ಭಾನುವಾರದ ಕವಿತೆ

ಭಾನುವಾರದ ಕವಿತೆ: ಝೆನ್ ಅಡುಗೆ

ಡಾ// ರಜನಿ ಎಂ

ಕಿವಿ ತುಂಬ ಮಾತುಗಳ ಮೊರೆತ….
ಮಲಗಿರುವ ಜನರ ಗೊರಕೆ

ಪೇಪರ್ ಓದಲು ಧಾವಂತ…
ಸರೇಗಮಾದ ರಫಿ ಬೇಡವೇ ಕಾಫಿಗೆ?

ತಾಳ್ಳೆ ಇಲ್ಲದೇ ತರಕಾರಿ ತುಂಡು …
ಬೆರಳಿಗೆ ರಕ್ತ ತಿಲಕ

ಕುಡಿಯಲು ಇಟ್ಟ
ಕುದಿಯುವ ನೀರು…

ಮನೆ ತುಂಬಾ ಹಲಸಿನ ಗಮ…
ಬಾಳೆ ಹಣ್ಣಿಗೆ ಮುತ್ತಿದ ಸಣ್ಣ ಸೊಳ್ಳೆ

ಅಡುಗೆ ಮಾಡುವಾಗ
ಧ್ಯಾನ ಮಾಡುವುದೇ?……..

ಹದವಾಗಿ ಮಾಡಿಕೊಂಡ ಕಾಫಿಯ ಕಮ
ಎಡಗೈಲಿ ಹಿಡಿದ ಪೇಪರ್ …
ಬೆನ್ನಿಗೆ ಎಳೆ ಬಿಸಿಲ ಕಾವು

ತಾಜಾ ಸಿಹಿ ಪರಂಗಿಯ ತುಂಡು …
ಗಾಜಿನ ಬೋಗುಣಿಯಲ್ಲಿ
ಗಾಜಿಗೆ ತಾಗಿದ ಫೋರ್ಕ್ ಸದ್ದು

ಹಲಸಿನ ಎಳೆ….
ಕಾಡಿನ ಜೇನು
ಆರ್ಗಾನಿಕ್ ಬೆಲ್ಲ …ಏಲಕ್ಕಿ ನೆಕ್ಕಿ

ಹೆಚ್ಚಾದ ಹಲಸು ಹಂಚಿ..
ಕಡಕ್ ಟೀ ಕೊಟ್ಟು

ಕೊನೆ ಮಾವಿನ ಜ್ಯೂಸ್ ಚಪ್ಪರಿಸಿ
ಕೈಮಾ ಉಂಡೆ ಬಾಯಿಗಿಡುವಾಗ

ಎದ್ದು ಬಂದಿರುವ ಕುಂಭಕರ್ಣರು
ಆಡದೇ ಉಳಿದ ಮಾತು…

ಕ್ಯಾರೆಟ್, ಈರುಳ್ಳಿಯಲ್ಲಿ ಮಾಡಿದ ಚಿಟ್ಟೆ …
ಬಿಳೀ ಮಜ್ಜಿಗೆಯಲ್ಲಿ ಹಸಿರು ರಂಗೋಲಿ

ಕಾವಲಿಯ ನೀರು ದೋಸೆಯಲ್ಲಿ …
ಮೂಡಿದ ಕೊರೋನಾ …

ಮುನಿಸೆಲ್ಲಾ ಮರೆತು ..

ಪರಂಗಿ ಹಣ್ಣಿಗೆ ಚುಚ್ಚಿದರೆ ಮುಳ್ಳು
ಸದ್ದಿಲ್ಲದೇ ಬಾಯಿ ಬಂದ ಹಣ್ಣು….

Comment here