ಜನಮನ

ಹೆಣ್ಣು ನೋಡುವ ಭಾಗ್ಯವೂ ಕಲಾ ವಿಭಾಗದ ನೋವು….

 

ಹೆಣ್ಣು ನೋಡುವ ಭಾಗ್ಯವೂ ಕಲಾ ವಿಭಾಗದ ನೋವು….

ನಮ್ಮಗ ಆರ್ಟ್ಸ್ (ಕಲಾ ವಿಭಾಗ) ಓದಿರೋದು ನೋಡಿ ಮತ್ತೇ – ಈ ಮಾತನ್ನು ದೊಡ್ಡಮ್ಮ ಪದೇಪದೇ ಹೇಳುತ್ತಿದ್ದರೆ ಕುಡಿಯುತ್ತಿದ್ದ ಕಾಫಿ ಗಂಟಲಲ್ಲೇ ಸಿಗಾಕಿಕೊಳ್ಳುತ್ತಿತ್ತು.

 

ನೋಡಿ ಮತ್ತೇ ಆಮ್ಯಾಲೆ  ಇಲ್ಲ ಅನ್ ಬ್ಯಾಡ್ದು ಮೊದಲೇ ನಿಮ್ಮ ಹುಡುಗಿಗೆ ಹೇಳಿ ಬಿಡಿ ಎಂದು ದೊಡ್ಡಮ್ಮ ಹೇಳ್ತಲೇ ಇದ್ರು, ಹಾಗೇ ಹೇಳಕ್ಕೆ ಅವರಿಗೂ ಭಯವೂ ಇದೆ. ಕೊನೆಗೂ ಕಾಫಿ ಕುಡಿದು ಈಚೆ ಬಂದುದ್ದಾಯಿತು. ಈಗಾಗಲೇ ಈ ಹುಡುಗಿ ನೋಡುತ್ತಿರುವುದು ಇಪ್ಪತ್ತನೆಯದು ಇರಬೇಕು,

ನೋಡಲು ಸುಂದರವಾಗಿದ್ರು ಹುಡ್ಗ ಆರ್ಟ್ಸ್ ಓದಿರುವುದು ಹುಡ್ಗಿ  ಕೊಡೋದಿಲ್ಲ ಅಂದೋರೆ ಹೆಚ್ಚು, ಇಂಗ್ಲಿಷ್ ಎಂ ಎ ಮಾಡಿದ್ರೂ ಸಹ ಜನರಿಗೆ ಅದ್ಯೇಕೆ ಸೈನ್ಸ್ ಮೇಲೆ ಅಷ್ಟೊಂದು ಪ್ರೀತಿ. ಕಲಾ ವಿಭಾಗದಲ್ಲಿ ಇಂಗ್ಲಿಷ್ ಓದಿದ್ರೂ ಇಂಗ್ಲಿಷ್ ಬರೋಲ್ಲ ಅಥವಾ ದಡ್ಡ ಅನ್ನೋದ್ ಎಲ್ಲರ ತೀರ್ಮಾನವಾಗಿಬಿಟ್ಟಿದೆ. ಹೆಣ್ಣುನೋಡುವ ಶಾಸ್ರ್ತಕ್ಕೆ ಮೊದಲೇ ಎಷ್ಟೋ ಜನ ಅಯ್ಯೋ ಆಟ್ಸ್ ನಲ್ಲಿ ಇಂಗ್ಲಿಷ್ ಎಂ,ಎ.ನಾ ಬೇಡ ಎಂದವರೇ ಹೆಚ್ಚು.

ಹುಡ್ಗ ಬುದ್ದಿವಂತ ಆಗಿದ್ರೆ ಆಟ್ಸ್ ಓದಿದ ನಂತರ ಇಂಗ್ಲಿಷ್ ಎಂ,ಎ, ಏಕೆ ಮಾಡ್ತಿದ್ದ ಸೈನ್ಸ್ ತಗೊಂಡ್ ಓದುತ್ತಿದ್ದ ಎಂದವರೇ ಹೆಚ್ಚು.

ಮದುವೆ ಕನಸುಗಲೆಲ್ಲ ನುಚ್ಚು ನೂರಾಗಿವೆ,  ಪಾಪ! ಉಳಿದವರ ಗತಿ ಏನಾಗಬೇಡ.

ಒಮ್ಮೆ ಈಗಾಯ್ತು ನೋಡಿ. ಅಪ್ಪ ಹೇಳಿದ್ರು, ನೀನು ಬರೋದ್ ಬೇಡ, ಹೊರಗಡೆ ಶಾಂಪಿಂಗ್ ಮಾಲ್ ಗೆ ಹೋಗು, ನಾವು ಹುಡ್ಗಿ ನೋಡಿ ಬರ್ತೀತಿ. ಅವರು ಒಪ್ಪಿದ್ದರೆ ಬರುವೆಯಂತೆ ಅಂದ್ರು!

ನನಗೋ ಬೇಸರ, ಥೂ ಹೀಗೂ ಉಂಟೆ, ಯಾಕಾದ್ರು ಆರ್ಟ್ ಓದಿದನ್ನೋ ಅಂತ ನೋವು, ಸಮಾಜಶಾಸ್ತ್ರ ಎಂದರೆ ಪ್ರೀತಿ. ಹೀಗಾಗಿ ಸಮಾಜಶಾಸ್ರ್ರ ಓದಬೇಕು ಅಂತಾಲೆ ಕಲಾ ವಿಭಾಗ ಆಯ್ಕೆ ಮಾಡಿಕೊಂಡವನು, ಆದರೆ ಸಾಹಿತ್ಯದ ಗೀಳಿಗೆ ಬಿದ್ದು ಇಂಗ್ಲಿಷ್ ಕೈ ಹಿಡಿದವನು ನಾನು. ಜನರಿಗೆ ಕೆಲಸವೂ ಮುಖ್ಯವಾಗುತ್ತಿಲ್ಲ. ಸರ್ಕಾರಿ ಕೆಲಸದಲ್ಲಿ ಇದ್ದರೆ, ಭ್ರಷ್ಟ ನೌಕರನಾಗಿದ್ದರೆ, ದುಡ್ಡಿದ್ದರೆ ಈ ಎಲ್ಲಾ ಪ್ರಶ್ನೆಗಳು ಬರುತ್ತಿರಲಿಲ್ಲವೇ ಎಂದು ಕಾಡಿದುಂಟು. ಆದರೆ ಎಲ್ಲರಿಗೂ ಸರ್ಕಾರಿನೌಕರಿಯೇ ಸಿಗುತ್ತದೆಯೇ ? ಸಾಪ್ಟ್ ವೇರ್ ಕಂಪನಿಯೊಂದರಲ್ಲಿ ಕೈ ತುಂಬಾ ಸಂಬಳ ಎಣಿಸುತ್ತಿದ್ದರೂ ಯಾಕೆ ಜನರು ಈ ರೀತಿ ಹೇಳುತ್ತಿದ್ದಾರೆ ? ಹೀಗೆ ನಾನಾ ಪ್ರಶ್ನೆಗಳು ತಲೆಯಲ್ಲಿ ಕೊರೆಯುತ್ತಿರಬೇಕಾದರೆ ಅಪ್ಪ ಫೋನ್ ಮಾಡಿದ್ರು, ಬೇಗ ಬಾ, ಹುಡುಗಿ ಮನೆಯೋರು ಒಪ್ಪಿದ್ದಾರೆ, ನನಗೂ ಖುಷಿ,

ಕೂಡಲೇ ಹುಡುಗಿಯ ಮನೆ ಹಿಂಬದಿಯ ಶಾಂಪಿಂಗ್ ಕಾಂಪ್ಲೆಕ್ಸ್ಸ ನಲ್ಲಿದ್ದ ನಾನು ಕಾರಿನಲ್ಲಿ ಹೊರಟೆ .  ಮೊದಲೇ ಫೋಟೊದಲ್ಲಿ ಹುಡುಗಿ ನೋಡಿದ್ದ ಕಾರಣ ಏನೇನೋ ಆಸೆಗಳಿದ್ದವು. ಕೊನೆಗೂ ಕಲಾ ವಿಭಾಗವೇ ಗೆದ್ದಿತ್ತು. ಇಂಥ ಚೆಂದನೆಯ ಹುಡುಗಿ ಡಾಕ್ಟರಿಗೂ ಸಿಗುತ್ತಿರಲಿಲ್ಲ ಎಂದು ಮನಸ್ಸು ಉಯ್ಯಾಲೆಯಾಡಿತು,

ಕೊನೆಗೂ ಹೆಣ್ಣಿನಮನೆ  ಕದ ತಟ್ಟಿದೆ. ಎಲ್ಲವೂ ಸರಿಯಾಯಿತು.  ಆದರೆ ಹುಡುಗಿ ಬೇರೆಯವಳೇ ಆಗಿದ್ದಳು. ನಮ್ಮ ದೊಡ್ಡ ಮಗಳಿಗೆ ಸೈನ್ಸ್ ಓದಿರೋರೋ ಹುಡುಗನೇ ಬೇಕಂತೆ, ಇವಳು ಚಿಕ್ಕ ಮಗಳು, ಅವಳಿಗಿಂತ ಒಂದು ವರ್ಷ ಚಿಕ್ಕವಳಷ್ಟೇ. ಇಬ್ಬರೂ ಒಮ್ಮೆಗೆ ಮದುವೆ ಮಾಡುವ ಮನಸ್ಸು ಇದೆ. ನೀವು ಒಪ್ಪಿಕೊಂಡರೆ ಆಗಬಹುದು ಎಂದರು, ಯಾಕೋ ನನಗೆ ಸರಿ ಬರಲಿಲ್ಲ. ತಲೆ ತಿರುಗಿದಂತಾಯಿತು, ಅಪ್ಪಾ ಏನ್ ಹೇಳಿದ್ರೋ ಗೊತ್ತಾಗಲಿಲ್ಲ. ಸುಮ್ಮನೇ ಕೂತೆ. ನಂತರ ಎಲ್ಲರೂ ಹುಡುಗಿ ನೋಡುವ ಶಾಸ್ತ್ರ ಮುಗಿಸಿ ಹೊರಬಂದೆವು. ಕಾರಿನಲ್ಲಿ ಅಪ್ಪ ನಗುತ್ತಿದ್ದರು. ಹುಡುಗಿ ಮತ್ತಷ್ಟು ಚಿಕ್ಕವಳು, ದೊಡ್ಡವಳಷ್ಟು ಚೆನ್ನಾಗಿಲ್ಲದಿರಬಹುದು. ಇನ್ನೊಂದು ವರ್ಷ ಕಳೆದರೆ ಇವಳೇ ಅವಳಿಗಿಂತ ಚೆನ್ನಾಗಿ ಕಾಣ್ತಳೆ, ಖಾಸಗಿ ಕೆಲಸ ಮಾಡೋನಿಗೆ, ಆಟ್ಸ್  ಓದಿರೋನಿಗೆ ಇದಕ್ಕಿಂತ ಹುಡುಗಿ ಸಿಗಲಾರಳು. ಮನೆಯ ಕಡೆಯೂ ಚೆನ್ನಾಗಿದ್ದಾರೆ. ಇಬ್ಬರೇ ಹೆಣ್ಣು ಮಕ್ಕಳು, ಮುಂದೆ ಅವನಿಷ್ಟ ಎಂದರು. ನಾನೇನು ಮಾತನಾಡಲಿಲ್ಲ.

ಬೆಳಿಗ್ಗೆ ಆಫೀಸಿನ ಕಚೇರಿಯಲ್ಲಿ ಮುಖ ನೋಡಿಕೊಂಡವನಿಗೆ ನಾನು ಅಷ್ಟೇನು ಚೆನ್ನಾಗಿಲ್ಲ ಎನಿಸಿತು. ಯಾಕೋ ಕಲಾ ವಿಭಾಗ ಕಣ್ಣ ಮುಂದೆ ಓಡಿದಂತಾಯಿತು.  ಅಪ್ಪನಿಗೆ ಫೋನ್ ಮಾಡಿ ಹೇಳಿದೆ, ಹುಡುಗಿ ಓಕೆ ಅಪ್ಪಾ ಅಂತಾ!

Comment here