ತುಮಕೂರ್ ಲೈವ್

ಯುವ ಬರಹಗಾರರ ಕಾರ್ಯಗಾರ: ಬರಗೂರು ರಾಮಚಂದ್ರಪ್ಪ

ತುಮಕೂರು: ಬಂಡಾಯ ಸಾಹಿತ್ಯ ಸಂಘಟನೆ ಕರ್ನಾಟಕ ವತಿಯಿಂದ ತುಮಕೂರು ನಗರದಲ್ಲಿ ಎರಡು ದಿನಗಳ ರಾಜ್ಯಮಟ್ಟದ ಯುವ ಬರಹಗಾರರ ಕಾರ್ಯಗಾರವನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಕಾರ್ಯಗಾರದ ರೂಪುರೇಷೆಗಳು ಮತ್ತು ನೋಂದಣಿ ಕಾರ್ಯ ನಡೆಯುತ್ತಿದ್ದು ಸಂದಿಗ್ದ ಪರಿಸ್ಥಿತಿಯಲ್ಲಿ ಯುವ ಬರಹಗಾರರಲ್ಲಿ ಸ್ಪಷ್ಟತೆ ಮೂಡಿಸಲು ಕಾರ್ಯಾಗಾರ ನಡೆಸಲು ಉದ್ದೇಶಿಸಲಾಗಿದೆ.

ತುಮಕೂರಿನ ಕನ್ನಡಭವನದಲ್ಲಿ ಅಕ್ಟೋಬರ್ 9ರಂದು ನಾಡೋಜ ಸಾಹಿತಿ ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಯುವ ಬರಹಗಾರರ ಕಾರ್ಯಾಗಾರ ನಡೆಸುವ ಕುರಿತು ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಭಾಗವಹಿಸಿದ್ದವರು ಸಲಹೆಗಳನ್ನು ನೀಡಿ ಕಾರ್ಯಾಗಾರ ಯಶಸ್ವಿಗೊಳಿಸಲು ಮುಂದಾಗಬೇಕು ಎಂದರು.

ಸಭೆಯ ತೀರ್ಮಾನದಂತೆ ಕಾರ್ಯಾಗಾರದಲ್ಲಿ ಭಾಗವಹಿಸುವ ಯುವ ಬರಹಗಾರರು ಕನಿಷ್ಟ ಒಂದೆರಡು ಕೃತಿಗಳನ್ನು ಪ್ರಕಟಿಸಿರಬೇಕು. ನಲವತ್ತು ವಯಸ್ಸಿನ ಒಳಗಿರಬೇಕು. ಕಾರ್ಯಾಗಾರದಲ್ಲಿ 100 ಮಂದಿ ಯುವ ಬರಹಗಾರರು ಭಾಗವಹಿಸಬಹುದು ಎಂದು ಸಭೆಯಲ್ಲಿ ಒಮ್ಮತಕ್ಕೆ ಬರಲಾಯಿತು.

ಕಾರ್ಯಾಗಾರಕ್ಕೆ ಬರುವ ಯುವ ಬರಹಗಾರರಿಗೆ ಊಟ ಮತ್ತು ವಸತಿಯನ್ನು ನೀಡಲಾಗುವುದು. ಕಾರ್ಯಾಗಾರದಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಕಡ್ಡಾಯ ವಾಗಿ ನೋಂದಣಿ ಮಾಡಿಸಲೇಬೇಕು ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಬರಗೂರು ರಾಮಚಂದ್ರಪ್ಪ ತಿಳಿಸಿದರು.

ರಾಜ್ಯದ ಹೊರ ಜಿಲ್ಲೆಗಳಿಂದ ಬರುವ ಬರಹಗಾರರು ಡಾ.ನಾಗಭೂಷಣ್ 9964852518 ಮತ್ತು ಡಾ.ಓ.ನಾಗರಾಜು 9448659646 ಇವರಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಡಿಸೆಂಬರ್ 28 ಮತ್ತು 29ರಂದು ಎರಡು ದಿನಗಳು ತುಮಕೂರಿನ ಕನ್ನಡ ಭವನದಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

ಸಭೆಯಲ್ಲಿ ಸಾಹಿತಿ ಎನ್.ನಾಗಪ್ಪ, ಭೂಮಿ ಬಳಗದ ಅಧ್ಯಕ್ಷ ಸೋಮಣ್ಣ, ಪ್ರಾಧ್ಯಾಪಕ ಕರಿಯಣ್ಣ, ಸಹಾಯಕ ಪ್ರಾಧ್ಯಪಕ ಡಾ.ನಾಗಭೂಷಣ ಬಗ್ಗನಡು, ಸಹ ಪ್ರಾಧ್ಯಾಪಕ ಡಾ.ಒ.ನಾಗರಾಜು, ಡಾ.ಶಿವನಂಜಯ್ಯ,ಪತ್ರಕರ್ತ ಇಂದ್ರಕುಮಾರ್, ಲೇಖಕಿ ಮರಿಯಂಬಿ, ಡಿವೈಎಫ್ಐ ಮುಖಂಡ ಎಸ್.ರಾಘವೇಂದ್ರ, ಸಮುದಾಯದ ಜಿಲ್ಲಾ ಕಾರ್ಯದರ್ಶಿ ಕೆ.ಈ.ಸಿದ್ದಯ್ಯ, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Comment here