ತುಮಕೂರ್ ಲೈವ್

ಸಹಕಾರ ಸಪ್ತಾಹ; ಹಲವು ಸಂದೇಶ ರವಾನಿಸಿದ ಕೆಎನ್ನಾರ್

ವರದಿ: ಕೆ.ಈ.ಸಿದ್ದಯ್ಯ

ತುಮಕೂರಿನಲ್ಲಿಂದು ನಡೆದ 66ನೇ ಅಖಿಲ ಭಾರತ ಸಹಕಾರ ಸಪ್ತಾಹ-2019ರ ರಾಜ್ಯಮಟ್ಟದ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರಿಗೆ ಹಲವು ಸಂದೇಶಗಳನ್ನು ರವಾನಿಸಿದೆ.

ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಹಾಕಿದ್ದ ಬೃಹತ್ ವೇದಿಕೆಯ ಮೂಲಕ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ತಾನೇನೂ ಕಡಿಮೆ ಇಲ್ಲ ಎಂಬ ಬಲಪ್ರದರ್ಶನ ತೋರಿಸಿದ್ದಾರೆ.

ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 8 ಸಾವಿರಕ್ಕೂ ಹೆಚ್ಚು ಮಂದಿ ಸಹಕಾರಿಗಳು, ರಾಜಣ್ಣನವರ ಅಭಿಮಾನಿಗಳು ಬಂದಿದ್ದರು. ವೇದಿಕೆಯ ಮುಂಭಾಗದಲ್ಲಿ ಹಾಕಿದ್ದ ಎಲ್ಲಾ ಆಸನಗಳು ಭರ್ತಿಯಾಗಿದ್ದವು. ಜೊತೆಗೆ ಬೃಹತ್ ಪೆಂಡಾಲ್ ಹಾಕಿದ್ದ ಹೊರಭಾಗದಲ್ಲಿ ನೂರಾರು ಮಂದಿ ಸೇರಿ ಎಲ್ಲರ ಭಾಷಣ ಆಲಿಸಿದರು. ಇಷ್ಟು ದೊಡ್ಡ ಮಟ್ಟದ ಸಮಾರಂಭವನ್ನು ಆಯೋಜಿಸಿ ತುಮಕೂರು ಜಿಲ್ಲೆಯ ಕಾಂಗ್ರೆಸ್ ಮುಖಂಡರಾದ ಡಾ.ಜಿ.ಪರಮೃಶ್ವರ್, ಟಿ.ಬಿ.ಜಯಚಂದ್ರ ಸೇರಿದಂತೆ ವಿರೋಧಿಗಳು ಹಾಗೂ ಜೆಡಿಎಸ್ ಶಾಸಕರಿಗೂ ತನ್ನ ಬಲವೇನು ಎಂಬುದನ್ನು ಪ್ರದರ್ಶಿಸಿ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಕೆ.ಎನ್.ರಾಜಣ್ಣ ಜೆಡಿಎಸ್ ತೊರೆದ ಮೇಲಂತೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕಟುವಾಗಿ ವಿರೋಧಿಸಿಕೊಂಡು ಬಂದವರು. ಹಿಂದುಳಿದ ವರ್ಗಗಳ ನಾಯಕ ಎಂಬ ಪಟ್ಟವೂ ಕೂಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಯಿತು. ಇದೇ ಕಾರಣಕ್ಕಾಗಿಯೇ ತನ್ನ ವಿರೋಧಿ ಜೆಡಿಎಸ್ ಶಾಸಕರನ್ನು ಆಮಂತ್ರಣ ಪತ್ರಿಕೆಯಲ್ಲೂ ಮುದ್ರಿಸದೆ ಸೇಡು ತೀರಿಸಿಕೊಂಡರು ಎಂಬ ಮಾತುಗಳು ಕೇಳಿಬರುತ್ತಿವೆ.

ತುಮಕೂರು ಜಿಲ್ಲೆಯಲ್ಲಿ ಕಾರ್ಯಕ್ರಮ ನಡೆದಿದೆ. ಪ್ರೋಟೋ ಕಾಲ್ ಪ್ರಕಾರ ಪಕ್ಷಾತೀತವಾಗಿ ಎಲ್ಲಾ ಶಾಸಕರು ಸಂಸದರು, ವಿಧಾನ ಪರಿಷತ್ ಸದಸ್ಯರನ್ನು ಆಹ್ವಾನಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಇಂತಹ ಸಂಪ್ರದಾಯಕ್ಕೆ ಕೆ.ಎನ್.ರಾಜಣ್ಣ ತಿಲಾಂಜಲಿ ಇಟ್ಟಿರುವುದು ಕೆಲವರನ್ನು ಸಿಟ್ಟಿಗೇಳಿಸಿದೆ. ಆದರೂ ಕೆ.ಎನ್.ರಾಜಣ್ಣ ಅದಕ್ಕೆಲ್ಲ ಸೊಪ್ಪು ಹಾಕದೆ ದೊಡ್ಡ ಪಡೆಯನ್ನೇ ಎದುರು ಹಾಕಿಕೊಂಡಿದ್ದಾರೆ.

ಸಮಾರಂಭ ಆಯೋಜಿಸಿದ್ದ ಜೂನಿಯರ್ ಕಾಲೇಜು ಮೈದಾನದಲ್ಲಿ ಹಾಕಿದ್ದ ಎಲ್ಲಾ ಕಟೌಟ್ ಗಳಲ್ಲೂ ಕಾಂಗ್ರೆಸ್ ಮತ್ತು ಜೆಡಿಎಸ್ ನ ಯಾವುದೇ ಶಾಸಕರು, ಸಂಸದರು ಮತ್ತು ಸಹಕಾರಿಗಳ ಪೋಟೋಗಳನ್ನು ಹಾಕಿರಲಿಲ್ಲ. ಕಾರ್ಯಕ್ರಮಕ್ಕೆ ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಬಿ.ಸುರೇಶ್ ಗೌಡರನ್ನು ಆಹ್ವಾನಿಸಿ ವೇದಿಕೆಯಲ್ಲಿ ಕೂರಲು ಅವಕಾಶ ನೀಡಲಾಗಿದೆ. ಆದರೆ ಹಾಲಿ ಶಾಸಕ ಡಿ.ಸಿ.ಗೌರಿಶಂಕರ್ ಅವರನ್ನು ಆಹ್ವಾನ ಪತ್ರಿಕೆಯಲ್ಲೂ ಮುದ್ರಿಸಿಲ್ಲ. ಕಾರ್ಯಕ್ರಮಕ್ಕೆ ವೈಯಕ್ತಿಕವಾಗಿ ಆಹ್ವಾನವೂ ನೀಡಿಲ್ಲ.

ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ತುಮಕೂರು ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರು. ಅವರೂ ಕೂಡ ಸಪ್ತಾಹ ಕಾರ್ಯಕ್ರಮಕ್ಕೆ ಹಾಜರಾಗದೆ ದೂರ ಉಳಿದಿದ್ದಾರೆ. ಕಿನಿಷ್ಠ ಅವರಾದರೂ ವೇದಿಕೆಯಲ್ಲಿ ಇರಬೇಕಾಗಿತ್ತು. ಅದೂ ಆಗಿಲ್ಲ. ಮೈದಾನದಲ್ಲಿ ಕಂಡು ಬಂದ ಕಟೌಟ್ ಗಳಲ್ಲಿ ಗಮನ ಸೆಳೆದದ್ದು ಎಂದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಟೌಟ್. ಅವರ ಪಕ್ಕದಲ್ಲಿ ಸಚಿವ ಬಸವರಾಜ ಬೊಮ್ಮಾಯಿ, ಕೆ.ಎನ್.ರಾಜಣ್ಣ, ಆರ್. ರಾಜೇಂದ್ರ ಅವರ ಕಟೌಟ್ ಗಳು. ಇನ್ನೂ ಬೇರೆ ಯಾವುದೇ ರಾಜಕೀಯ ಪಕ್ಷಗಳ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರ ಪೋಟೋಗಳು ಕಂಡು ಬರಲಿಲ್ಲ.

ತುಮಕೂರು ಗ್ರಾಮಾಂತರ ಕ್ಷೇತ್ರದ ಹಾಲಿ ಶಾಸಕ ಗೌರಿಶಂಕರ್ ಮತ್ತು ರಾಜಣ್ಣ ನಡುವೆ ಉತ್ತಮ ಬಾಂಧ್ಯವಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಆ ಕಾರಣಕ್ಕಾಗಿಯೇ ಅವರ ಹೆಸರನ್ನು ಕೈಬಿಡಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಗೌರಿಶಂಕರ್ , ಸಣ್ಣ ಬುದ್ದಿ ತೋರಿಸುತ್ತದೆ ಎಂದಷ್ಟೇ ಹೇಳಿದ್ದಾರೆ. ಆಧರೆ ಇಡೀ ವೇದಿಕೆಯ ಮೇಲೆ ಬಿಜೆಪಿಯ ಮುಖಂಡರೇ ರಾರಾಜಿಸಿದ್ದಂತು ಸತ್ಯ. ಹೀಗಾಗಿ ಇಂದು ನಡೆದ ಸಮಾರಂಭ ಕೇವಲ ಬಿಜೆಪಿಯ ಸಮಾವೇಶದಂತೆ ಕಂಡು ಬಂತು. ಮಾಜಿ ಸಚಿವ ರಾಜಣ್ಣ ಆಪ್ತಮಿತ್ರ ಸೊಗಡು ಶಿವಣ್ಣ ಅವರಿಗೆಗೆ ವೇದಿಕೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ. ಆದರೆ ತುಮಕೂರು ನಗರದ ಮಾಜಿ ಶಾಸಕ ರಫೀಕ್ ಅಹಮದ್ ಅವರ ಹೆಸರನ್ನು ಕೈಬಿಡಲಾಗಿದೆ.

ತುಮಕೂರು ಜಿಲ್ಲೆಯ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರಿಂದ ರಾಜಣ್ಣ ಅವರಿಗೆ ನಿರೀಕ್ಷಿಸಿದಷ್ಟು ಬೆಂಬಲ ಸಿಗುತ್ತಿಲ್ಲ. ಹೀಗಾಗಿ ರಾಜಣ್ಣ ಬೇರೆಯದೇ ದಾರಿ ಹಿಡಿದಿದ್ದಾರೆ ಎನ್ನುತ್ತವೆ ಆಪ್ತ ಮೂಲಗಳು. ನನ್ನ ಕೈಬಿಟ್ಟರೆ ನಾನು ಸುಮ್ಮನಂತೂ ಇರುವುದಿಲ್ಲ ಎಂಬುದನ್ನು ಕೆಎನ್ ರಾಜಣ್ಣ ಈ ಮೂಲಕ ಹೇಳಿದಂತಿದೆ.

Comment here