ತುಮಕೂರು ಲೈವ್

ಆಕ್ಸಿಜನ್ ಸಾಂದ್ರಕ ನೀಡಿದ ಎಂಡಿಎಲ್

Publicstory


ತುರುವೇಕೆರೆ: ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನಂತರ ಅವಶ್ಯಕವಾಗುವ ಪ್ರಾಣವಾಯು ಆಕ್ಸಿಜನ್ ಪೂರೈಕೆಗಾಗಿ ಮಾಜಿಶಾಸಕ ಹಾಗೂ ಕಾಂಗ್ರೆಸ್ ಸಮಿತಿಯ ಹಿಂದುಳಿದವರ್ಗಗಳ ವಿಭಾಗದ ರಾಜ್ಯಾಧ್ಯಕ್ಷ ಲಯನ್ ಎಂ.ಡಿ.ಲಕ್ಷ್ಮೀನಾರಾಯಣ್ ಎರಡು ಆಕ್ಸಿಜನ್ ಸಾಂದ್ರಕಗಳನ್ನು (ಸ್ಯಾಚರೇಟ್‍ಗಳನ್ನು) ಇಂದು ಕೊಡುಗೆಯಾಗಿ ನೀಡಿದರು.

ಈ ಎರಡೂ ಸಾಂದ್ರಕಗಳನ್ನು ಪಟ್ಟಣ ಪಂಚಾಯಿತಿಯ ಹಳೆಯ ಆಡಳಿತ ಕಛೇರಿಯಲ್ಲಿ ಸ್ಥಾಪಿಸಿದ್ದು ಎಂ.ಡಿ. ಲಕ್ಷ್ಮೀನಾರಾಯಣ್ ಅವರ ಸಹೋದರ ಉದ್ಯಮಿ ಎಂ.ಡಿ.ಮೂರ್ತಿ ಅವರು ಶುಕ್ರವಾರ ಬೆಳಿಗ್ಗೆ ವಿದ್ಯುಕ್ತವಾಗಿ ಈ ಘಟಕವನ್ನು ಉದ್ಘಾಟನೆ ಮಾಡುವ ಮೂಲಕ ಸೇವೆಗೆ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಉದ್ಯಮಿ ಎಂ.ಡಿ.ಮೂರ್ತಿ “ನಮ್ಮ ಕುಟುಂಬ ಕೂಡ ಕೋವಿಡ್ ಸೋಂಕಿಗೆ ಒಳಗಾಗಿದ್ದು ಚೇತರಿಸಿಕೊಂಡಿದ್ದೇವೆ. ಹಾಗಾಗಿ ನಮಗೆ ಸೋಂಕು ಪೀಡಿತ ರೋಗಿಗಳ ಸಮಸ್ಯೆಯ ಪ್ರತ್ಯಕ್ಷ ಅನುಭವವಾಗಿದೆ. ಈ ಹಿನ್ನಲೆಯಲ್ಲಿ ರೋಗಿಗಳು ಶೀಘ್ರ ಚೇತರಿಸಿಕೊಳ್ಳಲು ಅನುಕೂಲವಾಗುವ ದೃಷ್ಟಿಯಿಂದ ಸಹೋದರ ಎಂ.ಡಿ. ಲಕ್ಷ್ಮೀನಾರಾಯಣ್ ಅವರು ನಮ್ಮ ತಂದೆ. ದಿ.ದಾಸಪ್ಪಶೆಟ್ಟರ ಸ್ಮರಣಾರ್ಥ ಎರಡು ಆಕ್ಸಿಜನ್ ಸಾಂದ್ರಕಗಳನ್ನು ನೀಡಿದ್ದಾರೆ. ಕರೋನಾದಿಂದ ಚೇತರಿಸಿಕೊಳ್ಳುತ್ತಿರುವ ರೋಗಿಗಳು ಇದರ ಸದುಪಯೋಗ ಪಡೆಯಬೇಕು” ಎಂದರು.

ಆಕ್ಸಿಜನ್ ಸಾಂದ್ರಕಗಳ ನಿರ್ವಹಣೆಯ ಜವಾಬ್ಧಾರಿ ಹೊತ್ತಿರುವ ಕಲ್ಪತರು ಲಯನ್ಸ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಹಾಗೂ ವಕೀಲ ಪಿ.ಎಚ್.ಧನಪಾಲ್ ಮಾತನಾಡಿ “ ಎಂಡಿಎಲ್ ಸಹೋದರರು ಕೋವಿಡ್ ಉಛ್ರಾಯ ಸ್ಥಿತಿಯಲ್ಲಿರುವ ಈ ಕಷ್ಟಕಾಲದಲ್ಲಿ ಅತ್ಯಂತ ಶ್ರೇಷ್ಠ ಕಾರ್ಯವನ್ನು ಮಾಡಿದ್ದಾರೆ. ಈ ಸೇವಾ ಪರಂಪರೆ ಹೀಗೆ ಮುಂದುವರೆಯಲಿ” ಎಂದು ಆಶಿಸಿ ಎಂಡಿಎಲ್ ಮತ್ತು ಎಂ.ಡಿ.ಮೂರ್ತಿಯವರನ್ನು ಅಭಿನಂದಿಸಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಂಜನ್ ಕುಮಾರ್ ಸಾಂದ್ರಕಗಳಿಗೆ ಚಾಲನೆ ನೀಡಿ ಶುಭಹಾರೈಸಿದರು. ಜನಪ್ರಿಯ ವೈದ್ಯ ಡಾ.ನಾಗರಾಜ್, ಲಯನ್ಸ್ ಅಧ್ಯಕ್ಷ ರಾಜಣ್ಣ, ಟ್ರಸ್ಟ್ ಕಾರ್ಯದರ್ಶಿ. ಟಿ.ವಿ.ಮಹೇಶ್, ಶಿವಾನಂದಯ್ಯ, ಖಜಾಂಚಿ ಬಸವರಾಜು, ಎಸ್.ಎಂ.ಕುಮಾರಸ್ವಾಮಿ, ಸಾರ್ವಜನಿಕ ಆಸ್ಪತ್ರೆಯ ಭಾಸ್ಕರ್, ಮಿಹಿರಾ ಕುಮಾರ್, ಬರಹಗಾರ ತುರುವೇಕೆರೆ ಪ್ರಸಾದ್ ಇತರರು ಭಾಗವಹಿಸಿದ್ದರು.

Comment here