ತುಮಕೂರು ಲೈವ್

ಕೋವಿಡ್ ಲಸಿಕೆಗಾಗಿ ಪಾವಗಡ ಜನರ ಆಗ್ರಹ

Publicstory


ಪಾವಗಡ: ಲಸಿಕೆ ಕೊರತೆ ನೀಗಿಸಿ ತಾಲ್ಲೂಕಿನ ಜನತೆಗೆ ಸಮರ್ಪಕವಾಗಿ ಲಸಿಕೆ ಹಾಕಲು ವ್ಯವಸ್ಥೆ ಮಾಡುವಂತೆ ಒತ್ತಾಯಿಸಿ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಬುಧವಾರ ತಹಶೀಲ್ದಾರ್ ಕೆ.ಆರ್.ನಾಗರಾಜು ಅವರಿಗೆ ಮನವಿ ಸಲ್ಲಿಸಿದರು.

ತಾಲ್ಲೂಕಿನಲ್ಲಿ ಆರಂಭದಲ್ಲಿ ಸಾವಿರಾರು ಲಸಿಕೆ ಹಾಕಲಾಯಿತು. ಲಸಿಕೆ ಹಾಕಿಸಿಕೊಳ್ಳದಿದ್ದರೆ ಪಡಿತರ ಚೀಟಿ ರದ್ದುಪಡಿಸುವುವಾಗಿ ಪ್ರಚಾರವಾಯಿತು. ಈ ಹಿನ್ನೆಲೆ ಜನತೆ ಲಸಿಕೆ ಹಾಕಿಸಿಕೊಳ್ಳಲು ಲಸಿಕಾ ಕೇಂದ್ರಗಳಿಗೆ ಬರುತ್ತಿದ್ದಾರೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯ, ಮಾಹಿತಿ ಕೊತೆಯಿಂದ ಲಸಿಕೆ ಸಿಗದೆ ಮರಳುತ್ತಿದ್ದಾರೆ ಎಂದು ಆರೋಪಿಸಿದರು.

ಲಸಿಕೆ ಹಾಕುವ ಸ್ಥಳದ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ತಮಗೆ ಮಾಹಿತಿ ಇಲ್ಲ ಎನ್ನುತ್ತಾರೆ. ತಾಲ್ಲೂಕು ವೈದ್ಯಾಧಿಕಾರಿ, ಿತರೆ ಅಧಿಕಾರಿಗಳು ಯಾರೂ ಸಹ ಸಮರ್ಪಕ ಮಾಹಿತಿ ಕೊಡುತ್ತಿಲ್ಲ. ಇದರಿಂದ ಲಸಿಕೆ ಹಾಕಿಸಿಕೊಳ್ಳಲು ಸಿದ್ದರಿರುವ ಜನತೆಗೆ ಲಸಿಕೆ ಸಿಗದಂತಾಗಿದೆ.

ವಿವಿಧ ಇಲಾಖಾ ಅಧಿಕಾರಿಗಳ ನಡುವಿನ ಸಮನ್ವಯದ ಕೊರತೆಯಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಕೆಲ ದಿನಗಳ ಹಿಂದೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ಲಸಿಕೆ ಸಿಗದೆ ಮನೆಗಳಿಗೆ ಹಿಂತಿರುಗಿರುವುದನ್ನು ಸ್ಮರಿಸಬಹುದು ಎಂದು ದೂರಿದರು.

ಇಲಾಖಾ ಅಧಿಕಾರಿಗಳು ವೈಯಕ್ತಿಕ ಪ್ರತಿಷ್ಠೆ ತೊರೆದು ಲಸಿಕೆ ಹಾಕುವ ಸ್ಥಳ, ದಿನಾಂಕ, ಸಮಯದ ಮಾಹಿತಿಯನ್ನು ಪ್ರಚಾರ ಮಾಡಬೇಕು. ಲಸಿಕಾ ಕೇಂದ್ರದಿಂದ ಜನತೆ ಲಸಿಕೆ ಪಡೆಯದೆ ಹಿಂದಿರುಗದಂತೆ ಎಚ್ಚರವಹಿಸಬೇಕು. ತಾಲ್ಲೂಕಿನ ಎಲ್ಲ ಜನತೆಗೆ ಲಸಿಕೆ ಹಾಕಿಸಲು ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.

ಪದಾಧಿಕಾರಿಗಳಾದ ಮಾನಂ ಶಶಿಕಿರಣ್, ಬಿ.ಎಂ.ನಾಗರಾಜು, ರಾಕೇಶ್ ಉಪಸ್ಥಿತರಿದ್ದರು.

Comment here