ತುಮಕೂರು ಲೈವ್

ಸಾಧನ ಸೋಫಾನ’ ಗ್ರಂಥ ಬಿಡುಗಡೆ

ವರದಿ: ತುರುವೇಕೆರೆ ಪ್ರಸಾದ್


ತುರುವೇಕೆರೆ: ಅಧ್ಯಯನಶೀಲತೆ ಮತ್ತು ಅಧ್ಯಾಪನ ಪ್ರವೃತ್ತಿ ಕ್ಷೀಣಿಸುತ್ತಿದ್ದು ಯುವ ಜನಾಂಗ ಅಂಧಾನುಕರಣೆಯ ಬೆನ್ನುಹತ್ತಿದ್ದಾರೆ. ಇದರಿಂದ ಸಾಂಸ್ಕೃತಿಕ ಪಲ್ಲಟ ಉಂಟಾಗಿದ್ದು ವ್ಯಕ್ತಿ ಪರಿಪೂರ್ಣತೆ, ಬದುಕಿನ ಸಾರ್ಥಕತೆ ಮತ್ತು ಲೋಕಕಲ್ಯಾಣದ ಉದ್ದೇಶಗಳು ಮರೆಯಾಗುತ್ತಿವೆ ಎಂದು ಮತ್ತೂರು ಸಂಸ್ಕೃತಗ್ರಾಮದ ಶ್ರೀ ಜಾನಕೀರಾಮ ಆಶ್ರಮದ ಶ್ರೀ ಬೋಧಾನಂದೇಂದ್ರ ಸರಸ್ವತೀ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ಗಾಯತ್ರೀ ಭವನದಲ್ಲಿ ತಾಲ್ಲೂಕು ಬ್ರಾಹ್ಮಣ ಸಭಾ ಮತ್ತು ಪ್ರಣವಾನಂದತೀರ್ಥ ಪ್ರಕಾಶನ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಶ್ರೀ ಪ್ರಣವಾನಂದತೀರ್ಥ ಸ್ವಾಮೀಜಿ ವಿರಚಿತ ‘ಸಾಧನ ಸೋಫಾನ’ ಗ್ರಂಥವನ್ನು ಲೋಕಾರ್ಪಣೆಗೊಳಿಸಿ ಅವರು ಆಶೀರ್ವಚನ ನೀಡಿದರು.

ಲೋಕದ ಪ್ರತಿಯೊಂದು ಘಟನೆಯೂ ಕಾರ್ಯಕಾರಣ ಸಂಬಂಧವನ್ನು ಹೊಂದಿರುತ್ತದೆ. ಯಾವುದೋ ಕಾಲಘಟ್ಟದಲ್ಲಿ ಒಂದು ಕೃತಿ ರಚನೆಯ ಪ್ರೇರಣೆಯಾಗುತ್ತದೆ.ಕರ್ಮ, ಚಿತ್ತಶುದ್ದಿ, ಮನಸ್ಸಿನ ಪರಿಪಕ್ವತೆಯ ಮೂಲಕ ಜ್ಞಾನವನ್ನು ಪಡೆಯಬೇಕು. ಸಾಧನ ಸೋಫಾನದಂತಹ ಕೃತಿಗಳು ನೇರವಾಗಿ ದಿವ್ಯ ಅನುಭವ ಪಡೆಯಬಹುದಾದ ತಾತ್ವಿಕ ವಿಚಾರಗಳನ್ನು ಹೊಂದಿರುವುದರಿಂದ ಅದು ಶ್ರೇಷ್ಠಕೃತಿಯೆನಿಸುತ್ತದೆ ಎಂದರು.
ತುಮಕೂರಿನ ಸಮರ್ಥ ಸದ್ಗುರು ಶ್ರೀ ಬ್ರಹ್ಮಚೈತನ್ಯ ಟ್ರಸ್ಟ್ನ ಅಧ್ಯಕ್ಷ ಶ್ರೀನಿವಾಸ ಶರ್ಮ ಕೃತಿ ಕುರಿತು ಮಾತನಾಡಿ ಶ್ರೀ ಪ್ರಣವಾನಂದ ತೀರ್ಥರ ಪೂರ್ವಾಶ್ರಮದ ಬದುಕಿನ ಚಿತ್ರಗಳ ಜೊತೆಗೆ ಸನ್ಯಾಸ ಸ್ವೀಕಾರದ ನಂತರದ ಆಧ್ಮಾತ್ಮ ಪಯಣ, ತೀರ್ಥಯಾತ್ರೆಯ ಅನುಭವಗಳು ಸಾಧನ ಸೋಫಾನ ಕೃತಿಯನ್ನು ಒಂದು ಅಮೂಲ್ಯ ಜೀವನಚರಿತ್ರೆಯಾಗಿಸಿವೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಬ್ಬೂರುಕಮ್ಮೆ ಸೇವಾಸಮಿತಿಯ ಅಧ್ಯಕ್ಷ ಡಾ.ಎ.ವಿ.ಪ್ರಸನ್ನ ಮಾತನಾಡಿ ಒಬ್ಬ ವ್ಯಕ್ತಿ ಚಿರಂತನವಾಗಿ ನೆನಪಿನಲ್ಲಿ ಉಳಿಯುವುದು ಕೃತಿಗಳ ಮೂಲಕ ಮಾತ್ರ. ಧರ್ಮದಲ್ಲಿ ತತ್ವ ಮುಖ್ಯವಲ್ಲ, ಅದರ ಪ್ರಯೋಗವೇ ಮುಖ್ಯ. ಪ್ರಣವಾನಂದ ತೀರ್ಥರು ಆಧ್ಯಾತ್ಮದ ಜೊತೆಗೆ ಸಾರ್ಥಕ ಜೀವನದ ಮೌಲ್ಯಗಳನ್ನು ದಾಖಲಿಸುವ ಮೂಲಕ ಜ್ಞಾನ ಸಂಹಿತೆಯನ್ನೇ ನೀಡಿದ್ದಾರೆ ಎಂದರು.

ಸಮಾರಂಭದಲ್ಲಿ ನಾಗಮಂಗಲ ಸಂಸ್ಕೃತ ವಿದ್ವಾಂಸ ಭಾಸ್ಕರ ಭಟ್ ಮಾತನಾಡಿದರು. ಶ್ರೀ ಪ್ರಣವಾನಂದತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.

ಟಿ.ಎನ್.ರವಿಶಂಕರ್,ಎಸ್.ಎಂ.ನಾಗರತ್ನಮ್ಮ ಇತರರು ಭಾಗವಹಿಸಿದ್ದರು. ಉಷಾ ಶ್ರೀನಿವಾಸ್ ಸ್ವಾಗತಿಸಿದರು.

ಟಿ.ವಿ.ರಂಗನಾಥ್ ವಂದಿಸಿದರು.ರಂಗನಾಥ್ ಕಟ್ಟಾಯ ನಿರೂಪಿಸಿದರು.

Comment here