ತುಮಕೂರ್ ಲೈವ್

ಹೊಟ್ಟೆಪಾಡಿಗಾಗಿ ಕಾವಿ ಧರಿಸಿರುವ ಸ್ವಾಮೀಜಿಗಳು: ಶಾಸಕ ಶ್ರೀನಿವಾಸ್ ಟೀಕೆ

Public story


ಗುಬ್ಬಿ: ಕೇವಲ ಹೊಟ್ಟೆ ಪಾಡಿಗಾಗಿ ಕಾವಿ ಧರಿಸಿ ಸಮಾಜ ಹಾಳು ಮಾಡಲು ಹೊರಟಿರುವ ಈಗಿನ ಸ್ವಾಮಿಜೀಗಳಿಂದ ನಮ್ಮ ಸಮಾಜ ಯಾವ ಬದಲಾವಣೆಯನ್ನು ಬಯಸಲು ಸಾಧ್ಯವಿಲ್ಲ ಕಾವಿ ಬಿಚ್ಚಿಟ್ಟು ಖಾಧಿ ಧರಿಸಿ ಕೊಂಡು ಸುಮ್ಮನೆ ರಾಜಕೀಯಕ್ಕೆ ಬನ್ನಿ ಎಂದು ಜೆ.ಡಿ.ಎಸ್. ಶಾಸಕ ಎಸ್.ಆರ್.ಶ್ರೀನಿವಾಸ್ ಹೇಳಿದರು.

ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಹೆಚ್ಚುವರಿ ಕಟ್ಟಡಗಳ ನಿರ್ಮಾಣಕ್ಕೆ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕಾಯಕ ಯೋಗಿ ನಡೆದಾಡುವ ದೇವರು ಎಂದು ಇಡೀ ನಾಡಿಗೆ ಪ್ರಸಿದ್ದಿಯಾದ ಮಹಾನ್ ಚೇತನ ಶ್ರೀ ಶಿವಕುಮಾರ ಸ್ವಾಮೀಗಳು ಜನಿಸಿದ ನಾಡಿನಲ್ಲಿ ಕೆಲವು ಮಠಾಧೀಶರು ಕಾಯ ವಾಚ ಮನಸ ಪ್ರತಿಜ್ಞೆ ಮಾಡಿ ಸಮಾಜದ ಎಲ್ಲಾ ವರ್ಗಗಳ ಕಲ್ಯಾಣಕ್ಕೆ ನಮ್ಮ ಜೀವನವನ್ನೇ ಪಣಕಿಡುತ್ತಿವೆಂದು ಪಣತೊಟ್ಟು ಈ ರೀತಿ ಒಂದು ಪಕ್ಷಕ್ಕೆ ಒಬ್ಬ ರಾಜಕೀಯ ವ್ಯಕ್ತಿಗೆ ಬೆಂಬಲ ನೀಡಲು ಮಠಗಳ ಸ್ವಾಮಿಗಳು ನಿಲ್ಲುವುದು ನಾಚಿಕೆ ಗೇಡಿನ ಸಂಗತಿ ಎಂದರು.

ಸರ್ವವನ್ನು ಪರಿತ್ಯಾಗ ಮಾಡಿ ನಾವು ಸಮಾಜದ ಉದ್ದಾರಕ್ಕೆ ಶ್ರಮಿಸುತ್ತೇವೆಂದು ಪ್ರತಿಜ್ಞೆ ಮಾಡಿದ ಸ್ವಾಮಿಗಳು ಇಂದು ಯಾವ ಸ್ಥಿತಿಗೆ ಬಂದಿದ್ದಾರೆ ಎಂಬುದು ತಿಳಿಯುತ್ತಿಲ್ಲ ಇಂತಹ ಸ್ವಾಮಿಗಳಿಂದ ಸಮಾಜದ ಜನತೆ ಯಾವ ಒಳ್ಳೆಯ ಸಂದೇಶ ನಿರೀಕ್ಷಿಸುತ್ತದೆ ಮಠ ಮಾನ್ಯಗಳನ್ನು ನಡೆಸಲು ನಿಮಗೆ ಏನು ಯೋಗ್ಯತೆ ಇದೆ ನಿಮ್ಮಂತ ಸ್ವಾಮಿಗಳಿಂದ ಜನತೆ ಏನು ಕಲಿಯಲು ಸಾಧ್ಯವಾಗುತ್ತದೆ ಒಂದು ರಾಜಕೀಯ ಪಕ್ಷದ ಪರ ಒಬ್ಬ ವ್ಯಕ್ತಿಯ ಪರ ನಿಲ್ಲುವ ನಿಮ್ಮಿಂದ ಯಾವ ನಿರೀಕ್ಷೆ ಗಳನ್ನು ಪಡೆಯಲು ಬಯಸುತ್ತದೆ ಸ್ವಾಮೀಜಿಗಳು ಇಗೆಲ್ಲ ಮಾಡುವ ಬದಲು ಸುಮ್ಮನೆ ನಮ್ಮಂತೆ ರಾಜಕೀಯಕ್ಕೆ ಬಂದು ಬಿಡಿ ಆಗಲಾದರು ಮಠ ಮಾನ್ಯಗಳ ಮೇಲಿನ ಜನತೆಯ ನಂಬಿಕೆ ಉಳಿಯುತ್ತದೆ ಪ್ರಸ್ತುತ ಎಲ್ಲಾ ಮಠಾಧೀಶರು ಮಠ ಬಿಟ್ಟು ಊರು ಸೇರಿದಂತಿದೆ ಎಂದು ತಿಳಿಸಿದರು.

ಯಡಿಯೂರಪ್ಪ ನವರ ರಾಜಿನಾಮೆಯ ಹಿನ್ನೆಲೆ ಯಾವ ಮಧ್ಯಂತರ ಚುನಾವಣೆಯ ಪ್ರಶ್ನೆಯೇ ಇಲ್ಲಿ ಬರುವುದಿಲ್ಲ ಚುನಾವಣೆ ಎದುರಿಸಲು ಯಾವ ಪಕ್ಷವೂ ಸದ್ಯದ ಪರಿಸ್ಥಿತಿಯಲ್ಲಿಲ್ಲ ಯಾವ ಮುಖಂಡರಿಗೂ ಚುನಾವಣೆ ಅಗತ್ಯವಿಲ್ಲ ಎಂದ ಅವರು ಜಾತಿಗೊಂದು ನಿಗಮ ರಚನೆ ಸಮಾಜವನ್ನು ಹಾಳು ಮಾಡಿದಂತಾಗುತ್ತದೆ ಎಂದರು.

ಸುಖಾಸುಮ್ಮನೇ ನಿಗಮ ಮಾಡಿದ್ದು ಚುನಾವಣೆ ಗಿಮಿಕ್ ಆಗಿದೆ ಈ ಜತೆಗೆ ಮದಲೂರು ಕೆರೆಗೆ ಹೇಮೆ ಹರಿಸುವ ವಿಚಾರದಲ್ಲೂ ಗಿಮಿಕ್ ನಡೆಸಿದ್ದರು. ಮುಖ್ಯಮಂತ್ರಿಗಳು ಮದಲೂರು ಕೆರೆಗೆ ನೀರು ಹರಿಸುವುದಾಗಿ ಹೇಳಿದರೆ, ಜಿಲ್ಲಾ ಮಂತ್ರಿಗಳು ಅಧಿಕಾರಿಗಳಿಗೆ ಜೈಲು ಶಿಕ್ಷೆಯ ಎಚ್ಚರಿಕೆ ನೀಡಿ ಹೇಮೆ ಹರಿಸದಂತೆ ಎಚ್ಚರಿಕೆ ನೀಡಿದ್ದಾರೆ ಎಂದರು.

ಪ್ರತಿ ಚುನಾವಣೆಗೆ ಒಂದು ವಿಚಾರವನ್ನು ಮುಂದಿಟ್ಟುಕೊಂಡು ವಿಧ ವಿಧವಾಗಿ ಜನರನ್ನು ಮರಳು ಮಾಡುವ ಈ ನಟನೆ ಬಿಜೆಪಿಯವರಿಗೆ ಮಾತ್ರ ಬರುತ್ತದೆ ಎಂದರು.

ಪಟ್ಟಣದ ಅಭಿವೃದ್ದಿಗೆ ಸದ್ಯ ೧೦ ಕೋಟಿ ರೂಗಳ ಕ್ರಿಯಾ ಯೋಜನೆ ಸಿದ್ದಗೊಳ್ಳುತ್ತಿದ್ದು ಮುಂದಿನ ಮೂರು ತಿಂಗಳಲ್ಲಿ ಪಟ್ಟಣದ ಹಳೇಭಾಗದ ಎಲ್ಲಾ ರಸ್ತೆಗಳು ಅಭಿವೃದ್ದಿಗೊಳ್ಳಲಿದೆ. ಡಿಗ್ರಿ ಕಾಲೇಜು ರಸ್ತೆ ಈಚೆಗೆ ಡಾಂಬರೀಕರಣ ಮಾಡಲಾಗಿದೆ. ಹೀಗೆ ಪ್ರಮುಖ ರಸ್ತೆಗಳು ಡಾಂಬಾರ್ ರಸ್ತೆಯಾಗಿ ಮಾರ್ಪಾಡು ಆಗಲಿದೆ ಎಂದರು.

ಈ ಸಂದರ್ಭದಲ್ಲಿ ಪ ಪಂ ಅಧ್ಯಕ್ಷರಾದ ಜಿ.ಎನ್.ಅಣ್ಣಪ್ಪಸ್ವಾಮಿ, ಉಪಾಧ್ಯಕ್ಷೆ ಮಹಾಲಕ್ಷಮ್ಮ ಲೋಕೇಶ್‌ಬಾಬು, ಸದಸ್ಯರಾದ ಸಿ.ಮೋಹನ್, ಕುಮಾರ್, ಶೌಕತ್ ಆಲಿ, ರೇಣುಕಾಪ್ರಸಾದ್, ಜಿ.ಆರ್.ಶಿವಕುಮಾರ್, ಮಂಗಳಮ್ಮ, ಶ್ವೇತಾ, ಬಿಇಓ ಸಿ.ಸೋಮಶೇಖರ್, ಪ್ರಾಚಾರ್ಯ ಮಂಜುನಾಥ್, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸಿ.ಆರ್.ಶಂಕರ್‌ಕುಮಾರ್ ಇತರರು ಇದ್ದರು.

Comment here