ಪೊಲಿಟಿಕಲ್

ಪತ್ರಕರ್ತರು ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗ : ಡಾ.ಸಿ.ಎಂ.ರಾಜೇಶ್ ಗೌಡ

Publicstory/prajayoga

ಶಿರಾ: ಪತ್ರಕರ್ತರು ಪ್ರಜಾಪ್ರಭುತ್ವ ಅವಿಭಾಜ್ಯ ಅಂಗವಾಗಿದ್ದು, ಮೌಲ್ಯಾಧಾರಿತ ವಿಷಯಗಳನ್ನು ಸಮಾಜಕ್ಕೆ ನೇರವಾಗಿ ತಿಳಿಸಿಕೊಡುವ ಪ್ರಯತ್ನ ಮಾಡುವುದರ ಜೊತೆಗೆ ಪತ್ರಕರ್ತರು, ಸಾಹಿತಿಗಳು, ವಿಮರ್ಶಕರು, ಆರ್ಥಿಕ ತಜ್ಞರು ಸೇರಿದಂತೆ ಎಲ್ಲಾ ವಿಷಯಗಳಲ್ಲೂ ಪರಿಣಿತಿ ಹೊಂದಿರಬೇಕಿದೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.

ನಗರದ ಸರ್ಕಾರಿ ಬಾಲಕಿಯರ ಪ.ಪೂ. ಕಾಲೇಜಿನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿರಾ ಘಟಕದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪತ್ರಿಕಾರಂಗ ಎನ್ನುವುದು ದೇಶದ ವ್ಯವಸ್ಥೆಯನ್ನೇ ಬದಲಾಯಿಸುವ ಶಕ್ತಿ ಇರುವಂತಹದ್ದು. ದೇಶದ ಅಭಿವೃದ್ಧಿಗೆ, ಪ್ರಜಾಪ್ರಭುತ್ವ ಅಸ್ತಿತ್ವದ ಉಳಿವಿಗೆ, ಪತ್ರಿಕಾರಂಗ ಭದ್ರ ಬುನಾದಿಯಾಗಿದೆ. ಪತ್ರಿಕೋದ್ಯಮ ಒಂದೇ ನಾಣ್ಯದ ಎರಡು ಮುಖಗಳು. ಉಪಯೋಗ ಮತ್ತು ಉಪಯೋಗ ಆಗದಿರುವ ವಿಷಯಗಳು ಸಮಾಜದಲ್ಲಿರುತ್ತವೆ. ಎರಡೂ ವಿಷಯಗಳನ್ನು ತಿಳಿಸಿಕೊಡುವ ಪ್ರಯತ್ನ ಪತ್ರಕರ್ತ ಮಾಡಬೇಕಾಗುತ್ತದೆ. ಅಂತಹ ಕೆಲಸವನ್ನು ಪತ್ರಕರ್ತರು ಮಾಡಬೇಕು. ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸ್ವಯಂಘೋಷಿತ ಪತ್ರಕರ್ತರಿದ್ದಾರೆ. ಸಾಮಾಜಿಕ ಜಾಲತಾಣಗಳ ಮಧ್ಯೆ ಸವಾಲನ್ನು ಎದುರಿಸುತ್ತಿವೆ. ಆದರೂ ಸಹ ದಿನ ನಿತ್ಯ ವಿಶೇಷ ವಿಷಯಗಳನ್ನು ವರದಿಗಳನ್ನು ನೀಡುವ ಮೂಲಕ ಜನರ
ಮನಸಿನಲ್ಲಿ ಉಳಿಯತ್ತಿವೆ ಎಂದರು.

ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರು ಬಹಳ ಕಷ್ಟಗಳನ್ನು ಅನುಭವಿಸಿದರು. ಅವರಿಗೆ ಬೆಂಬಲವಾಗಿ ಜನಪ್ರತಿನಿಧಿಗಳು, ಆಡಳಿತ ವರ್ಗ ಇರುವುದು ನಮ್ಮ ಜವಾಬ್ದಾರಿಯಾಗಿದೆ. ಆದ್ದರಿಂದ ಶಿರಾ ಕಾರ್ಯನಿರತ
ಪತ್ರಕರ್ತರ ಸಂಘದ ಸದಸ್ಯರಿಗೆ ಪ್ರಪ್ರಥಮವಾಗಿ ಆಶ್ರಯ ಸಮಿತಿ ಸಭೆಯಲ್ಲಿಯೇ ಮೊದಲ ಹಂತದಲ್ಲಿ ನಿವೇಶನ ಕೊಡಬೇಕು ಎಂದು ಚರ್ಚೆ ಆಗಿದೆ. ಇನ್ನು ಕೆಲವೇ
ದಿನಗಳಲ್ಲಿ ಎರಡನೇ ಹಂತದ ಆಶ್ರಯ ಸಮಿತಿ ಸಭೆಯಲಿದ್ದು, ಸೂಕ್ತ ಸ್ಥಳವನ್ನು ಗುರುತಿಸಿ ನಿವೇಶನ ನೀಡಲು ಬದ್ಧರಾಗಿದ್ದೇವೆ. ನಾವು ಆಶ್ವಾಸನೆ ನೀಡುವುದಿಲ್ಲ ಕೊಟ್ಟೇ ತೀರುತ್ತೇವೆ.  ಸಂಘದ ಭವನಕ್ಕೆ ನಗರಸಭೆ ವತಿಯಿಂದ ಸಿಎ ನಿವೇಶನ ಕೊಡಲು ಕ್ರಮ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ನಗರದ ಪ್ರವಾಸಿ ಮಂದಿರದಲ್ಲಿ ತಾತ್ಕಾಲಿಕ ಕಚೇರಿಗೆ ಒಂದು ಕೊಠಡಿಯನ್ನು ನೀಡಲಾಗುವುದು. ಮುಂದಿನ ದಿನಗಳಲ್ಲೂ ಪತ್ರಕರ್ತರಿಗೆ
ಬೆಂಬಲವಾಗಿ ನಿಂತು ಅವರ ಕಷ್ಟಸುಖಗಳಿಗೆ ಭಾಗಿಯಾಗುತ್ತೇವೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.

ತಹಶಿಲ್ದಾರ್ ಮಮತ ಮಾತನಾಡಿ, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಲು ಪತ್ರಿಕೆಗಳು ಬಹಳ ಮುಖ್ಯ. ಪತ್ರಿಕೆಯಲ್ಲಿ ಬರುವ ವಿಷಯಗಳಿಂದ ಜ್ಞಾನ ಹೆಚ್ಚುತ್ತದೆ. ಬರವಣಿಗೆಯ ಕೌಶಲ್ಯ ಹೆಚ್ಚುತ್ತದೆ. ಶಬ್ದಭಂಡಾರ ಹೆಚ್ಚಾಗುತ್ತದೆ. ಪಠ್ಯದಲ್ಲಿರದ ಕೆಲವು ವಿಷಯಗಳು ಪತ್ರಿಕೆಗಳಲ್ಲಿ ಸಿಗುತ್ತದೆ. ಆದ್ದರಿಂದ ಎಲ್ಲರೂ ಪತ್ರಿಕೆಗಳನ್ನು ದಿನ ನಿತ್ಯ ಓದಬೇಕು. ಮನೆಗಳಲ್ಲೂ ದಿನ ಪತ್ರಿಕೆಗಳನ್ನು ಹಾಕಿಸಿಕೊಂಡು ಪತ್ರಿಕೆಯನ್ನು ಓದಿ. ವಿಶೇಷ ವರದಿಗಳನ್ನು ಸಂಗ್ರಹಿಸಿ ಯಶಸ್ಸು ಗಳಿಸಿ ಎಂದರು.

ನಗರಸಭೆ ಅಧ್ಯಕ್ಷ ಬಿ.ಅಂಜಿನಪ್ಪ ಮಾತನಾಡಿ, ಪತ್ರಕರ್ತರ ಆರೋಗ್ಯ ಕ್ಷೇಮಕ್ಕಾಗಿ ಆರೋಗ್ಯ ವಿಮೆ 5 ಲಕ್ಷ ರೂ.ಗಳನ್ನು ನಗರಸಭೆಯ ಬಜೆಟ್ನಲ್ಲಿ ಮೀಸಲಿರಿಸಿದ್ದು, ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಇದರಿಂದ ಅನುಕೂಲವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಸಾಧಕರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿನಿಗೆ ಸನ್ಮಾನಿಸಲಾಯಿತು. ಡಾ.ಪಿ.ಎಚ್.ಮಹೇಂದ್ರಪ್ಪ ವಿಶೇಷ ಭಾಷಣ ಮಾಡಿದರು. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎನ್.ಜಯಪಾಲ್, ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಚಂಗಾವರ ಮಾರಣ್ಣ, ಸರ್ಕಾರಿ ಬಾಲಕಿಯರ ಪ.ಪೂ. ಕಾಲೇಜಿನ ಪ್ರಾಂಶುಪಾಲ ಚಂದ್ರಯ್ಯ, ಕಾಲೇಜು ಅಬಿವೃದ್ಧಿ ಸಮಿತಿಯ ಅನಂತರಾಮು ಸಿಂಗ್ ಸೇರಿದಂತೆ ಹಲವರು ಹಾಜರಿದ್ದರು.

Comment here