Friday, May 31, 2024
Google search engine
Homeತುಮಕೂರು ಲೈವ್ಅನ್ಯಾಯದ ವಿರುದ್ಧ ಹೋರಾಡಿದ ಸರ್ಕಾರಿ ಶಾಲೆ ಎಸ್ ಡಿ‌ಎಂಸಿಯ ರೋಚಕ ಕಥೆ ಇದು

ಅನ್ಯಾಯದ ವಿರುದ್ಧ ಹೋರಾಡಿದ ಸರ್ಕಾರಿ ಶಾಲೆ ಎಸ್ ಡಿ‌ಎಂಸಿಯ ರೋಚಕ ಕಥೆ ಇದು

Publicstory. in


ಶಿರಾ: ಕಾನೂನು ವಿರುದ್ಧವಾಗಿ ಯಾರೇ ಕೆಲಸ ಮಾಡಿದರೂ ಅವರಿಗೆ ಒಂದಲ್ಲ ಒಂದಿನ ಶಿಕ್ಷೆ ಕಟ್ಟಿಟ್ಟ ಬುತ್ತಿ, ಕಾನೂನಿನ ದೃಷ್ಟಿಯಲ್ಲೂ ಎಲ್ಲರೂ ಒಂದೇ, ಸಾಮಾನ್ಯ ವ್ಯಕ್ತಿಯೂ ಸಹ ತನಗಾದ ಅನ್ಯಾಯದ ವಿರುದ್ಧ ಹೋರಾಡಿ ನ್ಯಾಯ ಪಡೆಯಬಹುದು ಎಂಬ ಆಶಯ ಹೊಂದಿರುವ ಭಾರತೀಯ ಸಂವಿಧಾನದಂತೆ ಇಲ್ಲೊಂದು ಸರ್ಕಾರಿ ಶಾಲೆಗೆ ಅನ್ಯಾಯವನ್ನು ಪ್ರಶ್ನಿಸಿ, ರಾಜ್ಯಮಟ್ಟದ ವರೆಗೂ ಹೋರಾಡಿ ಕೊನೆಗೂ ಜಯ ಪಡೆದ ಸರ್ಕಾರಿ ಶಾಲೆಯ ಎಸ್ ಡಿ ಎಂ ಸಿಯವರ ಕಾರ್ಯವನ್ನು ಪ್ರತಿಯೊಬ್ಬರೂ ಮೆಚ್ಚಲೇಬೇಕಿದೆ.

ಅಂತಹ ಸಾಹಸಕ್ಕೆ ಕೈ ಹಾಕಿ, ಅನ್ಯಾಯದ ವಿರುದ್ಧ ಹೋರಾಡಿ, ಅನೇಕ ಅಡೆತಡೆಗಳನ್ನು ಎದುರಿಸಿ, ನ್ಯಾಯ ಪಡೆದದ್ದು ಬೇರೆ ಎಲ್ಲೂ ಅಲ್ಲ ತುಮಕೂರು ಜಿಲ್ಲೆ ಸಿರಾ ತಾಲ್ಲೂಕು, ಹುಲಿಕುಂಟೆ ಹೋಬಳಿಯ ಕರೇಕಲ್ಲಹಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸದಸ್ಯರು.

*ಪ್ರಕರಣದ ವಿವರ*:

ಈ ಶಾಲೆಯಲ್ಲಿ 2016ರಿಂದ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಮತಿ‌ ಎಚ್.ಎನ್.ನಳಿನ ಎಂಬ ಸಹಶಿಕ್ಷಕಿ ಇದೂವರೆಗೂ ಈ ಶಾಲೆಯಲ್ಲಿ ಸರಿಯಾಗಿ ಕರ್ತವ್ಯವನ್ನೇ ಮಾಡಿಲ್ಲ..

ಕಾರಣ ಈ ಶಾಲೆಗೆ ಹೆಚ್ಚುವರಿ ಮೇರೆಗೆ ಬಂದ ಸದರಿ ಶಿಕ್ಷಕಿಯು ಅಂದಿನ ಬಿಇಓರವರ ಆದೇಶದಂತೆ ನಗರಕ್ಕೆ ಸಮೀಪದ ಅಂತಾಪುರ ಶಾಲೆಗೆ ನಿಯಮಬಾಹಿರವಾಗಿ ನಿಯೋಜನೆಗೊಂಡರು.

ನಂತರ 2017ರಲ್ಲಿ ಇಲಾಖೆಯ ಆದೇಶದಂತೆ ವೇತನಸಹಿತ ಉನ್ನತ ಶಿಕ್ಷಣಕ್ಕೆ ತೆರಳಿ 3ವರ್ಷಗಳ ಪದವಿ ಪೂರೈಸಿದರು. ಈ ನಾಲ್ಕು ವರ್ಷಗಳ ಕಾಲ ಇದೇ ಶಾಲೆಯ ಹೆಸರಿನಲ್ಲಿಯೇ ವೇತನವನ್ನೂ ಪಡೆದಿದ್ದಾರೆ..

ಮೂರು ವರ್ಷಗಳ ಪದವಿ ಪೂರೈಸಿದ ನಂತರ ಮೂಲ ಶಾಲೆಗೇ ಕರ್ತವ್ಯಕ್ಕೆ ಹಾಜರಾಗಬೇಕೆಂಬ ಶಿಕ್ಷಣ ಇಲಾಖೆಯ ಆಯುಕ್ತರ ಆದೇಶವಿದ್ದರೂ ಅದನ್ನು ಉಲ್ಲಂಘಿಸಿ, ಸಿರಾ ನಗರಕ್ಕೆ ಸಮೀಪದ ಅಂತಾಪುರ ಶಾಲೆಗೆ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರ ನಿಯಮಬಾಹಿರ ಆದೇಶದನ್ವಯ ವರದಿ ಮಾಡಿಕೊಂಡರು.

ಇದು ಸ್ಪಷ್ಟೀಕರಣ ಕೇಳಿ ಅಂದಿನ ಸಿರಾ ಬಿಇಓ‌ ಉಪನಿರ್ದೇಶಕರಿಗೆ ಎರಡು ಸಲ ಮನವಿ ಮಾಡಿದಾಗ, ತನ್ನ ತಪ್ಪಿನ ಅರಿವಾಗಿ, ತನ್ನ ಆದೇಶವನ್ನು ಉಪನಿರ್ದೇಶಕರು ಹಿಂಪಡೆದಿದ್ದಾರೆ.

ಅಂದೇ ಉಪನಿರ್ದೇಶಕರು ಆದೇಶ ಹೊರಡಿಸಿ, ಸದರಿ ಶಿಕ್ಷಕರು ಸ.ಕಿ.ಪ್ರಾ.ಶಾಲೆ, ಕರೇಕಲ್ಲಹಟ್ಟಿ ಶಾಲೆಗೆ ಹಾಜರಾಗಲು ಸೂಚಿಸಿದರು.‌ ಅಷ್ಟರಲ್ಲಿ ಅಂತಾಪುರ ಶಾಲೆಯ ಮುಖ್ಯ ಶಿಕ್ಷಕ ಹೊನ್ನಗಂಗಪ್ಪ ಸದರಿ ಶಿಕ್ಷಕಿಯನ್ನು ಬಿಇಓರವರ *ಚಾಲನಾ ಆದೇಶ* ಇಲ್ಲದೆಯೇ ಕರ್ತವ್ಯಕ್ಕೆ ಹಾಜರುಪಡಿಸಿಕೊಂಡು, ಕರ್ತವ್ಯ ಲೋಪ ಎಸಗಿದ್ದರು.

ಈ ಬಗ್ಗೆ ಬಿಇಓರವರು ಕೂಡಲೇ *ನೋಟೀಸ್* ನೀಡಿ, ಸೂಕ್ತ ಮಾರ್ಗದರ್ಶನದೊಂದಿಗೆ ಆಗಿರುವ ಲೋಪ ಸರಿಪಡಿಸಿಕೊಳ್ಳಲು ಅವಕಾಶವನ್ನೂ ನೀಡಿದ್ದರು.

ಆದರೂ ಅಂತಾಪುರ ಶಾಲೆಯ ಮುಖ್ಯ ಶಿಕ್ಷಕ ಹಾಗೂ ಸದರಿ ಶಿಕ್ಷಕಿಯು ಮೇಲಾಧಿಕಾರಿಗಳ ಆದೇಶಗೆ ಕವಡೆ ಕಾಸಿನ ಬೆಲೆಯನ್ನೂ ನೀಡದೆ ಅದೇ ಶಾಲೆಯಲ್ಲಿ ಮುಂದುವರೆದರು.

ಈ ಎಲ್ಲಾ ಪ್ರಕರಣವನ್ನು ಗಮನಿಸಿದ ಕರೇಕಲ್ಲಹಟ್ಟಿ ಶಾಲೆಯ ಎಸ್.ಡಿ.ಎಂ.ಸಿ. ಸದಸ್ಯರು ಹಾಗೂ ಯುವಕರು, ಶಿಕ್ಷಣಾಸಕ್ತರು *ಮಾಹಿತಿ ಹಕ್ಕಿ ಕಾಯಿದೆ* ಅಡಿ ಪ್ರಕರಣದ ಎಲ್ಲಾ ಮಾಹಿತಿಗಳನ್ನು ಪಡೆದು, ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರು ಹಾಗೂ ಅಂತಾಪುರ ಶಾಲೆಯ ಮುಖ್ಯ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಹಾಗೂ ಪ್ರಾಥಮಿಕ ಶಿಕ್ಷಣದ ನಿರ್ದೇಶಕರಿಗೆ ದೂರು ನೀಡಿ, ಮನವಿ ಮಾಡಿದರು.

ಇಡೀ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಆಯುಕ್ತರು ಕೂಡಲೇ ಪ್ರಕರಣದ ಪ್ರಾಥಮಿಕ ತನಿಖೆ ನಡೆಸಿ, ವರದಿ ಸಲ್ಲಿಸಲು ಉನ್ನತ ಅಧಿಕಾರಿಯೊಬ್ಬರನ್ನು ವಿಚಾರಣಾ ಅಧಿಕಾರಿಯನ್ನಾಗಿ ನೇಮಿಸಿ, ದೂರುದಾರರು ಹಾಗೂ ಆರೋಪ ಹೊತ್ತಿರುವವರ
ವಿಚಾರಣೆ ನಡೆಸಿದರು.

ವಿಚಾರಣೆಯಲ್ಲಿ ಉಪನಿರ್ದೇಶಕರು, ಸದರಿ ಶಾಲೆಯ ಮುಖ್ಯ ಶಿಕ್ಷಕರ ಹಾಗೂ ಸದರಿ ಶಿಕ್ಷಕಿಯ ಕರ್ತವ್ಯ ಲೋಪ ಹಾಗೂ ನಿಯಮಗಳ ಉಲ್ಲಂಘನೆ ಆಗಿರುವುದು ಸಾಬೀತಾಗಿದೆ.

ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, ಡಿ.4 ರಂದು ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ರೇವಣಸಿದ್ದಪ್ಪನವರು ಅಂತಾಪುರ ಶಾಲೆಯ ಮುಖ್ಯ ಶಿಕ್ಷಕ ಹೊನ್ನಗಂಗಪ್ಪನವರನ್ನು ವಿಚಾರಣೆ ಕಾಯ್ದಿರಿಸಿ, ಅಮಾನತ್ತು ಮಾಡಿ ಆದೇಶಿಸಿದ್ದಾರೆ.

ಪತ್ರಿಕೆಯೊಂದಿಗೆ ಕರೇಕಲ್ಲಹಟ್ಟಿ ಗ್ರಾಮದ ಶಿಕ್ಷಣಾಸಕ್ತ ಯುವಕರಾದ ದೇವರಾಜು, ಕರಿಯಣ್ಣ ಹಾಗೂ ಮತ್ತವರ ಬಳಗ ಮಾತನಾಡಿ, ನಮ್ಮೂರಿನ ಸರ್ಕಾರಿ ಶಾಲೆಯಲ್ಲಿ ಬಡ ಹಾಗೂ ಹಿಂದುಳಿದ ಬುಡಕಟ್ಟು ವರ್ಗದ ಮಕ್ಕಳೇ ಓದುತ್ತಿದ್ದು, 4 ವರ್ಷಗಳಿಂದ ಶೈಕ್ಷಣಿಕ ಪ್ರಗತಿ ಕುಂಠಿತವಾಗಿದೆ.

ಉನ್ನತ ವ್ಯಾಸಂಗಕ್ಕೆ ತೆರಳಿದ್ದ ಸದರಿ ಶಿಕ್ಷಕಿಯು ನಮ್ಮ ಶಾಲೆಯ ಹೆಸರಿನಲ್ಲಿ ಲಕ್ಷಾಂತರ ವೇತನ ಪಡೆದಿದ್ದು, ಈಗಲಾದರೂ ನಮ್ಮೂರಿನ ಶಾಲೆಗೆ ಹಾಜರಾಗದೇ ಮಕ್ಕಳಿಗೆ ಅನ್ಯಾಯ ಎಸಗಿದ್ದಾರೆ. ಇದಕ್ಕೆ ಅಂತಾಪುರ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಮೀಲಾಗಿರುತ್ತಾರೆ.
ಈ ಅನ್ಯಾಯದ ವಿರುದ್ಧವಾಗಿ ಅಗತ್ಯ ಮಾಹಿತಿಯೊಂದಿಗೆ
ಸುಮಾರು ಎರಡೂವರೆ ತಿಂಗಳಿನಿಂದಲೂ ಅನ್ಯಾಯದ ವಿರುದ್ಧ ಹೋರಾಡಿ, ಇಂದು ಜಯ ಪಡೆದಿದ್ದೇವೆ. ಸದರಿ ಶಿಕ್ಷಕರನ್ನು ಅಮಾನತು ತೆರವುಗೊಳಿಸಿ, ಜಿಲ್ಲೆಯ ಗಡಿ ಪಾವಗಡ ತಾಲ್ಲೂಕಿಗೆ ಸ್ಥಳ ನಿಯುಕ್ತಿ ಮಾಡಬೇಕು. ಅದನ್ನು ಹೊರತುಪಡಿಸಿ, ನಮ್ಮ ತಾಲ್ಲೂಕಿನ ಅಥವಾ ನಗರಕ್ಕೆ ಸಮೀಪದ ಶಾಲೆಗೆ ಸ್ಥಳ ನಿಯುಕ್ತಿಗೊಳಿಸಿದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಈ ಹೋರಾಟದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಎಸ್ ಡಿ‌ ಎಂ ಸಿ ಅಧ್ಯಕ್ಷರು, ಸದಸ್ಯರು, ಮಾಜಿ ಅಧ್ಯಕ್ಷರು, ಸದಸ್ಯರು, ಪೋಷಕರು, ಹಳೇ‌ ವಿದ್ಯಾರ್ಥಿಗಳು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?