ಕ್ರೈಂ

ಹಣ ಲಪಟಾಯಿಸಿದ್ದ ಖದೀಮರು ಅಂದರ್ : ಪ್ರಶಂಸೆಗೆ ಪಾತ್ರವಾದ ಗುಬ್ಬಿ ಪೊಲೀಸರು

Publicstory/prajayoga

ವರದಿ, ದೇವರಾಜು.ಎಂ.ಎಸ್

ಗುಬ್ಬಿ: ನೂರು ರೂ ಮುಖಬೆಲೆಯ ಹಳೇ ನೋಟುಗಳನ್ನು ಎರಡು ಪಟ್ಟು ನೀಡುವ ಆಸೆ ತೋರಿಸಿ ಮಹಿಳೆಗೆ ವಂಚಿಸಿ 9.60 ಲಕ್ಷ  ರೂಗಳನ್ನು ಲಪಟಾಯಿಸಿದ್ದ ಐದು ಜನರ ಖದೀಮರ ತಂಡವನ್ನು  ಬಂಧಿಸಿದ ರೋಚಕ ಘಟನೆ ಗುಬ್ಬಿ  ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

ತುರುವೇಕೆರೆ ತಾಲೂಕು ಸಂಪಿಗೆ ಹೊಸಹಳ್ಳಿ ವಾಸಿ ಮುತ್ತುರಾಜ್, ಬಾಣಸಂದ್ರ ಮೂಲದ ಪುನೀತ್, ತಿಪಟೂರು ನಿವಾಸಿ ವಸಂತಕುಮಾರ್, ಬಾಣಾವರದ ಮಹೇಶ್ ಹಾಗೂ ತುಮಕೂರು ಯಲ್ಲಾಪುರ ಗಂಗಾಧರ್ ಬಂಧಿತ ಆರೋಪಿಗಳು. ಬೆಂಗಳೂರು ನಿವಾಸಿ ವಿಜಯಲಕ್ಷ್ಮೀ ವಂಚನೆಗೆ ಒಳಗಾದ ಮಹಿಳೆ.

ಹಣದಾಸೆಗೆ ಬಲಿಯಾಗಿ 9.60 ಲಕ್ಷ ರೂಗಳನ್ನು ಖದೀಮರ ನೀಡಿದ್ದ  ವಿಜಯಲಕ್ಷ್ಮೀ ಅವರಿಗೆ ಹಳೇ ನೂರು ರೂಗಳ ನೋಟುಗಳು ನಮ್ಮ ಬಳಿ ಇವೆ. ಡಬ್ಬಲಿಂಗ್ ಮಾಡಿ ಲಕ್ಷಕ್ಕೆ ಎರಡು ಲಕ್ಷ ನೀಡುವ ಆಸೆ ಹುಟ್ಟಿಸಿದ್ದರು. ಆಶ್ರಮದಲ್ಲಿ ಹುಂಡಿ ಹಣವಿದೆ. ಎಲ್ಲವೂ ಹಳೇ ನೂರು ರೂಗಳ ನೋಟುಗಳು. ಅವುಗಳನ್ನು 50 ರಷ್ಟು ರಿಯಾಯಿತಿಯಲ್ಲಿ ನೀಡುವುದಾಗಿ ನಂಬಿಸಿದ್ದ ಖದೀಮರು 1800 ರೂಗಳು ಆರಂಭದಲ್ಲಿ ನೀಡಿ ಆಸೆಗೆ ನೀರೆರೆದು ನಂಬಿಕೆ ಬಲ ಪಡಿಸಿಕೊಂಡರು. ಜಾಣ್ಮೆ  ತೋರಿದ್ದ ವಂಚಕರ ತಂಡ ಕಡಬ ನಿಟ್ಟೂರು ರಸ್ತೆಯಲ್ಲಿ ಬಂದು ಹಣ ಪಡೆಯಲು ಹೇಳಿದ್ದರು.

ಕಡಬ ನಿಟ್ಟೂರು ಮಧ್ಯೆ ನಲ್ಲಿಗೆರೆ ಶಿರಾ ರಾಜ್ಯ ಹೆದ್ದಾರಿಯಲ್ಲೇ ವ್ಯವಹಾರ ಕುದಿರಿಸುವ ಎಂದು ಮಹಿಳೆಯನ್ನು ಕರೆದಿದ್ದರು. ತನ್ನ ಚಿನ್ನಾಭರಣವನ್ನು ಅಡವಿಟ್ಟು 9.60 ಲಕ್ಷ ರೂಗಳನ್ನು ಹೊಂದಿಸಿಕೊಂಡು ಸ್ಥಳಕ್ಕೆ ಬಂದ ಮಹಿಳೆಯ ಬೀಗ ಹಾಕಿದ್ದ ಕಪ್ಪು ಬಣ್ಣದ ಬ್ಯಾಗ್ ನೀಡಿ  ರಸ್ತೆಯಲ್ಲಿ ಹಣ ಎಣಿಕೆಬೇಡ, ಮನೆಗೆ ತೆರಳಿ ನೋಡಲು ಹೇಳಿ  ಸ್ಥಳದಿಂದ ಕಾಲ್ಕಿತ್ತರು. ಕುತೂಹಲ ತಾಳದೆ ಕೀ ಇಲ್ಲದ ಬೀಗ ಹಾಕಿದ್ದ ಬ್ಯಾಗ್ ಹರಿದು ನೋಡಿದ ಮಹಿಳೆಗೆ ಬಿಳಿ ಬಣ್ಣದ ಕಾಗದದ ಕಂತೆ ಕಂಡಿತ್ತು. ಶಾಕ್ ಗೆ ಒಳಗಾದ ಮಹಿಳೆ ಗುಬ್ಬಿ ಪೊಲೀಸ್ ಠಾಣೆಗೆ ದೂರು ನೀಡಿದರು.

ವಂಚನೆಯ ಪ್ರಕರಣ ಬೆನ್ನತ್ತಿದ್ದ ಗುಬ್ಬಿ ಪಿಎಸೈ ಮುತ್ತುರಾಜ್ ನೇತೃತ್ವದ ತಂಡ ಸಿಪಿಐ ನದಾಫ್ ಮಾರ್ಗದರ್ಶನದಲ್ಲಿ ಎಲ್ಲಾ ಆರೋಪಿಗಳನ್ನು ಬಂಧಿಸಿ ಅವರ ಬಳಿ ಇದ್ದ 5.58 ಲಕ್ಷ ರೂಗಳನ್ನು ಮಹಿಳೆಗೆ ಹಿಂದಿರುಗಿಸಿದರು. ಪ್ರಕರಣ ಭೇದಿಸಿದ ತಂಡದಲ್ಲಿ ಸಿಬ್ಬಂದಿಗಳಾದ ಪಾತರಾಜ್, ಮಧು, ನವೀನ್ ಗೌಡ, ಮಧುಸೂದನ್, ರಂಗನಾಥ್, ದೇವರಾಜ್ ಇದ್ದರು.

Comment here