ತುಮಕೂರ್ ಲೈವ್

ಮುಂದಿನ ಬಜೆಟ್ ನಲ್ಲಿ ನೀರಾವರಿಗೆ‌ ಒತ್ತು: ಬಿಎಸ್ ವೈ

ಕುಪ್ಪೂರು: ರಾಜ್ಯವನ್ನು ಮಾದರಿ ರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ಮುಂದಿನ ಬಜೆಟ್‍ನಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಘೋಷಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕುಪ್ಪೂರು ಗದ್ದಿಗೆ ಸಂಸ್ಥಾನ ಮಠದಲ್ಲಿ ನಡೆದ ಶ್ರೀ ಗುರು ಮರುಳಸಿದ್ದೇಶ್ವರ ಸ್ವಾಮಿಗಳ ಜಾತ್ರಾ ಮಹೋತ್ಸವದ ಉದ್ಘಾಟನೆ ಹಾಗೂ ಕುಪ್ಪೂರು ಗುರು ಮರುಳಸಿದ್ದೇಶ್ವರ ಮಹಾಪುರಾಣ ವ್ಯಾಖ್ಯಾನ ಗ್ರಂಥದ ಲೋಕಾರ್ಪಣೆ ಕಾರ್ಯಕ್ರಮದ ಉದ್ಘಾಟಿಸಿ ಅವರು ಮಾತನಾಡಿದರು.

ಈ ನಾಡಿನ ರೈತರ ಸಂಕಷ್ಟಗಳನ್ನು ಬಗೆಹರಿಸಬೇಕು ಎನ್ನುವುದು ನನ್ನ ಉದ್ದೇಶವಾಗಿದೆ. ನೀರಾವರಿಗೆ ಹೆಚ್ಚಿನ ಆದ್ಯತೆ ನೀಡುವುದು, ರೈತರು ಬೆಳೆಯುವ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಬೇಕು. ರೈತರನ್ನು ಸಂಕಷ್ಟದಿಂದ ದೂರ ಮಾಡಬೇಕು. ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗ ಸೇರಿದಂತೆ ಎಲ್ಲಾ ವರ್ಗದ ಜನರು ವಿಶೇಷವಾಗಿ ಮಹಿಳಾ ಸಬಲೀಕರಣದ ದೃಷ್ಠಿಯಿಂದ ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸುವ ದೃಷ್ಠಿಯಿಂದ ಅನೇಕ ಯೋಜನೆಗಳು ಕಾರ್ಯ ರೂಪಕ್ಕೆ ತರಲು ಚಿಂತನೆಗಳು ನಡೆಯುತ್ತಿವೆ ಎಂದರು.

ಮುಂಬರುವ ಫೆಬ್ರವರಿ ಮಾಹೆಯ ಬಜೆಟ್‍ನಲ್ಲಿ ಅನೇಕ ಕಾರ್ಯಕ್ರಮಗಳನ್ನು ಘೋಷಣೆ ಮಾಡುವುದರ ಮೂಲಕ ರಾಜ್ಯವನ್ನು ಒಂದು ಮಾದರಿ ರಾಜ್ಯವನ್ನಾಗಿ ಮಾಡಬೇಕೆನ್ನುವ ಸಂಕಲ್ಪ ಇದೆ. ಈ ನಿಟ್ಟಿನಲ್ಲಿ ಅತ್ಯಂತ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.

ಚಿಕ್ಕನಾಯಕನಹಳ್ಳಿ ತಾಲೂಕು ಕುಪ್ಪೂರು ಗದ್ದುಗೆಗೆ 400 ವರ್ಷಗಳ ಇತಿಹಾಸವಿದೆ. ಪರಂಪರೆ ಇತಿಹಾಸವುಳ್ಳ ಈ ಮಠವು ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಜನಜಾಗೃತಿ ಮೂಡಿಸುತ್ತಿದೆ. ಮಠದ ಮಹಾಸ್ವಾಮಿಗಳು ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಾಡಿನ ಒಳಿತಿಗಾಗಿ ಸೇವೆ ಸಲ್ಲಿಸುತ್ತಿರುವುದು ಸಂತಸದ ವಿಷಯ ಎಂದರು.

ಜಾತ್ರೆಗಳು ಅಪ್ಪಟ ದೇಶಿಯ ಸಂಸ್ಕಂತಿಯನ್ನು ಬಿಂಬಿಸುತ್ತವೆ. ಜಾತ್ರೆ-ಸಂತೆಗಳು ನಮ್ಮ ಜನರ ನಂಬಿಕೆಯನ್ನು ಗಟ್ಟಿಗೊಳಿಸುವಂತಹ ಅಪೂರ್ವ ಸಾಧನ. ಜಾತ್ರೆಗಳು ನಮ್ಮ ನಾಡಿನ ಪರಂಪರೆಯಲ್ಲದೆ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕಂತಿಕ ಮಹೋತ್ಸವದ ಸಂಗಮ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ಮಾತನಾಡಿ, ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದ ಮೊದಲನೇ ಅವಧಿಯಲ್ಲಿ ಚಿಕ್ಕನಾಯಕನಹಳ್ಳಿ ತಾಲೂಕಿನ 26 ಕೆರೆಗಳಿಗೆ ಹೇಮಾವತಿ ನೀರು ಹರಿಸಲು ಸುಮಾರು 106 ಕೋಟಿ ರೂ.ಗಳ ಹಣ ಬಿಡುಗಡೆಗೊಳಿಸಿದ್ದಾರೆ. ಜಿಲ್ಲೆಗೆ 260 ಕೋಟಿ ರೂ.ವೆಚ್ಚದಲ್ಲಿ 96 ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಅನುಮೋದನೆ ನೀಡಿದ್ದಾರೆ ಎಂದರು.

ಇತ್ತಿಚೆಗೆ ಹೇಮಾವತಿ ನಾಲೆಯಲ್ಲಿ 1200 ಕ್ಯೂಸೆಕ್ ನೀರು ಹರಿಯುವುದೇ ಕಷ್ಟ ಆಗುತ್ತಿತ್ತು, ನಾನು ಮತ್ತು ಸಂಸದ ಬಸವರಾಜು ಅವರು ಕೇಳಿಕೊಂಡಾಗ ನಾಲೆಯ ಅಗಲೀಕರಣ ಮಾಡಿ ಈಗ 2400 ಕ್ಯೂಸೆಕ್ ನೀರು ಹರಿಯುವುದಕ್ಕೆ ಬೋರ್ಡ್‍ನಲ್ಲಿ 550 ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದಾರೆ. ಜಿಲ್ಲೆಯಲ್ಲಿ ರಸ್ತೆ ಕಾಮಗಾರಿಗಳು ಜನ ನೋಡುವ ಸ್ಥಿತಿಯಲ್ಲಿ ನಿರ್ಮಾಣವಾಗಲು ಸ್ಪಂದಿಸಿದ್ದಾರೆ ಇದಕ್ಕೆ ನಾನು ಮುಖ್ಯಮಂತ್ರಿಗಳಿಗೆ ಆಭಾರಿಯಾಗಿದ್ದೆನೆ ಎಂದರು.

ಸಮಾರಂಭದ ದಿವ್ಯ ಸಾನಿಧ್ಯವನ್ನು ಕುಪ್ಪೂರು ಮಠದ ಡಾ. ಯತೀಶ್ವರ ಶಿವಾಚಾರ್ಯ ಮಹಾ ಸ್ವಾಮೀಜಿ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ ಸಚಿವ ಆರ್.ಅಶೋಕ್, ಮಾಜಿ ಸಚಿವ ಸೊಗಡು ಶಿವಣ್ಣ ಮತ್ತು ಶಾಮನೂರು ಶಿವಶಂಕರಪ್ಪ, ಶಾಸಕ ಬಿ.ಸಿ ನಾಗೇಶ್, ಜಿಲ್ಲಾಧಿಕಾರಿ ಡಾ. ರಾಕೇಶ್‍ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೋನ ವಂಶಿಕೃಷ್ಣ, ಹಾಜರಿದ್ದರು.

Comment here