ತುಮಕೂರು ಲೈವ್

ಮೇ 3ರ ನಂತರ ಸರ್ಕಾರ ಎಸ್.ಎಸ್.ಎಲ್.ಸಿ. ಪರೀಕ್ಷೆ

Photo:Jp

Publicstory. in


Tumkuru: ಮೇ 3ರ ನಂತರ ಸರ್ಕಾರ ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ವಿದ್ಯಾರ್ಥಿಗಳು ಯಾವುದೇ ವದಂತಿಗಳಿಗೆ ಕಿವಿಗೊಡದೆ ಪರೀಕ್ಷೆ ಬರೆಯಲು ನಿರಂತರ ಅಧ್ಯಯನಶೀಲರಾಗಬೇಕು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.

ತುಮಕೂರು ಸಿದ್ಧಗಂಗಾ ಮಠದಲ್ಲಿ ವಸತಿ ಶಾಲೆಯ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದರು. ಮಠದಲ್ಲಿ 1320 ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿರುವುದು ಖಚಿತಪಡಿಸಿಕೊಂಡ ಸಚಿವರು ವಿದ್ಯಾರ್ಥಿಗಳ ಸಂಶಯ ಮತ್ತು ಸಂದೇಹಗಳಿಗೆ ಪರಿಹಾರ ಸೂಚಿಸಿದರು.

ವಿಶ್ವಕ್ಕೆ ಅಂಟಿಕೊಂಡಿರುವ ಪ್ರಾಣಾಂತಿಕ ಕೋವಿಡ್-19 ಸೋಂಕಿನಿಂದ ಮುಕ್ತರಾಗಲು ದೇಶ ಮತ್ತು ರಾಜ್ಯದಲ್ಲಿ ಲಾಕ್‍ಡೌನ್ ಜಾರಿಗೊಳಿಸಲಾಗಿದೆ. ಇದರಿಂದ ಮುಗಿಯಬೇಕಾಗಿದ್ದ ಎಸ್.ಎಸ್.ಎಲ್.ಸಿ. ಪರೀಕ್ಷೆ ಹಾಗೂ ಪಿ.ಯು.ಸಿ.ಯ ಒಂದು ವಿಷಯದ ಪರೀಕ್ಷೆ ಮುಂದೂಡಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ 8.50ಲಕ್ಷ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯಲಿದ್ದಾರೆ. ಅವರೊಂದಿಗೆ ಆತ್ಮಸ್ಥೈರ್ಯ ತುಂಬಿ ಧೈರ್ಯ ಹೇಳಲಾಗುತ್ತಿದೆ. ಪರೀಕ್ಷೆಯ ಮುನ್ನ ಪುನರ್‍ಮನನ ತರಗತಿ ನಡೆಸಿ ಪರೀಕ್ಷೆ ನಡೆಸುವ ದಿನವನ್ನು ಸರ್ಕಾರ ಶಿಕ್ಷಣ ಇಲಾಖೆಯ ಮೂಲಕ ಪ್ರಕಟಿಸಲಿದೆ ಎಂದರು.

ಸರ್ಕಾರ ನಿರ್ಧಾರ ಪ್ರಕಟಿಸುವ ಮೊದಲು ಶಾಲೆಗಳಲ್ಲಿ ದಾಖಲಾತಿ ಮಾಡಿಕೊಳ್ಳುವುದು ಅಥವಾ ಶುಲ್ಕ ಪಡೆಯುವುದು ಸಮಂಜಸವಲ್ಲ. ಪ್ರಸಕ್ತ ಸಮಯದಲ್ಲಿ ಸಮಾಜದ ಎಲ್ಲಾ ತರಹದ ಜನರ ಆರ್ಥಿಕ ಸ್ಥಿತಿ ಜರ್ಜರಿತವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಶಾಲಾ ಶುಲ್ಕ ವಿಧಿಸುವ ಬಗ್ಗೆ ಸರ್ಕಾರ ಚರ್ಚಿಸಿ ತೀರ್ಮಾನ ಕೈಗೊಂಡು ಪ್ರಕಟಿಸಲಿದೆ.

ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಸಲಾಗುತ್ತದೆ. ವಿದ್ಯಾರ್ಥಿಗಳು ಸಂಯಮದಿಂದ ಇದ್ದು, ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಅಣಿಯಾಗಬೇಕು ಎಂದರು. ವಿದ್ಯಾ ರ್ಥಿಗಳು ಸ್ವಚ್ಛತೆ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶಿಕ್ಷಣ ಇಲಾಖೆ ಆಯುಕ್ತ ಡಾ. ಜಗದೀಶ್ಶ್ರೀ, ಸಿದ್ದಗಂಗಾ ಮಠದ ಸಿದ್ಧಲಿಂಗ ಶ್ರೀಗಳು, ಶಾಸಕ ಜ್ಯೋತಿಗಣೇಶ್, ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಉಪನಿರ್ದೇಶಕರಾದ ಕಾಮಾಕ್ಷಮ್ಮ ಹಾಗೂ ರೇವಣಸಿದ್ಧಪ್ಪ ಇದ್ದರು.

Comment here