ಜನಮನಪೊಲಿಟಿಕಲ್

ಅಮರಶಿಲ್ಪಿ ಜಕಣಾಚಾರ್ಯ ಸ್ಮರಣೋತ್ಸವ ಹಾಗೂ ಕಾಳಿಕಾಂಬ ರಥೋತ್ಸವ

Publicstory/prajayoga

ಕುಣಿಗಲ್: ತಾಲೂಕಿನ ಹುಲಿಯೂರುದುರ್ಗದ ದೀಪಾಂಬುದಿ ಕಾಳಿಕಾಂಬ ದೇವಾಲಯದಲ್ಲಿ ಯಜುರುಪಾಕರ್ಮ ಮಹೋತ್ಸವ, ಶ್ರೀ ಕಾಳಿಕಾಂಬ ರಥೋತ್ಸವ ಹಾಗೂ ಅಮರಶಿಲ್ಪಿ ಜಕಣಾಚಾರ್ಯ ಸ್ಮರಣೋತ್ಸವ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಗುರುವಾರ ನಡೆಯಿತು.

ಮಧ್ಯಾಹ್ನ 12.30ಕ್ಕೆ ವಿವಿಧ ಮಠಾಧೀಶರುಗಳಾದ ನಿಟ್ಟರಹಳ್ಳಿಯ ಶ್ರೀ ನೀಲಕಂಠಾಚಾರ್ಯ ಸ್ವಾಮೀಜಿ, ಫಿರಂಗಿ ಮಠದ ಫಿರಂಗಿ ಸ್ವಾಮೀಜಿ, ಗುರುಶನೇಶ್ವರಸ್ವಾಮಿ ಪೀಠಾಧ್ಯಕ್ಷರಾದ ಶ್ರೀ ಸುಬ್ಬರಾಯಚಾರ್ ಸ್ವಾಮೀಜಿ ಸಾನ್ನಿಧ್ಯದಲ್ಲಿ ಮಾಜಿ ಸಚಿವಆಶೀರ್ವಾದ ನಿಂದಣ್ಣ, ಉಪವಿಭಾಗಾಧಿಕಾರಿ ಅಜಯ್, ತಹಶೀಲ್ದಾರ್ ಮಹಬಲೇಶ್ವರ್ ಅವರು ರಥೋತ್ಸವಕ್ಕೆ ಚಾಲನೆ ನೀಡಿದರು.

ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಮಾಜಿ ಸಚಿವ ಎಚ್.ಎಂ. ರೇವಣ್ಣ ಮಾತನಾಡಿ, ಕಾಳಿಕಾಂಬ ದೇವಾಲಯದ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡುವುದಾಗಿ ಹೇಳಿದರು.
ದೀಪಾಂಬುಧಿ ಕಾಳಿಕಾಂಬ ದೇವರ ಉತ್ಸವ ಅದ್ದೂರಿಯಾಗಿ ನಡೆದಿದೆ. ರಾಜ್ಯದ ವಿವಿಧೆ‌ಡೆಗಳಿಂದ ವಿಶ್ವಕರ್ಮ ಸಮುದಾಯದವರು ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಿದ್ದಾರೆ. ಹಾಗೆಯೇ ನಾನು ಸಹ ಮೊದಲಿನಿಂದಲೂ ಶ್ರೀಕ್ಷೇತ್ರ ಉತ್ಸವಕ್ಕೆ ಬರುತ್ತಿದ್ದೇನೆ. ದೇವರ ಆಶೀರ್ವಾದಿಂದ ನಾಡು ಸುಭಿಕ್ಷವಾಗಿರಲಿ ಎಂದು ಆಶಿಸಿದರು.

ಉಪವಿಭಾಗಾಧಿಕಾರಿ ಅಜಯ್ ಮಾತನಾಡಿ, ಅರಣ್ಯ ಪ್ರದೇಶದಲ್ಲಿರುವ ಈ ಕಾಳಿಕಾಂಬ ದೇವಾಲಯಕ್ಕೆ 800 ವರ್ಷಗಳ ಇತಿಹಾಸವಿದೆ. ಇಂತಹ ಐತಿಹಾಸಿಕ ದೇವರ ಉತ್ಸವದಲ್ಲಿ ನಾನು ಪಾಲ್ಗೊಂಡಿರುವುದು ಬಹಳ ಸಂತಸ ತಂದಿದೆ. ವಾರವಿಡೀ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿದ್ದು, ಭಕ್ತಾದಿಗಳು ಶ್ರೀಕ್ಷೇತ್ರಕ್ಕೆ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ಅವರು ಮನವಿ ಮಾಡಿದರು.

ಯಜುರುಪಾಕರ್ಮದಲ್ಲಿ ಯಜ್ಞೋಪವೀಟವನ್ನು ಧಾರಣೆ ಮಾಡಿಕೊಳ್ಳುವಂತಹ ಪವಿತ್ರ ದಿನವಾಗಿದೆ. ಸುಮಾರು 10 ಸಾವಿರ ವಿಶ್ವಕರ್ಮ ಬಾಂಧವರು ಈ ಮಹೋತ್ಸವದಲ್ಲಿ ಭಾಗಿಯಾಗಿದ್ದಾರೆ. ಸಾಮೂಹಿಕ ಉಪಕರ್ಮದಲ್ಲಿ 30 ವಟುಗಳಿಗೆ ಸಾಮೂಹಿಕ ಉಪನಯನ ನಡೆಸಿ ಬ್ರಹ್ಮೋಪದೇಶ ಮಾಡಲಾಗಿದೆ ಎಂದು ಹೇಳಿದರು.
ಶ್ರೀಕ್ಷೇತ್ರದ ರಥೋತ್ಸವದಲ್ಲಿ ಸಂಸದ ಡಿ.ಕೆ. ಸುರೇಶ್, ಶಾಸಕ ಡಾ. ಹೆಚ್.ಡಿ. ರಂಗನಾಥ್ ಅವರು ಪಾಲ್ಗೊಂಡು ಕಾಳಿಕಾಂಬ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. 

ಈ ಸಂದರ್ಭದಲ್ಲಿ ಟ್ರಸ್ಟ್‌ನ ಪದಾಧಿಕಾರಿಗಳಾದ ಎನ್. ಸತ್ಯಪ್ಪ, ಕಾಳಹಸ್ತಾಚಾರ್, ಪುಟ್ಟಚಾರ್, ಬಿ. ರುದ್ರಾಚಾರ್, ಹೆಚ್.ಸಿ. ನಾಗರಾಜ್, ಎಂ.ಎನ್. ಕುಮಾರಸ್ವಾಮಿ, ಪ್ರಕಾಶ್‌ಕುಮಾರ್, ಹೆಚ್.ಆರ್. ಸೋಮಶೇಖರಾಚಾರ್ ಸೇರಿದಂತೆ ನಾಡಿನ ವಿವಿಧೆಡೆಗಳಿಂದ ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.

Comment here