ತುಮಕೂರ್ ಲೈವ್

ಸಂವಿಧಾನವೇ ಎಲ್ಲರ ಆದರ್ಶವಾಗಬೇಕು

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕಾಲೇಜು ಶಿಕ್ಷಣ ಇಲಾಖೆ ಆಶ್ರಯದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಹಂಜಾಟೆ ಸಂಜೀವ್ ಕುಮಾರ್ ಚಾಲನೆ ನೀಡಿದರು.

ಎಲ್ಲಾ ಕಲ್ಪನೆಗಳನ್ನೊಳಗೊಂಡ ರೂಪು-ರೇಷೆ ಹಾಗೂ ಚಿಂತನ-ಮಂಥನದಲ್ಲಿ ರಚನೆಯಾಗಿರುವ ಸಂವಿಧಾನ ಕೇವಲ ಪುಸ್ತಕ ರಚನೆಯಲ್ಲ ಅದೊಂದು ಆದರ್ಶ ಗ್ರಂಥ. ಸಂವಿಧಾನವನ್ನು ಆಡಳಿತಕ್ಕೆ ಮಾತ್ರ ಸೀಮಿತಗೊಳಿಸಬಾರದು. ಅದರಲ್ಲಿನ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ದೇಶದ ಪ್ರತಿಯೊಬ್ಬ ಪ್ರಜೆಯೂ ಸಂವಿಧಾನವನ್ನು ಆದರ್ಶವಾಗಿಟ್ಟುಕೊಳ್ಳಬೇಕು. ಸಂವಿಧಾನದ ಮೌಲ್ಯಗಳು ಜೀವನದ ಮೌಲ್ಯಗಳಾಗಬೇಕು ಎಂದು ನ್ಯಾಯಾಧೀಶರು ಸಲಹೆ ನೀಡಿದರು.

ಸಂವಿಧಾನದ ಪ್ರತಿಜ್ಞಾ ವಿಧಿ ಎನ್ನುವುದು ಕೇವಲ ಅಕ್ಷರನ್ನೊಳಗೊಂಡ ಪದಪುಂಜಗಳಲ್ಲ. ಅದರಲ್ಲಿ ಭಾವನೆಗಳು ಅಡಕವಾಗಿರುತ್ತವೆ. ಸಂವಿಧಾನ ಪೀಠಿಕೆಯನ್ನು ಅಕ್ಷರಕ್ಕೆ ಮಾತ್ರ ಸೀಮಿತಗೊಳಿಸಿ ಅಭ್ಯಸಿಸದೆ, ಭಾವನೆಗಳನ್ನು ಮೇಳೈಸಿಕೊಂಡು ಜೀವನಕ್ಕೆ ಅಳವಡಿಸಿಕೊಳ್ಳಬೇಕು. ಜಗತ್ತಿನಾದ್ಯಂತ ಮೊದಲ ಹತ್ತು ಮಹಾನ್ ವ್ಯಕ್ತಿಗಳ ಸಾಲಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ನಿಲ್ಲುತ್ತಾರೆ ಸಂವಿಧಾನವನ್ನು ಬದಿಗಿಟ್ಟು ಬಿ.ಆರ್. ಅಂಬೇಡ್ಕರ್ ಅವರನ್ನು ನೋಡಲು ಸಾಧ್ಯವಿಲ್ಲ. ಬಾಬಾ ಸಾಹೇಬರನ್ನು ಬದಿಗಿಟ್ಟು ಸಂವಿಧಾನ ನೋಡಲು ಸಾಧ್ಯವಿಲ್ಲ. ಸಂವಿಧಾನದ ಆಶಯದಿಂದ ಭಾರತ ವಿಶ್ವದಲ್ಲೆಡೆ ಅಖಂಡತೆಯನ್ನು ಉಳಿಸಿಕೊಂಡಿದೆ ಎಂದರು.

ಜಾತ್ಯಾತೀತ ಮನೋಭಾವನೆಯನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ನಾವೆಲ್ಲರೂ ಒಂದೇ ಎನ್ನುವ ಭಾವನೆಯಲ್ಲಿ ಸಾಮರಸ್ಯ ಅಡಗಿರುತ್ತದೆ. ಆದರೆ ಪ್ರಸ್ತುತ ಜಾತ್ಯಾತೀತೆಯನ್ನು ಕದಡುವ ಪ್ರಯತ್ನ ನಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಸಂವಿಧಾನ ಮೌಲ್ಯಗಳಲ್ಲೊಂದಾದ ಸಮಾಜವಾದಿ ಪರಿಕಲ್ಪನೆಯನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಸಂಪತ್ತಿನ ಕ್ರೊಢೀಕರಣ ಕೇವಲ ಒಬ್ಬರಿಗೆ ಮಾತ್ರ ಸೀಮಿತವಾಗದೆ ಸಮಾನ ಹಂಚಿಕೆಯಾಗಬೇಕು. ಎಲ್ಲಿ ಸಮಾಜವಾದಿ ತತ್ವವನ್ನು ಅಳವಡಿಸಿಕೊಂಡಿರುತ್ತಾರೋ ಅಲ್ಲಿ ಭ್ರಷ್ಟಾಚಾರ ಇರುವುದಿಲ್ಲ. ಒಂದು ವೇಳೆ ಭ್ರಷ್ಟಾಚಾರ ನಡೆಯುತ್ತಿದ್ದರೆ ಅಲ್ಲಿ ಸಮಾಜವಾದಿ ತತ್ವ ಉಲ್ಲಂಘನೆಯಾಗಿದೆ ಎಂದು ಅರ್ಥ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೋನ ವಂಶಿಕೃಷ್ಣ, ಸೂಫಿಯ ಕಾನೂನು ಮಹಾ ವಿದ್ಯಾಲಯದ ಪ್ರಾಂಶುಪಾಲ ರಮೇಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಕೆ.ಎಸ್. ಜಗದೀಶ್, ತುಮಕೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜೆ.ಕೆ. ಅನಿಲ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಬಿ. ದಶರಥ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎಸ್. ನಟರಾಜ್, ಇತರೆ ವಕೀಲರು, ಅಂಗನವಾಡಿ ಕಾರ್ಯಕರ್ತೆಯರು, ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Comment here