ತುಮಕೂರು ಲೈವ್

ಮಳೆಗೆ ನಲುಗಿದ ತುರುವೇಕೆರೆ: ಲಕ್ಷಾಂತರ ರೂಪಾಯಿ ನಷ್ಟ, ಮನೆಗಳಿಗೆ ಹಾನಿ

ತುರುವೇಕೆರೆ: ತಾಲ್ಲೂಕಿನಾದ್ಯಂತ ನಿನ್ನೆ ರಾತ್ರಿ ಸುರಿದ ಅಕಾಲಿಕ ಮಳೆಯಿಂದ ಮನೆಗಳ ಗೋಡೆ ಕುಸಿದು, ವಿದ್ಯುತ್ ಕಂಬಗಳು ಮುರಿದು, ರಾಗಿ ಬೆಳೆಗಳು ಹಾನಿಯಾಗಿ ಲಕ್ಷಾಂತರ ರೂಪಾಯಿಗಳ ನಷ್ಟ ಸಂಭವಿಸಿದೆ.
ತಾಲ್ಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗಿರುವ ದಂಡಿನಶಿವ ಹೋಬಳಿಯಲ್ಲಿ ಮಳೆಗಾಳಿಗೆ ತೆಂಗಿನ ಮರ ಬಿದ್ದು ವಿದ್ಯುತ್ ಕಂಬದ ಮೇಲೆ ಬಿದ್ದು ದ್ಯಾಮಸಂದ್ರದಲ್ಲಿ 2, ಅಪ್ಪಸಂದ್ರದಲ್ಲಿ 5 ವಿದ್ಯುತ್ ಕಂಬಗಳು ಮುರಿದಿವೆ.

ಪಟ್ಟಣದ ವ್ಯಾಪ್ತಿಯ ಕಾಳಪ್ಪನ ಪಾಳ್ಯ, ಹರಿದಾಸನಹಳ್ಳಿ, ಮಾರಸಂದ್ರ ಪೂರಕದಲ್ಲಿ 3 ವಿದ್ಯುತ್ ಕಂಬಗಳು ಮುರಿದಿವೆ. ತಂಡಗ ಶಾಖೆಯ
ಹಳ್ಳದಹೊಸಹಳ್ಳಿ, ದಬ್ಬೇಘಟ್ಟ, ಹಾಗು ಇನ್ನಿತರ ಭಾಗಗಳಲ್ಲಿ ವಿದ್ಯುತ್ ಪರಿವರ್ತಕ ಮತ್ತು ವಿದ್ಯುತ್ ಕಂಬಗಳ ಸೇರಿ ಒಟ್ಟು 20 ಕಂಬಗಳು ಮುರಿದು ಧರೆಗುರುಳಿವೆ.
ತಾಲ್ಲೂಕಿನ ಮಾಚೇನಹಳ್ಳಿ ಶಾಲಾ ಹತ್ತಿರದ ಹೇಮಾವತಿ ಉಪನಾಲೆಯು ಒಡೆದು ಅಪಾರ ಪ್ರಮಾಣದ ನೀರು ರೈತ ತೋಟ, ಹೊಲಗಳಿಗೆ ನುಗ್ಗಿ ಹಾನಿಯುಂಟು ಮಾಡಿದೆ.

ಪಟ್ಟಣದ ಸುಭ್ರಹ್ಮಣಂ ಹಾಗು ಮೀನಾಕ್ಷಿ ನಗರದ ತಗ್ಗಿನ ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿದೆ. ಆಗೆಯೇ ಕಾಳಂಜಿಹಳ್ಳಿ-ಕುಣಿಕೇನಹಳ್ಳಿ ಬಳಿ ಕೋಳಿ ಫಾರಂ ಶೆಡ್ನ ಒಂದು ಭಾಗ ಧರೆಗುರುಳಿದೆ.

ಮನೆ ಗೋಡೆ ಕುಸಿತ: ತಾಲ್ಲೂಕಿನ ಕಸಬಾ ವ್ಯಾಪ್ತಿಯ ದೊಂಬರಹಟ್ಟಿ 2, ವಿವೇಕಾನಂದ ನಗರ2, ತಾವರೆಕೆರೆ 1, ಹಿರೇಡೊಂಕಿಹಳ್ಳಿ 2, ಗೊಟ್ಟಿಕೆರೆ1, ದುಂಡಾಮಜರೆ ಕೋಡಿಹಳ್ಳಿ 1, ದುಂಡ 1, ದೊಡ್ಡೇನಹಳ್ಳಿ 2, ದಂಡಿನಶಿವರ ಹೋಬಳಿ ವ್ಯಾಪ್ತಿಯ ದಂಡಿನಶಿವರ, ಹಟ್ಟಿಹಳ್ಳಿಗೊಲ್ಲರಹಟ್ಟಿ, ಸಂಪಿಗೆ, ಸೊಪ್ಪನಹಳ್ಳಿಯಲ್ಲಿ ತಲಾ ಒಂದೊಂದು, ಡೊಂಕಿಹಳ್ಳಿ ಗೊಲ್ಲರಹಟ್ಟಿ 2, ಮಾಯಸಂದ್ರದ ಜಿ.ದೊಡ್ಡೇರಿ1, ದಬ್ಬೇಘಟ್ಟ ಹೋಬಳಿಯ ಕ್ಯಾಮಸಂದ್ರ, ಮಾರಪ್ಪನಹಳ್ಳಿ, ಚಂದ್ರಾಪುರ ಮತ್ತು ರಂಗನಹಳ್ಳಿಯಲ್ಲಿ ತಲಾ ಒಂದೊಂದು ಮನೆಗಳ ಗೋಡೆಯು ಕುಸಿದು ಮನೆಯಲ್ಲಿದ್ದ ಕೆಲ ವಸ್ತುಗಳು ಹಾನಿಗೊಳಗಾಗಿವೆ.

ರಾಗಿ ಹಾನಿ: ‘ತಾಲ್ಲೂಕಿನಲ್ಲಿ 16800 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ರಾಗಿ ಬೆಳೆ ಭಿತ್ತನೆಯಾಗಿದ್ದು ಆ ಪೈಕಿ 12800 ಹೆಕ್ಟೇರ್ ಪ್ರದೇಶ ವಿಪರೀತ ಮಳೆಗೆ ರಾಗಿ ಭಾಗಶಃ ಹಾನಿಯಾಗಿದೆ’ ಎನ್ನುತ್ತಾರೆ ಕೃಷಿ ಸಹಾಯಕ ನಿರ್ದೇಶಕಿ ಬಿ.ಪೂಜಾ ಬಿಗಿನೇಹಳ್ಳಿ ಸೇರಿದಂತೆ ಕೆಲ ಭಾಗಗಳಲ್ಲಿ ರಾಗಿ ತೆನೆಗಳಲ್ಲೇ ಮೊಳಕೆಯೊಡೆದಿದೆ.

ರಸ್ತೆ ಮೇಲೆ ಹರಿದ ಹಳ್ಳ: ತಾಲ್ಲೂಕಿನ ತುರುವೇಕೆರೆ- ಕಲ್ಲೂರ್ ಕ್ರಾಸ್ ರಸ್ತೆಯ ಕೊಂಡಜ್ಜಿ ಹಳ್ಳ ರಸ್ತೆ ಮೇಲೆ ಹರಿದು ಬೆಳಗಿನ ಕೆಎಸ್ಆರ್ಟಿಸಿ ಬಸ್ ಹಳ್ಳ ದಾಟಲು ಹರಸಾಹಸಪಟ್ಟಿತು. ಅದೇ ರೀತಿ ಮಾದಿಹಳ್ಳಿ-ಅರಳೀಕೆರೆಹಳ್ಳ, ದೊಂಬರನಹಳ್ಳಿ- ಚುಮ್ಮನಹಳ್ಳಿ ಹಳ್ಳ, ಸಾರಿಗೆಕೆರೆ ತುಂಬಿ ರಭಸವಾಗಿ ರಸ್ತೆ ಮೇಲೆ ಹರಿಯುತ್ತಿದ್ದು ವಾಹನ ಸಂಚಾರ ಕಷ್ಟವಾಗಿದೆ. ಇನ್ನೂ ಶಿಂಷಾ ನದಿಯ ನೀರು ಪುರದ ಪಾಳ್ಳದಲ್ಲಿ ರಸ್ತೆಗೆ ನುಗ್ಗಿದೆ, ಮಲ್ಲಾಘಟ್ಟಕೆರೆ ಹರಿಯುತ್ತಿರುವುದರಿಂದ ಆನೇಕೆರೆ ಭಾಗಗಕ್ಕೆ ಹೋಗಲು ತೊಂದರೆಯಾಗುತ್ತಿದೆ.

ತುರುವೇಕೆರೆ ತುಂಬಿ ಶಿಂಷಾ ನದಿಗೆ ರಭಸವಾಗಿ ಹರಿಯುತ್ತಿದ್ದು ಮುನಿಯೂರು ಗದ್ದೆ ಬಯಲು ಸಂಪೂರ್ಣ ಜಲಾವೃತವಾಗಿದೆ. ಬಾಣಸಂದ್ರದಲ್ಲಿ ರೈಲ್ವೇ ಮೇಲ್ ಸೇತುವೆಯ ಕೆಳಗೆ ಮೂರು ಅಡಿ ನೀರು ನಿಂತು ವಾಹನ ಮತ್ತು ಜನ ಸಂಚಾರಕ್ಕೆ ತೊಂದರೆಯಾಗಿದೆ.
ತುರುವೇಕೆರೆ ಕಸಬ 100, ದಂಡಿನಶಿವರ 128, ಸಂಪಿಗೆ 54, ಮಾಯಸಂದ್ರ 39, ದಬ್ಬೇಘಟ್ಟ 29 ಮಿ.ಮೀಟರ್ ಮಳೆಯಾಗಿದೆ.
ಸ್ಥಳಕ್ಕೆ ತಹಶೀಲ್ದಾರ್ ಆರ್.ನಯೀಂಉನ್ನಿಸಾ, ಬೆಸ್ಕಾಂ ಶಾಖಾಧಿಕಾರಿಗಳಾದ ಸೋಮಶೇಖರ್, ಉಮೇಶ್ವರಯ್ಯ, ಕಾಂತರಾಜು, ಗಿರೀಶ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುಳಾದೇವಿ, ಕೃಷಿ ಸಹಾಯಕ ನಿರ್ದೇಶಕಿ ಬಿ.ಪೂಜಾ, ಗ್ರಾಮ ಲೆಕ್ಕಾಧಿಕಾರಿಗಳಾದ ರಮೇಶ್, ಅಣ್ಣಪ್ಪಸ್ವಾಮಿ, ಭೇಟಿ ನೀಡಿ ಪರಿಶೀಲನೆ ನಡೆಸಿದರು.

Comments (1)

  1. Plzz support fund for farmers

Comment here