ತುಮಕೂರು ಲೈವ್

FEB. 27ರಿಂದ ಇತಿಹಾಸ ಪ್ರಸಿದ್ಧ ಹಳ್ಳದ ಮಾರಿಕಾಂಬ ದೇವಿ ಪ್ರತಿಷ್ಠಾಪನೆ: ಗೌರಿಗದ್ದೆ ವಿನಯ್ ಗುರೂಜಿ ಆಗಮನ

Publicstory. in


ತುಮಕೂರು: ತುಮಕೂರು ತಾಲ್ಲೂಕಿನ ಚಿಕ್ಕದೊಡ್ಡವಾಡಿಯಲ್ಲಿರುವ ಹಳ್ಳದ ಮಾರಿಕಾಂಬ ದೇವಿ ಮತ್ತು ನಾಗದೇವತಾ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವವು ಫೆ. 27 ಮತ್ತು ಫೆ.28ರಂದು ಗ್ರಾಮದಲ್ಲಿ ನೂತನವಾಗಿ ಕಟ್ಟಿರುವ ದೇವಸ್ಥಾನದಲ್ಲಿ ನಡೆಯಲಿದೆ.

ಹಳ್ಳದ ಮಾರಿಕಾಂಬ ದೇವಿಯು ಇತಿಹಾಸ ಪ್ರಸಿದ್ಧವಾಗಿದ್ದು, ಗಂಗರ ಕಾಲದಲ್ಲಿ ಪ್ರತಿಷ್ಠಾಪನೆಯಾಗಿದೆ ಎಂಬ ಇಲ್ಲಿನ ಜನರು ನಂಬುತ್ತಾರೆ. ಇದನ್ನು ಜೈನರು ಪೂಜಿಸಿಕೊಂಡು ಬರುತ್ತಿದ್ದರು. ಕಾಲಾನಂತರ ದೇವಸ್ಥಾನ ಬಿದ್ದುಹೋಗಿ ಬಯಲಿನಲ್ಲಿ ದೇವರ ಪೂಜೆ ನಡೆಯುತ್ತಿತ್ತು.

ಕೆಲ ವರ್ಷಗಳ ಹಿಂದೆ ಗ್ರಾಮದ ನಾಗರಾಜ್ ಎಂಬುವರು ಹೊಲ ಹೂಡುವಾಗ ಗುದ್ದಲಿ ತಾಗಿಸಿ ದೇವರ ಮೂರ್ತಿಗೆ ಪೆಟ್ಟು ಮಾಡಿದ್ದರು. ಇದಾದ ಮರು ದಿನದಿಂದಲೇ ಅವರಿಗೆ ಎರಡೂ ಕಣ್ಣುಗಳು ಕಾಣದಾದವು. ಆಸ್ಪತ್ರೆಯಲ್ಲಾ ಸುತ್ತಾಡಿದರೂ ಪ್ರಯೋಜನ ಇಲ್ಲವಾಗಿತ್ತು.

ಒಂದು ದಿನ ಏಕಾಏಕಿ ಅಮ್ಮನ ಕನಸಿನಲ್ಲಿ ದೇವರು ಬಂದು ದೇವಸ್ಥಾನ ಕಟ್ಟಿಸುವಂತೆ ಅಪ್ಪಣೆಯಾಯಿತು. ಅದಾದ ಬಳಿಕ ದೇವರಿಗೆ ಹರಕೆ ಕಟ್ಟಿದ 20 ದಿನಗಳಲ್ಲೇ ಅಣ್ಣನಿಗೆ ಕಣ್ಣು ಬಂದವು. ಈಗ ದೇವಸ್ಥಾನ ಕಟ್ಟಿಸಲಾಗಿದೆ ಎಂದು ನಾಗರಾಜ್ ಅವರ ಸಹೋದರ ಎಂ.ನಾರಾಯಣ್ ಹೇಳುತ್ತಾರೆ.

ಕಣ್ಣು ಕಳೆದುಕೊಂಡಿದ್ದ ನಾಗರಾಜ್

ಪ್ರಖ್ಯಾತ ಅವಧೂತರಾದ ಗೌರಿಗದ್ದೆಯ ವಿನಯ್ ಗುರೂಜಿ ಅವರು ದೇವಸ್ಥಾನದ ಪ್ರತಿಷ್ಠಾಪನೆಗೆ ಬರುತ್ತಿರುವುದು ಊರಿನ ಗ್ರಾಮಸ್ಥರಲ್ಲದೇ ಈ ಭಾಗದ ಜನರಲ್ಲಿ ಸಂಭ್ರಮ ತಂದಿದೆ.

ವಿನಯ್ ಗುರೂಜಿ ಅವರು ದೇವಸ್ಥಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಗ್ರಾಮದ ನಾಲ್ಕುಮಂದಿ ಕಡುಬಡವರನ್ನು ಸ್ವತಃ ಅವರೇ ಖರ್ಚಿನಲ್ಲೇ ಸನ್ಮಾನ ಮಾಡುವುದಾಗಿ ಹೇಳಿರುವುದು ಮತ್ತೂ ಖುಷಿ ತಂದಿದೆ ಎನ್ನುತ್ತಾರೆ ನಾರಾಯಣ್.

ಕಾರ್ಯಕ್ರಮದ ಮೊದಲ ದಿನ ಬೆಳಿಗ್ಗೆ 8ಕ್ಕೆ ಶಿಲ್ಪ ಪೂಜೆ, ಸಾಮೂಹಿಕ ಪೂಜೆ ಹಾಗೂ ಮಹಾಗಣಪತಿ ಹೋಮ ನಡೆಯಲಿದೆ. ಎರಡನೇ ದಿನ ಶುಕ್ರವಾರ ಬೆಳಿಗ್ಗೆ 8ಕ್ಕೆ ಬ್ರಹ್ಮಕಳಸ, ಚಂಡಿಕಾ ಹೋಮ, ನಾಗದೇವತಾ ಅಶ್ಲೇಷಾ ಬಲಿ ಹೋಮ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ. ಈ ಕಾರ್ಯಕ್ರಮಗಳ ನೇತೃತ್ವವನ್ನು ವಿನಯ್ ಗುರೂಜಿ ವಹಿಸುವರು.

ಕಾರ್ಯಕ್ರಮದ ನಂತರ ಭಕ್ತರಿಗೆ ಅನ್ನ ಪ್ರಸಾದ ನಡೆಯಲಿದೆ. ಭಕ್ತರು ವಿಶೇಷ ಪೂಜೆ ಸಲ್ಲಿಸಲು ಸಹ ಅವಕಾಶ ಕೊಡಲಾಗಿದೆ ಎಂದು ಎಂ,ನಾರಾಯಣ್ ತಿಳಿಸಿದರು. ಸಾಸಲುಗುಂಟೆ, ಹಾಲುಗೊಂಡನಹಳ್ಳಿ, ಹಿರೇದೊಡ್ಡವಾಡಿ ಗ್ರಾಮಗಳ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸುವರು.

Comment here