ಭಾನುವಾರದ ಕವಿತೆ

ಭಾನುವಾರದ ಕವಿತೆ:ಕಟ್ಟದಿರಿ ತಡೆಗೋಡೆ

ಡಾ.ಗಿರಿಜಾ


ಪ್ರೀತಿ ಬಿತ್ತಬೇಕಾದಲ್ಲಿ
ಸಾಮರಸ್ಯವ ಸಾರಬೇಕಾದಲ್ಲಿ
ಮನಸ್ಸುಗಳ ಮುರಿಯುವ
ತಡೆಗೋಡೆಯ ಕಟ್ಟದಿರಿ ಎಂದೂ

ನಿಮ್ಮ ನಂಬಿದ ಜನತೆಯ
ಬದುಕ ಬರಡಾಗಿಸದಿರಿ
ಛಿದ್ರಗೊಳಿಸದಿರಿ
ತಡೆಗೋಡೆಯ ಕಟ್ಟದಿರಿ ಎಂದೂ

ನಿಮ್ಮ ಲಾಠಿ ಏಟು
ದರ್ಪದ ನಡೆಯು ಅಲುಗಿಸದು ನಮ್ಮನ್ನು
ಇಮ್ಮಡಿಸಿಹುದು ನೂರ್ಪಟ್ಟು ಧೈರ್ಯ
ನಿಮ್ಮನ್ನು ಎದುರುಗೊಳ್ಳಲು
ನೀವೇ ಕಟ್ಟಿದ ತಡೆಗೋಡೆಯ

ಪ್ರೀತಿ ಬೆಸೆಯುವ ಸೇತುವೆಯ
ಕಟ್ಟಿರಿ ಜಗದಿ
ಕಟ್ಟದಿರಿ ತಡೆಗೋಡೆಯ ಎಂದೂ
ಮನುಕುಲಕ್ಕೆ ಮಾರಕವಾಗುವ ಗೋಡೆಯ.


ಡಾ. ಗಿರಿಜಾ ಅವರು ತುಮಕೂರು‌ ವಿ.ವಿಯ ಪ್ರಾಧ್ಯಾಪಕರು.

Comment here