪೋಷಕರು ಎಂಜಿನಿಯರ್, ವೈದ್ಯರನ್ನಾಗಿಸಬೇಕೇಂಬ ಭ್ರಮೆಯಲ್ಲಿ ಅವರ ಸುತ್ತ ಭ್ರಮಾಲೋಕವನ್ನೇ ಸೃಷ್ಟಿಸುತ್ತಿದ್ದೇವೆ.

ಮಕ್ಕಳು ಏನಾದರೂ ಆಗಲಿ ಅವರು ಶೇ.95 ಅಂಕ ಪಡೆದರೇ ಸಾಕು ಎಂದು ಅಂಕದ ಹಿಂದೆ ಬಿದ್ದು ಬಿಟ್ಟಿದ್ದೇವೆ. ಮಕ್ಕಳು ಸಹ ತಮಗೆ ಬೇಡವೆನಿಸಿದರೂ ಪೋಷಕರ ಒತ್ತಾಯಕ್ಕಾಗಿ ಯಂತ್ರಗಳಾಗುತ್ತಿದ್ದಾರೆ.

ಪ್ರಸ್ತುತ ಶಿಕ್ಷಣ ನೀತಿಯೂ ಸಹ ಪೋಷಕರ ಮನಸ್ಥಿತಿಗೆ ಹೊರತಾಗಿಲ್ಲ. ಅಲ್ಲಿಯೂ ಸಹ ಮಕ್ಕಳಿಗೆ ಮಣ್ಣಿನ ಸಂಪರ್ಕದಿಂದ ಕಡಿತಗೊಳಿಸುತ್ತಿದ್ದಾರೆ.

ಇಂದು ಶಾಲೆಗಳಲ್ಲಿ ಪಠ್ಯಕ್ಕೆ ಕೊಡುವಷ್ಟು ಮಹತ್ವವನ್ನು ಮಾರಲ್ ಏಜುಕೇಷನ್, ಫಿಜಿಕಲ್ ಏಜುಕೇಷನ್ ಇವುಳಿಗೆ ಕೊಡುತ್ತಿಲ್ಲ. ಅಲ್ಲಿಯೂ ಸಹ ಮಕ್ಕಳನ್ನು ಕೀ ಕೊಟ್ಟರೆ ಮಾತ್ರ ಹೋಗುವ ಗೊಂಬೆಗಳನ್ನಾಗಿಸುತ್ತಿದ್ದೇವೆ.

ಪ್ರಸ್ತುತ ಮಕ್ಕಳ ಆಟದ ಸಮಯವನ್ನೇ ನುಂಗಿ ಹಾಕಿದ್ದಾರೆ. ಮಣ್ಣಿನ ಜತೆ ಬೇರೆಯುವ ದೈಹಿಕ ಶಿಕ್ಷಣವನ್ನು ನೀಡದೆ ವಂಚಿಸಲಾಗುತ್ತಿದೆ.

ಬಹು ವರ್ಷಗಳಿಂದ ದೈಹಿಕ ಶಿಕ್ಷಕರನ್ನು ನೇಮಿಸಿಕೊಳ್ಳದ ಕಾರಣ ಇಡೀ ತಾಲ್ಲೂಕು ಕೇಂದ್ರಕ್ಕೆ 10 ರಿಂದ 15 ಶಿಕ್ಷಕರು ಇದ್ದರೆ ಅದೇ ಹೆಚ್ಚು ಎಂಬಂತಾಗಿದೆ. ಮತ್ತೆ ಕೆಲ ಶಾಲೆಗಳಲ್ಲಿ ದೈಹಿಕ ಶಿಕ್ಷಕರಿರುವ ಶಾಲೆಗಳಲ್ಲಿ ಅವರ ಸಮಯವನ್ನು ಪಠ್ಯ ಬೋಧನೆಗೆ ಬಳಸಿಕೊಳ್ಳಲಾಗುತ್ತಿದೆ.

ಈಗಾಗಲೇ ನಿವೃತ್ತಿ ಹಂತದಲ್ಲಿರುವ ಬಹು ಮಂದಿ ಶಿಕ್ಷಕರು ತಮ್ಮ ಕರ್ತವ್ಯವನ್ನೇ ಮರೆತಿದ್ದಾರೆ. ಮಣ್ಣಿನ ಜತೆ ಬೇರೆಯುವ ಕಬಡ್ಡಿ, ಖೋ..ಖೋ..ದಂತ ಆಟಗಳು ಮೂಲೆ ಸೇರುತ್ತಿವೆ. ಪೋಷಕರು ಮತ್ತು ಶಾಲೆಗಳು ಮಣ್ಣಿನ ಸಂಪರ್ಕ ಕಡಿದು ಹಾಕುತ್ತಿರುವ ಹೊತ್ತಲ್ಲಿ ನಿಧಾನವಾಗಿ ಮಕ್ಕಳು ಯಾಂತ್ರಿಕತೆಯತ್ತಾ ವಾಲುತ್ತಿದ್ದಾರೆ.

ಅವರೂ ಸಹ ಆಧುನಿಕ ಭರಾಟೆಯಲ್ಲಿ ಜನರನ್ನು ಒಂಟಿಯಾಗಿಸಿರುವ ಮೊಬೈಲ್ ಲೋಕದಲ್ಲಿ ಮುಳುಗುತ್ತಿದ್ದಾರೆ. ಮಣ್ಣಿನ ವಾಸನೆಯನ್ನೂ ಸವಿಯದೆ ಮೊಬೈಲ್ ವಾಸನೆಯಲ್ಲಿ ಕಾಲ ಕಳೆಯುತ್ತಿದ್ದಾರೆ.

ಮಕ್ಕಳು ಸಹ ಗುಂಪು ಸೇರದೆ ಒಂಟಿ ಜೀವನಕ್ಕೆ ಹೊಂದಿಕೊಳ್ಳುತ್ತಿದ್ದಾರೆ. ಒಂಟಿ ಜೀವನ ಮಕ್ಕಳ ಮುಂದಿನ ಭವಿಷ್ಯವನ್ನೇ ನುಂಗಿ ಹಾಕುತ್ತಿದೆ. ಮುಂದಾದರೂ ಹೆಚ್ಚೆತ್ತು ಮಣ್ಣಿನ ಸಂಪರ್ಕ ಮಾಡಿಸದೆ ಹೋದರೆ ಮಣ್ಣಿನ ಸಂಸ್ಕೃತಿಯಾದ ಕೃಷಿ ಇಂದಿನ ಮಕ್ಕಳಿಂದ ಮರೆಯಾಗುತ್ತದೆ.

ಒಂದೇ ನಾಣ್ಯದ ಎರಡು ಮುಖಗಳಾಗಿರುವ ಮಕ್ಕಳು ಮತ್ತು ಮಣ್ಣನ್ನು ಬೇರ್ಪಡಿಸಿದರೆ ನಾವು ಭೂತಾಯಿಗೆ ಮಾಡುವ ಬಹು ದೊಡ್ಡ ಮೋಸ ಎಂಬುದನ್ನು ನಾವು ಮನಗಾಣಬೇಕು…

Comment here