ತುಮಕೂರು ಲೈವ್

ತುಮಕೂರು ಕಸಾಪ ಹೊಸ ಮೈಲುಗಲ್ಲು: ಕಿರುಚಿತ್ರಗಳ ಪ್ರದರ್ಶನಕ್ಕೆ ಹೊಸ ನಾಂದಿ

Publicstory


ತುಮಕೂರು: ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಭಾಷೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚು ಒತ್ತು ಕೊಡುತ್ತಾ ಬಂದಿದೆ. ಸಾಂಸ್ಕೃತಿಕತೆ ಸಾಹಿತ್ಯದ ಅವಿಭಾಜ್ಯ ಅಂಗವಾಗಿದೆ. ಹೀಗಾಗಿ ಜಿಲ್ಲಾ ಕಸಾಪ ದಿಂದ ಸಾಕ್ಷ್ಯಚಿತ್ರ ಪ್ರದರ್ಶನಗಳ ಹೊಸ ಹೆಜ್ಜೆ ಇಡಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಹೇಳಿದರು.

ಸಾಹಿತ್ಯ, ಸಂಗೀತ, ನೃತ್ಯ, ನಾಟಕ, ಚಿತ್ರ/ಶಿಲ್ಪಕಲೆಗಳು ಈ ಪರಂಪರೆಯ ಮುಖ್ಯವಾಹಿನಿಗಳಾಗಿವೆ. ಈಗ ಅದರೊಂದಿಗೆ ಇ-ಮಾಧ್ಯಮವೂ ಸೇರ್ಪಡೆಯಾಗಿದೆ. ಸಾಮಾಜಿಕ ಜಾಲತಾಣ, ವಾಟ್ಸಾಪ್, ಯೂಟೂಬ್, ಫೇಸ್‌ಬುಕ್ ಮುಂತಾದ ಮಾರ್ಗಗಳಲ್ಲಿ ಎಲ್ಲ ಸಾಂಸ್ಕೃತಿಕ ಚಟುವಟಿಕೆಗಳು ಕೂಡ ಹರಿದುಬಂದು ಜನಮನವನ್ನು ತಲುಪುತ್ತಿವೆ. ಹಾಗೂ ಹೆಚ್ಚು ಜನರನ್ನು ತಲುಪುವ ಬಗೆಯೂ ಇದಾಗಿದೆ ಎಂದರೆ ತಪ್ಪಲ್ಲ‌ ಎಂದರು.

ಸಾಹಿತ್ಯದಂತೆಯೇ ಕಿರುಚಿತ್ರದ ಮೂಲಕವೂ ಅಭಿವ್ಯಕ್ತಿಸುವ ಕ್ರಮ ಇತ್ತೀಚೆಗೆ ರೂಢಿಯಾಗಿದೆ. ಕಥೆ, ಕವನ, ಲೇಖನ, ಚುಟುಕು, ಹಾಸ್ಯ ಮುಂತಾದವುಗಳ ಮೂಲಕ ಏನನ್ನು ಹೇಳಲು ಹೊರಟಿದ್ದಾರೋ ಅದನ್ನು ಕಿರುಚಿತ್ರಗಳ ಮೂಲಕ, ದೃಶ್ಯ ಮಾಧ್ಯಮದ ಮೂಲಕ ಹೇಳುವುದು ಜನಪ್ರಿಯವಾಗಿದೆ ಎಂದು ತಿಳಿಸಿದರು.

ಹಾಗು ಸುಲಭವಾಗಿ ನೇರವಾಗಿ ಜನರನ್ನು ತಲುಪಲು, ಅರ್ಥಪೂರ್ಣವಾಗಿ ಸಂವಹಿಸಲು ಸಾಧ್ಯವಾಗುತ್ತಿದೆ. ಆದ್ದರಿಂದ ಇದೂ ಕೂಡ ಸಾಹಿತ್ಯದ ಒಂದು ವಿಧವೇ ಆಗಿದೆ.

ಕಿರುಚಿತ್ರ ಸ್ಪರ್ಧೆ ಮಾಡುವ ಮೂಲಕ ಪರಿಷತ್ತು ಸಾಹಿತ್ಯಕ್ಕೆ ಒಂದು ಹೊಸ ಆಯಾಮ ನೀಡುವ ದಿಸೆಯಲ್ಲಿ ಕಾರ್ಯೋನ್ಮುಖವಾಗಿದೆ. ಸದಭಿರುಚಿಯ ಸಿನಿಮಾ ನೋಡುವುದು, ಗ್ರಹಿಕೆಯ ಕ್ರಮ, ಸಾಹಿತ್ಯವನ್ನು ದೃಶ್ಯದಲ್ಲಿ ತಲುಪುವಾಗ ಪ್ರೇಕ್ಷಕನ ಸ್ಪಂದನೆ ಇತ್ಯಾದಿಗಳನ್ನು ಅರ್ಥ ಮಾಡಿಸುವುದೂ ಕೂಡ ಬಹುಮುಖ್ಯ ಎಂದೆನಿಸಿ ಪರಿಷತ್ತಿನಲ್ಲಿ “ಕನ್ನಡ ಸಾಹಿತ್ಯ ಪರಿಷತ್ತಿನ ಫಿಲ್ಮ್ ಸೊಸೈಟಿ” ಎಂಬ ವಿಭಾಗವನ್ನು ಪ್ರಾರಂಭಿಸಿ ಅದರ ಮೂಲಕ ಮಕ್ಕಳಿಗಾಗಿ ೧) ಕಾಡಹಾದಿಯ ಹೂವುಗಳು ೨) ನವಿಲು ಕಿನ್ನರಿ ೩) ಕ್ವಿಟ್ ಇಂಡಿಯಾ ಚಳವಳಿ ಮುಂತಾದ ಚಿತ್ರಗಳನ್ನು ಸಾರ್ವಜನಿಕವಾಗಿ ದೇವರ ನಾಡಲ್ಲಿ ಎಂಬ ಚಿತ್ರವನ್ನೂ ಪ್ರದರ್ಶಿಸಲಾಗಿದೆ. ಹಾಗೂ ಆ ಬಗ್ಗೆ ಚರ್ಚೆ ಸಂವಾದವನ್ನು ಪರಿಣ ತರು ನಡೆಸಿಕೊಟ್ಟಿದ್ದಾರೆ ಎಂದು ವಿವರಿಸಿದರು.

ಕಿರುಚಿತ್ರಗಳು ಕೂಡ ಅದೇ ಮಟ್ಟದ ಸಂದೇಶವನ್ನು, ಅರಿವನ್ನು ನೀಡುವುದರಿಂದ ಅವುಗಳನ್ನು ನೋಡಲು ಉತ್ತೇಜಿಸುವುದು, ಅದನ್ನು ನಿರ್ಮಾಣ ಮಾಡುವ, ಅಭಿನಯಿಸುವ, ನಿರ್ದೇಶಿಸುವ ಮೂಲಕ ಜನರನ್ನು ಎಚ್ಚರಗೊಳಿಸಲಿ ಎಂಬ ಆಶಯದಿಂದ ಇದನ್ನು ವ್ಯವಸ್ಥೆಗೊಳಿಸಿದೆ ಎಂದರು.

ರಾಜ್ಯಮಟ್ಟದ ಈ ಸ್ಪರ್ಧೆ ಕಳೆದ ವರ್ಷ ನಡೆಯಬೇಕಾಗಿದ್ದು, ಲಾಕ್‌ಡೌನ್‌ನಿಂದಾಗಿ ನಿಂತಿತ್ತು. ಈಗ ಅದಕ್ಕೆ ಮರುಚೈತನ್ಯ ತುಂಬಿದ ರೀತಿಯಲ್ಲಿ ೧೦-೪-೨೦೨೧ ರಂದು ಬೆಳಗ್ಗೆ ೯ ರಿಂದ ಚಿತ್ರಗಳು ಪ್ರದರ್ಶನವಾಗುತ್ತದೆ. ಸಂಜೆ ಗಂಟೆಗೆ ಬಹುಮಾನ ವಿತರಣೆ ಮಾಡಲಾಗುವುದು.

ತುಮಕೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಅಧ್ಯಕ್ಷ ಕೆ.ಎನ್. ರಾಜಣ್ಣ, ಮೇಯರ್‌ ಬಿ.ಜಿ. ಕೃಷ್ಣಪ್ಪ, ಮಹಾನಗರ ಪಾಲಿಕೆ ಸದಸ್ಯರಾದ ಹೆಚ್. ಮಲ್ಲಿಕಾರ್ಜುನಯ್ಯ, ಖ್ಯಾತ ಚಲನಚಿತ್ರ ಚಿತ್ರ ನಿರ್ದೇಶಕರಾದ ನರೇಶ್‌ಕುಮಾರ್ ಹೆಚ್.ಎನ್. ಮತ್ತು ಕಿರುಚಿತ್ರ, ಸಾಕ್ಷ್ಯಚಿತ್ರ ನಿರ್ದೇಶಕಿಯಾದ ಸುರಭಿ ರೇಣುಕಾಂಬಿಕೆ ಮುಂತಾದವರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಹೆಚ್. ಗೋವಿಂದಯ್ಯ, ಇದರ ಸಂಚಾಲಕರಾದ ಸದಾಶಿವ್ ಹಾಗೂ ರಾಣ ಚಂದ್ರಶೇಖರ್ ಮುಂತಾದವರು ಪತ್ರಿಕಾ ಗೋಷ್ಠಿಯಲ್ಲಿ ಹಾಜರಿದ್ದರು.

Comment here