ರಾಜ್ಯ

ಕೆರೆ ಕಾಮೇಗೌಡರ ವಿರುದ್ಧ ಗ್ರಾಮಸ್ಥರ ದೂರು

ದಾಸನದೊಡ್ಡಿ(ಮಳವಳ್ಳಿ): ಕಾಮೇಗೌಡರ ಕಾಟ ಹೆಚ್ಚಾಗಿದೆ. ಕಾಮಗಾರಿ ನಡೆಸಲು ಬಿಡುತ್ತಿಲ್ಲ. ಮಾತೆತ್ತಿದರೆ ಪೊಲೀಸರಿಗೆ ದೂರು ನೀಡುತ್ತಾರೆ…

-ಇದು ಕಾಮೇಗೌಡರ ಬಗ್ಗೆ ಗ್ರಾಮಸ್ಥರಲ್ಲಿದ್ದ ಅಸಮಾಧಾನ ನಿವಾರಿಸಲು  ಶುಕ್ರವಾರ ಗ್ರಾಮದಲ್ಲಿ ನಡೆದ ಶಾಂತಿ ಸಭೆಯಲ್ಲಿ ಗ್ರಾಮಸ್ಥರು ಕಾಮೇಗೌಡರ ವಿರುದ್ಧ ದೂರುಗಳ ಸರಮಾಲೆಯನ್ನು ಬಿಚ್ಚಿಟ್ಟ ಪರಿ.

ಕಾಮೇಗೌಡರಿಂದ ಗ್ರಾಮದಲ್ಲಿ ನೆಮ್ಮದಿ ಇಲ್ಲದಾಗಿದೆ. ಪೊಲೀಸ್ ಠಾಣೆಗೆ ಪದೇ-ಪದೇ ದೂರು ಕೊಡುತ್ತಾರೆ. ಕಟ್ಟೆಗಳಲ್ಲಿ ದನ ಕರು ಮೇಯಿಸಲು, ನೀರು ಕುಡಿಸಲು ಬಿಡುತ್ತಿಲ್ಲ. ಅಧಿಕಾರಿಗಳಿಗೆ ಪ್ರಭಾವ ಬೀರಿ ಮನ ಬಂದಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕಾಮೇಗೌಡರು 2013-14 ನೇ ಸಾಲಿನಲ್ಲಿ ಮರಳು ದಂಧೆ ನಡೆಸಿದ್ದಾರೆ.  ಅವರ ವಿರುದ್ಧ ದೂರು ದಾಖಲಾಗಿದೆ. ಈಗ ನಮ್ಮ ಮೇಲೆ ಅನಗತ್ಯವಾಗಿ ಕ್ರಿಮಿನಲ್ ದೂರು ನೀಡಿ ಪೊಲೀಸ್ ಠಾಣೆಗೆ ಅಲೆಯುವಂತೆ ಮಾಡಿದ್ದಾರೆ. ನಮಗೆ ನ್ಯಾಯ ಕೊಡಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಗ್ರಾಮದ ಕೆಲವರು ಆರೋಪಿಸಿದರು.

ಅವರಿಗೆ ಬಂದಿರುವ ಬಿರುದು ಪ್ರಶಸ್ತಿಗಳ ಮೇಲೆ ನಮಗೆ ಯಾವುದೇ ತಕರಾರಿಲ್ಲ. ಅವರಿಂದ  ಗ್ರಾಮಕ್ಕೆ ಒಳ್ಳೆಯ ಹೆಸರು ಬಂದಿದೆ.  ಕೆಲವರು ಇಡೀ  ಗ್ರಾಮವೇ ಅವರ ವಿರುದ್ಧವಿದೆ ಎಂಬಂತೆ ಸುಳ್ಳು ಸುದ್ಧಿ ಹಬ್ಬಿಸುತ್ತಿದ್ದಾರೆ ಎಂದರು.

ಕಾಮೇಗೌಡರು ತುಂಬಾ ಒರಟು ಮನುಷ್ಯ.  ಅವರಿಗೆ ಕೋಪ ಹೆಚ್ಚು, ಅವರ ವರ್ತನೆಯಿಂದ ಜನರಿಗೆ ತೊಂದರೆಯಾಗಿರಬಹುದು ಎಂದು ಕಾಮೇಗೌಡ ಅವರ ಸಂಬಂಧಿ ತಿಮ್ಮೇಗೌಡ ಸಭೆಗೆ ಹೇಳಿದರು.

ತಹಶೀಲ್ದಾರ್ ಕೆ.ಚಂದ್ರಮೌಳಿ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಬಿ.ಎಸ್.ಸತೀಶ್, ಸಿಪಿಐ ಧನರಾಜ್, ಎಸ್ಐ ಉಮಾವತಿ ಇದ್ದರು.

 

Comment here