ತುರುವೇಕೆರೆ : ಮೇಯಲು ಬಿಟ್ಟಿದ್ದ ಸುಮಾರು 40 ಕುರಿಗಳು ಹಠಾತ್ತನೆ ಸಾವನ್ನಪ್ಪಿರುವ ಹೃದಯ ಕಲಕುವ ಘಟನೆ ತಾಲ್ಲೂಕಿನ ಮಾಯಸಂದ್ರ ಹೋಬಳಿ ವಡವನಘಟ್ಟ ಸಮೀಪ ದೊಡ್ಡ ಮಲ್ಲಿಗೆರೆ ಗೇಟ್ ಬಳಿ ನಡೆದಿದೆ.
ಶಿರಾ ಕಡೆಯ 6ಜನ ಅಲೆಮಾರಿ ಕುರಿಗಾಹಿಗಳು ಸುಮಾರು 800 ಕುರಿಗಳನ್ನು ಮಲ್ಲಿಗೆರೆ ಗೇಟ್ ಬಳಿಯ ಗಿಡಗೆಂಟೆಗಳ ಪ್ರದೇಶದಲ್ಲಿ ಮೇಯಲು ಬಿಟ್ಟಿದ್ದರು. ಮೇಯುತ್ತಿದ್ದ ಕುರಿಗಳು ಇದ್ದಕ್ಕಿದ್ದಂತೆ ಒಂದೊಂದೇ ಎಚ್ಚರತಪ್ಪಿ ಬೀಳಲಾರಂಭಿಸಿದವು. ಕಂಗಾಲಾದ ಕುರಿಗಾಹಿಗಳು ಅಕ್ಕ ಪಕ್ಕದ ಗ್ರಾಮಸ್ಥರೊಂದಿಗೆ ತಮಗೆ ಗೊತ್ತಿದ್ದ ನಾಟಿ ಚಿಕಿತ್ಸೆ ಮಾಡಿದರೂ ಫಲಕಾರಿಯಾಗದೆ ಸುಮಾರು 40 ಕುರಿಗಳು ಸಾವನ್ನಪ್ಪಿದವು ಎಂದು ಅಕ್ಕಪಕ್ಕದ ಗ್ರಾಮಸ್ಥರಾದ ನಂಜೇಗೌಡ, ಗ್ರಾ.ಪಂ.ಸದಸ್ಯ ಪ್ರಕಾಶ್ ತಿಳಿಸಿದ್ದಾರೆ.ಬಿಳಿ ಅಥವಾ ಕಾಡುಜಾಲಿ ಮರದ ಕಾಯಿ ತಿಂದಿರುವುದೇ ಕುರಿಗಳ ಹಠಾತ್ ಸಾವಿಗೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ.
ಬಿಳಿಜಾಲಕ್ಕೆ ನಾಯಿಬೇಲ,ಸಾರಾಯಿ ಬೇಲ, ತೋಫಾಲೆ,ಟಪಾಲುಕಾಯಿ ಎಂಬ ಹೆಸರುಗಳೂ ಇವೆ. ಕುರಿಗಳು ಸಹಜವಾಗಿಯೇ ವಿಷಕಾರಿ ಸಸ್ಯವನ್ನು ಗುರುತಿಸಿ ತಿನ್ನದಿರುವ ಸ್ವಭಾವ ಬೆಳೆಸಿಕೊಂಡಿರುತ್ತವೆ. ಬಿಳಿ ಜಾಲದ ಎಲೆಗಳನ್ನು ಕುರಿಗಳು, ಮೇಕೆಗಳು ತಿನ್ನುವುತ್ತವೆ. ಅದು ಪ್ರಾಣ ತೆಗೆಯುವಷ್ಟು ವಿಷಕಾರಿಯಲ್ಲ, ಆದರೆ ಕಾಯಿಗಳಲ್ಲಿ ನೀರಿನಂಶ ಕಡಿಮೆಯಾಗಿ ಒಣಗುತ್ತಾ ಬಂದಂತೆಲ್ಲಾ ವಿಷದ ಸಾಂದ್ರತೆ ಹೆಚ್ಚುತ್ತಾ ಹೋಗುತ್ತದೆ, ಇಂತಹ 3-4 ಕಾಯಿಗಳನ್ನು ಕುರಿಗಳು ತಿಂದರೆ ಸಾಯುವುದು ಖಚಿತ ಎಂದು ಗ್ರಾಮಸ್ಥರು ಅನುಭವದಿಂದ ಹೇಳುತ್ತಾರೆ. ಬಿಳಿಜಾಲಿ ಕಾಯಿಗಳನ್ನು(ಅಕೇಶಿಯಾ ಪಾಡ್ಸ್) ತಿಂದಾಗ ಕುರಿಗಳ ಹೊಟ್ಟೆಯಲ್ಲಿ ಹೈಡ್ರೋಜನ್ ಸಯನೈಡ್ ವಿಷ ಉತ್ಪತ್ತಿಯಾಗುತ್ತದೆ. ಜೀವಕೋಶಕಗಳಿಗೆ ಆಮ್ಲಜನಕದ ಕೊರತೆ ಉಂಟಾಗಿ ಮೆದುವು ನಿಷ್ಕ್ರಿಯಗೊಂಡು ಕುರಿಗಳು ಸಾಯುತ್ತವೆ ಎಂದು ಪಶುವೈದ್ಯರಾದ ಡಾ. ರೇವಣಸಿದ್ಧಪ್ಪ ಮತ್ತು ಡಾ. ನೀಲಕಂಠಸ್ವಾಮಿ ತಿಳಿಸಿದ್ದಾರೆ.
Comment here