Uncategorized

ಶಿರಾದಲ್ಲಿ ಸಿಹಿಯೂಟ, ಸಿಹಿ ಸಂಭ್ರಮ

ಸಿರಾ: ಸರ್ಕಾರಿ ಶಾಲೆಗಳ ಮಕ್ಕಳಲ್ಲಿ ಇಂದು ಹೊಸತನದೊಂದಿಗೆ ಸಡಗರ, ಸಂಭ್ರಮ ಮನೆ ಮಾಡಿತ್ತು. 2023-24ನೇ ಸಾಲಿನ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಬುಧವಾರದಿಂದ ಪುನರಾರಂಭಗೊಂಡಿದ್ದು, ಸಿಹಿಯೂಟದೊಂದಿಗೆ ಶಿಕ್ಷಕರು ಸೇರಿದಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧಿಕಾರಿಗಳು ಮಕ್ಕಳನ್ನು ಪ್ರೀತಿಯಿಂದ ಬರಮಾಡಿಕೊಂಡರು.


ಕಳೆದ ಒಂದೂವರೆ ತಿಂಗಳಿನಿಂದ ಬೇಸಿಗೆ ರಜೆಯ ಸಂತಸದಲ್ಲಿದ್ದ ಮಕ್ಕಳು ಇಂದು ಶಾಲೆಗೆ ಹಾಜರಾಗಿ, ಗೆಳೆಯರ ಜತೆ ಕುಣಿದು, ಕುಪ್ಪಳಿಸಿದರು. ಶಾಲಾವರಣಕ್ಕೆ ಆಗಮಿಸಿದ ಎಲ್ಲಾ ಮಕ್ಕಳಿಗೂ ಗುಲಾಬಿ ನೀಡುವ ಮೂಲಕ ಶಿಕ್ಷಕರು ಸ್ವಾಗತಿಸಿ, ತಳಿರು-ತೋರಣ, ಹೂಗುಚ್ಛ ಹಾಗೂ ಸಿಹಿಯೂಟ ವಿತರಿಸಿ ಪ್ರಸಕ್ತ ಸಾಲಿನ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದರು.
ತಾಲ್ಲೂಕಿನ ಗಾಣದಹುಣಸೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ಕೃಷ್ಣಪ್ಪ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿ.ಗಂಗಾಧರ್, ಮುಖ್ಯ ಶಿಕ್ಷಕ ನರಸಿಂಹಮೂರ್ತಿ ಹಾಗೂ ಶಿಕ್ಷಕ ವೃಂದದವರು ಮಕ್ಕಳಿಗೆ ಬಲೂನುಗಳು ಹಾಗೂ ಗುಲಾಬಿ ಹೂ ಕೊಡುವ ಸ್ವಾಗತಿಸಿದ್ದು, ವಿಶೇಷವೆನಿಸಿತು.
ಕಳೆದ ಏ.10ರಿಂದ ಮಕ್ಕಳಿಗೆ ಬೇಸಿಗೆ ರಜೆ ನೀಡಲಾಗಿತ್ತು. ಶಿಕ್ಷಕರು ಕಳೆದ ಎರಡು ದಿನಗಳಿಂದ ಶಾಲಾ ಸ್ವಚ್ಛತೆ ನಡೆಸಿ, ಶಾಲಾ ಪ್ರಾರಂಭೋತ್ಸವಕ್ಕೆ ಸಿದ್ಧತೆ ನಡೆಸಿ, ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣ ರೂಪಿಸಿದ್ದರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ನಿರ್ದೇಶನದಂತೆ ಅಧಿಕೃತವಾಗಿ ಪ್ರಾರಂಭವಾಗಿವೆ. ವಿದ್ಯಾರ್ಥಿಗಳು ಶಾಲೆಗೆ ಬಂದ ಮೊದಲ ದಿನವೇ ಪಾಯಸ, ಸಿಹಿ ವಿತರಣೆ, ಪಠ್ಯಪುಸ್ತಕ, ಸಮವಸ್ತ್ರ ವಿತರಣೆ ಮಾಡಿ, ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳಿಗೆ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರು, ಸದಸ್ಯರು ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಂದ ವಿದ್ಯುಕ್ತವಾಗಿ ಚಾಲನೆ ದೊರೆಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ಕೃಷ್ಣಪ್ಪ ಮಾತನಾಡಿ, ಎಲ್ಲಾ ಸರ್ಕಾರಿ ಶಾಲೆಗಳಲ್ಲಿಯೂ ಇಂದಿನಿಂದ ಪಾಠಪ್ರವಚನ ಪ್ರಾರಂಭವಾಗಿದ್ದು, ಸರ್ಕಾರಿ ಶಾಲೆಗಳಲ್ಲಿ ಉತ್ತಮ ವಿದ್ಯಾರ್ಹತೆ ಹಾಗೂ ಕ್ರಿಯಾಶೀಲ ಶಿಕ್ಷಕರು ಇದ್ದು, ಒಂದನೇ ತರಗತಿಯಿಂದಲೇ ಇಂಗ್ಲೀಷ್ ಭಾಷೆಯನ್ನು ಬೋಧಿಸಲಾಗುತ್ತದೆ. ಪೋಷಕರು ತಮ್ಮ ಮಕ್ಕಳನ್ನು ತಪ್ಪದೇ ಸಮೀಪದ ಸರ್ಕಾರಿ ಶಾಲೆಗಳಿಗೆ ದಾಖಲು ಮಾಡುವ ಮೂಲಕ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಕೈಜೋಡಿಸುವಂತೆ ಮನವಿ ಮಾಡಿದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿ.ಗಂಗಾಧರ್ ಮಾತನಾಡಿ, ಮಕ್ಕಳಿಗೆ ಪಾಠದ ಜತೆಗೆ ಆರೋಗ್ಯ ತಪಾಸಣೆ, ಪೌಷ್ಠಿಕ ಆಹಾರ, ಕೆನೆಭರಿತ ಹಾಲು, ಮೊಟ್ಟೆ ಸೇರಿದಂತೆ ವಿಟಮಿನ್ ಮಾತ್ರೆಗಳನ್ನು ನಿಯಮಿತವಾಗಿ ನೀಡುವ ಮೂಲಕ ಮಕ್ಕಳ ದೈಹಿಕ ಆರೋಗ್ಯವನ್ನೂ ಸಹ ಸುಧಾರಿಸಲಾಗುತ್ತದೆ. ಆದ್ದರಿಂದ 6 ರಿಂದ 14 ವರ್ಷದೊಳಗಿನ ಎಲ್ಲಾ ಮಕ್ಕಳನ್ನು ತಪ್ಪದೇ ಶಾಲೆಗೆ ದಾಖಲಾಗುವಂತೆ ಕ್ರಮವಹಿಸಿ ಎಂದರು.
ಗಾಣದಹುಣಸೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 115 ಮಕ್ಕಳಲ್ಲಿ 75 ಮಕ್ಕಳು ಮೊದಲನೇ ದಿನವೇ ಶಾಲೆಗೆ ಹಾಜರಾಗಿ ಆಟವಾಡಿ ಸಂಭ್ರಮದಿಂದ ಕುಣಿದು ಕುಪ್ಪಳಿಸಿ, ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮದಲ್ಲಿ ಸಿದ್ಧಪಡಿಸಿದ್ದ ಪಾಯಸ, ಚಿತ್ರನ್ನ ಸೇವಿಸಿ, ಇಂದು ಗೈರುಹಾಜರಾದ ಮಕ್ಕಳ ಮನೆಗಳಿಗೆ ತೆರಳಿ ನಾಳೆಯಿಂದಲೇ ಶಾಲೆಗೆ ಹಾಜರಾಗುವಂತೆ ವಿದ್ಯಾರ್ಥಿ ಹಾಗೂ ಪೋಷಕರ ಮನವೊಲಿಸಲಾಯಿತು.
ದಾಖಲಾತಿ ಆಂದೋಲನ ಜಾಥಾವನ್ನು ಹಮ್ಮಿಕೊಂಡು, ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಕ್ಕಳೊಂದಿಗೆ ಸಂಚರಿಸಿ, ಶಿಕ್ಷಣದ ಮಹತ್ವವನ್ನು ಸಾರುವ ಹಾಡು ಹಾಡುತ್ತಾ, ಘೋಷಣೆಗಳನ್ನು ಕೂಗುತ್ತಾ ಶೈಕ್ಷಣಿಕ ವರ್ಷ ಆರಂಭಗೊಂಡಿದ್ದು, 6 ರಿಂದ 14 ವರ್ಷದೊಳಗಿನ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ದಾಖಲು ಮಾಡುವಂತೆ ಜಾಗೃತಿ ಮೂಡಿಸಲಾಯಿತು
ಈ ಸಂದರ್ಭದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ನರಸಿಂಹಮೂರ್ತಿ, ಸಹಶಿಕ್ಷಕರಾದ ಮಹಮ್ಮದ್ ಗೌಸ್, ಷಂಷೀರ್ ಬೇಗ್, ಆರ್.ತಿಪ್ಪೇಸ್ವಾಮಿ, ಎಸ್ ಡಿ ಎಂ ಸಿ ಸದಸ್ಯರು ಹಾಗೂ ಹಲವು ಪೋಷಕರು ಹಾಜರಿದ್ದರು.

ಪೋಟೋ: ಶಿರಾ ತಾಲ್ಲೂಕಿನ ಗಾಣದಹುಣಸೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾರಂಭೋತ್ಸವ ಪ್ರಯುಕ್ತ ಬುಧವಾರ ಮಕ್ಕಳಿಗೆ ಗುಲಾಬಿ ಹಾಗೂ ಬಲೂನ್ ಗಳನ್ನು ನೀಡುವ ಮೂಲಕ ಸ್ವಾಗತ ಕೋರಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ಕೃಷ್ಣಪ್ಪ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿ.ಗಂಗಾಧರ್, ಬಿಐಈಆರ್ ಟಿ ದಶರಥಕುಮಾರ್, ಮುಖ್ಯ ಶಿಕ್ಷಕ ನರಸಿಂಹಮೂರ್ತಿ, ಮಹಮದ್ ಗೌಸ್, ಷಂಷೀರ್ ಬೇಗ್, ಆರ್.ತಿಪ್ಪೇಸ್ವಾಮಿ ಸೇರಿದಂತೆ ಹಲವರು ಹಾಜರಿದ್ದರು.

Comment here