ತುಮಕೂರು ಲೈವ್

ಹೊಸವರ್ಷದ ಹೊಸ್ತಿಲಲ್ಲಿ ಒಂದಿಷ್ಟು..

ತುಳಸೀತನಯ


ತುಮಕೂರು: ಅಂತೂ ಇಂತು ಈ ವರ್ಷ ಮುಗಿತಪ್ಪ. ನಾಳೆಯಿಂದ ಹೊಸ ವರ್ಷ. ಇಷ್ಟು ದಿನ ಏನೇನು ಮಾಡಬೇಕೆಂದುಕೊಡಿದ್ದೇನೋ ಅದನ್ನ ಇನ್ಮೇಲೆ ಎಲ್ಲಾನು ಚಾಚೂ ತಪ್ಪದೇ ಮಾಡಬೇಕಪ್ಪ.

ಅರೇ..! ಇಷ್ಟು ದಿನ ಅಂದುಕೊಂಡು ಏನೂ ಮಾಡ್ದೇ ಸುಮ್ನೆ ಕಾಲ ಕಳೆದುಬಿಟ್ಟಿದ್ದೀನಿ ಇನ್ಮೇಲಾದ್ರೂ ಇತ್ತ ಗಮನಹರಿಸಬೇಕಪ್ಪಾ.

ಈ ವರ್ಷ ಮುಗಿಯೋ ಅಷ್ಟರಲ್ಲಿ ನಾನು ಏನಾರ ಮಾಡಿ ಸೆಟ್ಲಾಗಿ ಬಿಡಬೇಕು. ಹೀಗೆ ಪ್ರತಿಯೊಬ್ರೂ ಪ್ರತಿ ವರ್ಷ ಹೊಸ ವರ್ಷದ ಹೊಸ್ತಿಲಲ್ಲಿ ಹೆಜ್ಜೆ ಇಡುವಾಗ ಅಂದುಕೊಳ್ಳೋದು ಸಹಜ. ಆದರೆ ಅಂದುಕೊಂಡವುಗಳಲ್ಲಿ ವರ್ಷಾಂತ್ಯದಲ್ಲಿ ಎಷ್ಟು ಪೂರೈಸಿದ್ದೇವೆ ಎಂದು ಹಿಂತಿರುಗಿ ನೋಡಿದಾಗ ಬೆರೆಳಣಿಕೆಯಷ್ಟೆ ಕಾರ್ಯಗತವಾಗಿರುತ್ತವೆ. ಕೆಲವೊಮ್ಮೆ ಅವೂ ಕೂಡ ಆಗಿರುವುದಿಲ್ಲ.

ಮತ್ತದೇ.. ಅಯ್ಯೋ..! ಈ ವರ್ಷ ಅಂದುಕೊಂಡಿದ್ದು ಆಗಲಿಲ್ಲ ಅಂತಾ, ಹಾಕಿಕೊಂಡ ಯೋಜನೆಗಳು ಮುಂದಿನ ವರ್ಷಕ್ಕೆ ಮುಂದೂಡೋದು.

ಹೀಗೆ ಪ್ರತೀ ವರ್ಷ ದಿನಗಳು ಕಳೆದೇ ಹೋಯಿತು. ಒಂದೊಳ್ಳೆ ದಿನ ಬಂದೇ ಬರುತ್ತೆ ಅಂತಾ ಅಂದುಕೊಂಡು ಕಾದು ಕುಳಿತ್ತದೆ ಆಯ್ತು. ಆ ದಿನ ಬರಲಿಲ್ಲ. ಇದಕ್ಕೆ ನಾವೇ ಕಾರಣ ನಿಶ್ಚಿತ

ಯೋಜನೆಗಳೆನೋ ಮಾಡ್ತೇವೆ ಸರಿ. ಅದನ್ನು ಎಷ್ಟರ ಮಟ್ಟಿಗೆ ಅನುಸರಿಸಿದೇವೆ..? ಎಂದು ಪ್ರಶ್ನಿಸಿಕೊಂಡರೆ ದೊಡ್ಡ ಸೊನ್ನೆಯಷ್ಟೆ ಉತ್ತರವಾಗಿ ಮುಂದೆ ಬಂದು ನಿಲ್ಲುತ್ತದೆ. ಅಯ್ಯೋ..! ಇದೊಂತರ ಹೇಳಿ ಕೊಳ್ಳೋಕೆ ಆಗದಂತ ಸ್ಥಿತಿನಪ್ಪ.

ಹೇಳಂಗಿಲ್ಲಾ.. ಬಿಡಂಗಿಲ್ಲ. ಹೇಳಿಕೊಂಡ್ರೆ ಮರ್ಯಾದೆ ಹೋಗತ್ತೆ. ಹೇಳ್ದೆ ಇದ್ರೆ ಮನಸೂ ತಡೆಯೊಲ್ಲ. ಆಗಂತ ಹೇಳಿಕೊಳ್ಳೋದು ಅಲ್ಲ. ಯಾಕಂದ್ರೆ ಎಲ್ಲರ ಮನೆ ದೋಸೇನೂ ತೂತೆ. ಎಲ್ರೂ ಹಿಂಗೇ ಅಂದುಕೊಂಡಿರ್ತಾರೆ. ಆದ್ರೆ ಯಾವುದೋ ಕಾರಣಕ್ಕೆ ಅಂದುಕೊಂಡ ಕೆಲ್ಸ ಆಗ್ದೆ ಇರೋದ್ನ ಯಾರ ಅತ್ರನೂ ಹೇಳಿಕೊಂಡಿರಲ್ಲ ಅಷ್ಟೆ.

ಪ್ರತೀ ವರ್ಷ ಹೊಸ ವರ್ಷನೇ. ಡಿಸೆಂಬರ್ ತಿಂಗಳು ಬಂದ್ರೆ ಸಾಕು ಈ ವರ್ಷ ಮುಗೀತು. ಇನ್ನೇನು ಸ್ವಲ್ಪ ದಿನ ಹೊಸ ವರ್ಷ ಬಂದ್ಬಿಡತ್ತೆ ಅಂತ ಬಹಳ ಸಂತೋಷ ಪಡ್ತಾ ಇರ್ತೀವಿ. ಆದ್ರೆ ಬದಲಾಗುತ್ತಿರುವುದು ನಮ್ಮ ಮನೆ, ಆಫೀಸಿನ ಗೋಡೆ ಮೇಲೆ ನೇತಾಕಿರುವ ಕ್ಯಾಲೆಂಟರ್ ಅಷ್ಟೆ ಬದಲಾಗುತ್ತಿದೆ ಅಂತಾ ನಾವ್ಯಾರೂ ಅಂದ್ಕೊಳೋದೆ ಇಲ್ಲ.

ಹೊಸ ವರ್ಷ ಅಂತಾ ಆ ಒಂದು ದಿನ ಏನೆಲ್ಲಾ ಮೋಜು ಮಸ್ತಿ ಮಾಡಬೇಕು ಎನ್ನೋದರ ಬಗ್ಗೆಯಷ್ಟೆ ಆಲೋಚಿಸ್ತೀವಿ. ಆದ್ರೆ ಹೊಸ ವರ್ಷದ ಮೊದಲ ದಿನ ಕಳೆದು ಮರುದಿನ ಎಂದಿನಂತೆಯೇ ಅನ್ನೋದು ಮಾತ್ರ ಯಾರಿಗೂ ಅರಿವಾಗೋದೇ ಇಲ್ಲ. ಹಾಗೆ ಅನ್ನೋದೆ ಆದ್ರೆ ಬರೋ ಪ್ರತಿ ದಿನ ಕೂಡ ಹೊಸ ದಿನ, ಹೊಸ ವರ್ಷವೇ ಸರಿ. ರಾತ್ರಿ ಮಲಗಿ ಬೆಳಗ್ಗೆ ಜೀವಂತವಾಗಿ ಎದ್ದು ಪ್ರಪಂಚಕ್ಕೆ ಕಣ್ಣು ಬಿಡೋ ಸಂದರ್ಭ ನಮಗೆ ಸಿಗೋ ಮರು ಹುಟ್ಟು ಎನ್ನೋ ಸಿಂಪಲ್ ಲಾಜಿಕ್ ನಮ್ಗೆ ಅರ್ಥನೇ ಆಗೋಲ್ಲ. ಆ ಮೊದಲ ದಿನ ಇರುವ ಹುಮ್ಮಸ್ಸು ಅದ್ಯಾಕೆ ಪ್ರತಿ ದಿನ ಇರೋಲ್ಲ.


ಬದಲಾಗುತ್ತಿರುವುದು ಹಳೇ ವರ್ಷದ ದಿನಚರಿಯಷ್ಟೆ ವಿನಹ ನಮ್ಮ ಜೀವನದ ಗುರಿ ಮತ್ತು ನಮ್ಮ ಸಂಬಂಧಗಳು ಅಲ್ಲ. ಒಂದೇ ಒಂದು ದಿನ ಖುಷಿ ಪಡೋಕೆ ಹೊಸ ವರ್ಷ ಅಂತಾ ಆಚರಣೆ ಮಾಡುವ ಬದಲು ಬದುಕಿರುವ ಅಷ್ಟೂ ದಿನ ಖುಷಿಯಾಗಿರೋಕೆ ಒಳ್ಳೆ ವಿಚಾರ, ಆಲೋಚನೆ, ಒಳ್ಳೆ ಕೆಲಸ ಮಾಡೋ ಬಗ್ಗೆ ನಾವ್ಯಾಕೆ ಹೆಚ್ಚು ತಲೆ ಕೆಡಿಸಿಕೊಳ್ಳಲ್ಲ..? ನೀವೇನಂತಿರಿ…?

Comment here