Monday, June 17, 2024
Google search engine
Homeಪೊಲಿಟಿಕಲ್ಹೆಚ್ಚಿದ ಅಕ್ರಮ: ಇಂದು ಶಿಕ್ಷಕರ ಸಂಘದ ಚುನಾವಣೆ: ಯಾರಿಗೆ ದಕ್ಕಲಿದೆ ಜಯ?

ಹೆಚ್ಚಿದ ಅಕ್ರಮ: ಇಂದು ಶಿಕ್ಷಕರ ಸಂಘದ ಚುನಾವಣೆ: ಯಾರಿಗೆ ದಕ್ಕಲಿದೆ ಜಯ?

Publicstory.in


ಸಿರಾ: ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಇಂದು ಚುನಾವಣೆ ನಡೆಯಲಿದ್ದು, ಒಟ್ಟು 16 ಸಾಮಾನ್ಯ ಹಾಗೂ 8 ಮಹಿಳಾ ಮೀಸಲು ಸ್ಥಾನ ಸೇರಿ ಒಟ್ಟು 24 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಅಖಾಡ ರಂಗೇರಿದೆ.

ಚುನಾವಣಾ ಕಣದಲ್ಲಿ ಒಟ್ಟು 48 ಅಭ್ಯರ್ಥಿಗಳು ತಮ್ಮ ಅದೃಷ್ಠ ಪರೀಕ್ಷೆಗೆ ಸಜ್ಜಾಗಿದ್ದು, ಕಳೆದ ಒಂದು ವರ್ಷದಿಂದ ನಡೆಸಿದ್ದ ಪೂರ್ವಸಿದ್ದತೆಗಳಿಗೆ ಸಂಜೆ ಫಲಿತಾಂಶದ ನಂತರ ತೆರೆಬೀಳಲಿದೆ.

24 ಸ್ಥಾನಗಳಿಗೆ 2 ಸಿಂಡಿಕೇಟ್‌ಗಳಿಂದ ಶಿಕ್ಷಕರು ಸ್ಪರ್ಧಿಸಿದ್ದು, ತಾಲ್ಲೂಕಿನಾದ್ಯಂತ ಸುಮಾರು ಒಂದು ತಿಂಗಳಿಂದಲೂ ಪ್ರಚಾರ ನಡೆಸಲಾಗಿದೆ. ಹಾಲಿ ಅಧ್ಯಕ್ಷ ಟಿ.ಎನ್.ಓಂಕಾರೇಶ್ವರ್‌, ಕಾರ್ಯದರ್ಶಿ ಸುರೇಶ್‌ ನೇತೃತ್ವದಲ್ಲಿ ಈ.ದೊಡ್ಡಣ್ಣ, ಆರ್.ದೇವರಾಜು ಮುಂದಾಳತ್ವದಲ್ಲಿ ಒಂದು ಸಿಂಟಿಕೇಟ್‌ ಹಾಗೂ ಹಾಲಿ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್‌, ತಾಲ್ಲೂಕು ಸಂಘದ ಮಾಜಿ ಅಧ್ಯಕ್ಷ ಹಿಮಂತರಾಜು ಹಾಗೂ ಹನುಮಂತರಾಜು ನೇತೃತ್ವದಲ್ಲಿ ಮತ್ತೊಂದು ತಂಡ ತನ್ನ ಪರ 24 ಅಭ್ಯರ್ಥಿಗಳನ್ನು ಕಣಕ್ಕಿಳಿಸಿ, ಈ ಬಾರಿ ಅದೃಷ್ಠ ಪರೀಕ್ಷೆಗೆ ಮುಂದಾಗಿದ್ದಾರೆ.

ಕಳೆದ 2014ರಲ್ಲಿ ನಡೆದ ಈ ಚುನಾವಣೆಯ ಫಲಿತಾಂಶವನ್ನೊಮ್ಮೆ ಅಚಲೋಕಿಸುವುದಾದರೆ, ಅಂದು ಇದ್ದ 25 ಸ್ಥಾನಗಳಲ್ಲಿ 21 ಸ್ಥಾನಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಓಂಕಾರೇಶ್ವರ್‌ ಮತ್ತವರ ಟೀಂ ಅಧಿಕಾರದ ಗದ್ದುಗೆಗೆ ಏರಿತ್ತು.

ಅಂದು ಹಿಂದುಳಿದ ಎಲ್ಲಾ ಜಾತಿಗಳು ಒಟ್ಟಾಗಿ ಅಂದಿನ ಅಧಿಕಾರಿಯೊಬ್ಬರ ದುರಾಡಳಿತದ ವಿರುದ್ದ ತಿರುಗಿ ಬಿದ್ದು, ಮತಚಲಾವಣೆ ಸಂದರ್ಭದಲ್ಲಿ ಅಧಿಕಾರಿಯ ನೇತೃತ್ವದ ತಂಡ ಸಂಪೂರ್ಣವಾಗಿ ನೆಲಕಚ್ಚುವಂತೆ ಇಡೀ ತಾಲ್ಲೂಕಿನ ಶಿಕ್ಷಕರು ತೀರ್ಮಾನ ಮಾಡಿ, ಅದರಲ್ಲಿ ಯಶಸ್ವಿಯೂ ಆದರು. ಕಳೆದ ಬಾರಿ 3 ಸಿಂಡಿಕೇಟ್‌ ಇದ್ದು, ಮತಗಳ ವಿಭಜನೆಯಾಗಲು ಕಾರಣವಾಯಿತು. ಆದರೆ ಈ ಬಾರಿ ಕೇವಲ ಎರಡೇ ಸಿಂಡಿಕೇಟ್‌ ಇರುವುದರಿಂದ ಫಲಿತಾಂಶ ಎರಡೂ ಟೀಂನವರಿಗೂ ನಿರೀಕ್ಷೆಯಂತೆ ಗೆಲುವು ಸುಲಭವಾಗಿರಲು ಸಾಧ್ಯವಿಲ್ಲ ಎಂಬ ಲೆಕ್ಕಚಾರಗಳು ಕೇಳಿಬರುತ್ತಿವೆ.

ಪ್ರಸ್ತುತ ತಾಲ್ಲೂಕು ಸಂಘದ ಅಧ್ಯಕ್ಷರಾಗಿದ್ದುಕೊಂಡು ಯಾವುದೇ ಕಪ್ಪುಚುಕ್ಕೆ ಇಲ್ಲದಂತೆ 6 ವರ್ಷಗಳ ಕಾಲ ಅಧಿಕಾರ ನಡೆಸಿ, ತಾಲ್ಲೂಕಿನ ಶಿಕ್ಷಕರ ನಾಡಿಮಿಡಿತ ಅರಿತಿರುವ ಓಂಕಾರೇಶ್ವರ್‌ ಮತ್ತವರ ತಂಡ ಯಾವುದೇ ಶಿಕ್ಷಕರಿಗೆ ಯಾವುದೇ ಸಂದರ್ಭದಲ್ಲಿ ಕಚೇರಿಯಿಂದ ಆಗಬೇಕಾದ ಕೆಲಸ ಹಾಗೂ ದೊರೆಯಬೇಕಾದ ಸೌಲಭ್ಯಗಳನ್ನು ಶಾಲೆಯ ಬಾಗಿಲಿಗೆ ತಲುಪಿಸಿ, ಜಾತ್ಯಾತೀತ ನಾಯಕರೆನಿಸಿಕೊಂಡಿರುವುದು ಅನುಕೂಲವಾಗಲಿದೆ ಎಂಬ ಮಾತುಗಳನ್ನು ಕೆಲವು ಶಿಕ್ಷಕ ವಲಯದಲ್ಲಿ ಕೇಳಿಬರುತ್ತಿವೆ.

ಅನಿಲ್‌ ಕುಮಾರ್‌ ನೇತೃತ್ವದ ಹಿಮಂತರಾಜು, ಹನುಮಂತರಾಜು, ನರಸಿಂಹರಾಜು ಸೇರಿದಂತೆ ಶಿಕ್ಷಕರು ಸೇರಿ ರಚಿಸಿರುವ ತಂಡ‌ ಸಹ ಜೋರು ಪ್ರಚಾರದಲ್ಲಿ ಹಿಂದೆ ಬಿದ್ದಿಲ್ಲ.

ಇನ್ನೂ, ಶಿಕ್ಷಕ ಸಮುದಾಯದಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಕೆಲವರು ಪ್ರಚಾರದ ವೇಳೆ ಶಿಕ್ಷಕರಿಗೆ ನೀಡುತ್ತಿರುವ ಆಸೆ-ಆಮಿಷ-ಗಿಫ್ಟ್-ಹಣ ಹಾಗೂ ಅತಿಯಾದ ಜಾತಿಯತೆ ಇತ್ಯಾದಿ ಅಂಶಗಳ ಬಗ್ಗೆಯೂ ಕೋಪದ ಮಾತುಗಳನ್ನು ಆಡುತ್ತಿದ್ದಾರೆ.

ಅಲ್ಲದೇ ಎನ್‌ ಪಿ ಎಸ್‌ ನಿಂದ ಗೆಲ್ಲುವ ಶಿಕ್ಷಕರೊಬ್ಬರಿಗೆ ಅಧ್ಯಕ್ಷ ಸ್ಥಾನ ನೀಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವುದು ಈ ವಲಯದ ಶಿಕ್ಷಕರು ಯಾರ ಪರ ವಾಲುತ್ತಾರೆ ಎಂದು ಹೇಳಲು ಬರುವುದಿಲ್ಲ.

ನಾನು ಇಲಾಖೆಗೆ ಸೇರಿ 34 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದೇನೆ. ಸಂಘದಲ್ಲಿ ನಿರ್ದೇಶಕನಾಗಿಯೂ ಕೆಲಸ ಮಾಡಿದ್ದೇನೆ. ಈಗ ನನ್ನ ಸೇವೆಯಷ್ಟೂ ವಯಸ್ಸಾಗಿರದ ವ್ಯಕ್ತಿಗಳು ಅಧ್ಯಕ್ಷರಾಗಿ ಆಯ್ಕೆಯಾಗುವುದು ಹೇಗೆ ಸರಿ. ಹುಡುಗಾಟಿಕೆಯವರು ತಾಲ್ಲೂಕಿನ ಅಧ್ಯಕ್ಷನಾದರೆ ಆಗುವ ಅನಾಹುತ, ನಡೆಸುವ ಆಡಳಿತ ವೈಖರಿ ತಾಲ್ಲೂಕಿನ ಶೈಕ್ಷಣಿಕ ವ್ಯವಸ್ಥೆಯ ಅಧೋಗತಿಗೆ ಕಾರಣವಾಗಲಿದೆ ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಶಿಕ್ಷಕರೊಬ್ಬರು ಪತ್ರಿಕೆಗೆ ತಿಳಿಸಿದರು.

ಓಂಕಾರೇಶ್ವರ್‌ ಹಾಗೂ ಸುರೇಶ್‌ ನೇತೃತ್ವದ ತಂಡವು ಹಿಂದಿನ ಚುನಾವಣೆಯ ಪೂರ್ವದ ಪ್ರಣಾಳಿಕೆ ಯಲ್ಲಿ ತಿಳಿಸಿದಂತೆ ನಿವೃತ್ತರಾದ ದಿನದಂದೇ ಸದರಿ ಶಿಕ್ಷಕರಿಗೆ ಸಂಘದ ವತಿಯಿಂದ ಸನ್ಮಾನ ಮಾಡಿ ಅವರ ಸೇವೆಯನ್ನು ಸ್ಮರಿಸಿದ್ದು, ಬಹುದಿನಗಳ ಶಿಕ್ಷಕರ ಬೇಡಿಕೆಯಾದ ಗುರುಭವನ ನಿರ್ಮಾಣ ಮಾಡಲು ರಾಜಕೀಯ ಇಚ್ಛಾಶಕ್ತಿ ಹಾಗೂ ಅಧಿಕಾರಿಗಳ ಬೆಂಬಲದೊಂದಿಗೆ ಅಂತಿಮ ಹಂತಕ್ಕೆ ತಂದಿರುವುದು, ಶೈಕ್ಷಣಿಕವಾಗಿ ಶಾಲೆಗಳಿಗೆ ಬೇಕಾದ ಅಗತ್ಯ ದಾಖಲೆಗಳ ಪೂರೈಕೆ, ಸಂಪನ್ಮೂಲ ವ್ಯಕ್ತಿಗಳಿಂದ ಶಿಕ್ಷಕರಿಗೆ ಮಾರ್ಗದರ್ಶನ ಮತ್ತು ತರಬೇತಿ ನೀಡಿ, ಶಿಕ್ಷಕರ ವೃತ್ತಿ ಸಾಮರ್ಥ್ಯ ಹೆಚ್ಚಿಸಿರುವುದು, ಶಿಕ್ಷಕರ ಮತ್ತು ಅವಲಂಬಿತರ ವೈದ್ಯಕೀಯ ವೆಚ್ಚದ ಬಿಲ್‌ಗಳನ್ನು ಸಿದ್ಧಪಡಿಸಿ, ವಿವಿಧ ಹಂತಗಳಿಂದ ಅನುದಾನ ಮಂಜೂರು ಮಾಡಿಸಿ, ಶಿಕ್ಷಕರ ಖಾತೆಗಳಿಗೆ ಜಮಾ ಮಾಡಿಸಿರುವುದು ಸೇರಿದಂತೆ ಹಲವು ಶಿಕ್ಷಕ-ಸ್ನೇಹಿ ಕಾರ್ಯಕ್ರಮಗಳನ್ನು ಜಾರಿಗೆ ತಂದಿರುವುದನ್ನೇ ಮುಂದು ಮಾಡಿಕೊಂಡು ಶಿಕ್ಷಕ ಮತದಾರರ ಹತ್ತಿರವಾಗಲು ಪ್ರಯತ್ನಪಟ್ಟಿದೆ. ಪ್ರಚಾರದ ವೇಳೆಯಲ್ಲೂ ಇದನ್ನೇ ಮುಂದು ಮಾಡಿದೆ.

ಪ್ರತಿ ತಿಂಗಳು ಸಹ ಮೊದಲ ವಾರದಲ್ಲೇ ವೇತನ ಕೊಡಿಸಲು ಅಧಿಕಾರಿಗಳಿಗೆ ಸಲಹೆ, ಸೂಚನೆ ನೀಡಿ, ಅನುದಾನಗಳ ಮಂಜೂರು ಮಾಡಲು ಕೋರಿ ಮೇಲಾಧಿಕಾರಿಗಳಿಗೆ ಪತ್ರ ಬರೆದು, ಅನುಸರನೆ ಮಾಡಿ, ಅನುಕೂಲ ಮಾಡಿರುವುದು,
ಶಿಕ್ಷಕರ ವೇತನ ಖಾತೆಗಳಿಗೆ ಜಮಾ ಆದ ತಕ್ಷಣ ಅದರ ಸಂದೇಶ ಹಾಗೂ ಇಲಾಖೆಯ ಸಹಭಾಗಿತ್ವದಲ್ಲಿ ವೇತನದ ವಿವರಗಳನ್ನು ಸಂದೇಶದ ಮೂಲಕ ತಲುಪಿಸಲು ಕ್ರಮ ವಹಿಸಿ, ಯಶಸ್ವಿಯಾಗಿ ಜಾರಿ ಮಾಡಿದ್ದು,
ಆರ್ಥಿಕ ವರ್ಷದ ಕೊನೆಯಲ್ಲಿ ನೀಡಬೇಕಾದ ʻವಾರ್ಷಿಕ ವರಮಾನ ತೆರಿಗೆ ಲೆಕ್ಕಾಚಾರʼದ ವಿವರಗಳನ್ನು ತುಂಬಲು ಬೇಕಾದ ಪೂರಕ ಮಾಹಿತಿಯನ್ನು ಒದಗಿಸಿರುವುದು,
ಶಿಕ್ಷಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಿ, ಪ್ರತಿಭೆಗಳನ್ನು ಪ್ರೋತ್ಸಾಹಿಸಿರುವುದು ಮುಂತಾದ ಕೆಲಸ ಕಾರ್ಯಗಳ ಬಗ್ಗೆಯೂ ಚರ್ಚೆಯನ್ನು ಮುನ್ನೆಲೆಗೆ ತಂದಿದೆ.

ಈ ಎಲ್ಲಾ ಕಾರ್ಯಕ್ರಮಗಳೊಂದಿಗೆ ತಾಲ್ಲೂಕಿನ ಪ್ರಾಥಮಿಕ ಶಿಕ್ಷಣದ ಪ್ರಗತಿಗೆ ಹಾಗೂ ಶಿಕ್ಷಕರಿಗೆ ಸಲ್ಲಬೇಕಾದ ಎಲ್ಲಾ ರೀತಿಯ ಸೇವಾ ಸೌಲಭ್ಯ ಹಾಗೂ ಅನುಕೂಲಗಳನ್ನು ಮಾಡಿ, ಮುಂದೆಯೂ ಇದಕ್ಕಿಂತ ಹೆಚ್ಚಿನ ಸೇವೆ ಮಾಡುವ ಇಚ್ಛಾಶಕ್ತಿ ಹೊಂದಿದ್ದೇವೆ ಎಂಬ ಪ್ರಚಾರದ ಮೂಲಕ ಓಂಕಾರೇಶ್‌, ಸುರೇಶ್‌, ದೊಡ್ಡಣ್ಣ ಹಾಗೂ ದೇವರಾಜು ಇರುವ ತಂಡ ಮತದಾರರ ಮನಮುಟ್ಟಲು ಪ್ರಯತ್ನ ಹಾಕಿದೆ.

ಎದುರುದಾರ ತಂಡವು ಪ್ರಚಾರದಲ್ಲಿ ಹಿಂದೆ‌ ಬಿದ್ದಿಲ್ಲ.‌ಹಲವು ಭರವಸೆಗಳನ್ನು ನೀಡಿ ಕುತೂಹಲ ಮೂಡಿಸಿದೆ.

ನಕಲಿ ಬೆಳ್ಳಿ ಬಟ್ಟಲು ನೀಡಿ ಯಾಮಾರಿಸಿದ ಅಭ್ಯರ್ಥಿಗಳು:

ಚುನಾವಣೆಯಲ್ಲಿ ಶತಾಯ-ಗತಾಯ ಗೆಲ್ಲಲೇ ಬೇಕೆಂದು ತೀರ್ಮಾನಿಸಿರುವ ತಂಡವೊಂದು ಶಿಕ್ಷಕರಿಗೆ ಹಣ ಮತ್ತು ಬೆಲೆಬಾಳುವ ಉಡುಗೊರೆಗಳ ಆಸೆ-ಆಮಿಷ ತೋರಿಸಿ ಮತ ಯಾಚಿಸುತ್ತಿರುವುದು ಬೆಳಕಿಗೆ ಬಂದಿದೆ.

ಇದರಿಂದ ಕೋಪಗೊಂಡಿರುವ ತಾಲ್ಲೂಕಿನ ಪ್ರಜ್ಞಾವಂತ ಶಿಕ್ಷಕ ಸಮುದಾಯವು “ಇಡೀ ಇತಿಹಾಸದಲ್ಲೇ ಇಂತಹ ವಾಮಮಾರ್ಗದ ಹಾಗೂ ಭ್ರಷ್ಠಾಚಾರ ಪ್ರಚೋದಿಸುವ ಚುನಾವಣಾ ಪ್ರಚಾರ ಎಂದೂ ನಡೆದಿರಲಿಲ್ಲ” ಆದ್ದರಿಂದ ಹಣ ಹಾಗೂ ಇನ್ನಿತರೆ ವಸ್ತುಗಳನ್ನು ನೀಡಿರುವ ತಂಡವನ್ನು ಸಂಪೂರ್ಣವಾಗಿ ತಿರಸ್ಕರಿಸಲು ಸಿದ್ಧರಾಗಬೇಕು ಎಂದು ಕೆಲವು ಮತದಾರ ಶಿಕ್ಷಕರು ಪ್ರಚಾರ ನಡೆಸುತ್ತಿದ್ದಾರೆ.

ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಮತದಾನ ಸಮಯದಲ್ಲಿ ಇಡೀ ಸಿಂಡಿಕೇಟ್‌ ಗೆ ಓಟ್‌ ಮಾಡಿ, ಮೊಬೈಲ್‌ ನಲ್ಲಿ ಚಿತ್ರೀಕರಿಸಕೊಂಡು ಬಂದು ತೋರಿಸಿದರೆ, ಸ್ಥಳದಲ್ಲೇ 2 ಸಾವಿರ ಹಣ ನೀಡಲಾಗುವುದು ಎಂದೂ ಪ್ರಚಾರ ಮಾಡಲಾಗಿದೆ.

ಬೆಳ್ಳಿ ಬಟ್ಟಲು ನೀಡಿ ಮತಯಾಚನೆ ಮಾಡುತ್ತಿದ್ದ ವೇಳೆ ಅದನ್ನು ಪಡೆದ ಶಿಕ್ಷಕಿಯೊಬ್ಬರು ಹತ್ತಿರವೇ ಇದ್ದ ಜ್ಯೂಯಲರಿ ಶಾಪ್‌ ಗೆ ತೆರಳಿ ಪರಿಶೀಲಿಸಿದಾಗ, ಅದು ನಕಲಿ ಎಂದು ಗೊತ್ತಾದಾಗ, ಸ್ಥಳದಲ್ಲೇ ಹೋಗುತ್ತಿದ್ದ ಶಿಕ್ಷಕ ಅಭ್ಯರ್ಥಿಗಳನ್ನು ವಾಪಾಸ್‌ ಕರೆದು ಮುಖಕ್ಕೆ ಮಂಗಳಾರತಿ ಮಾಡಿದ ಘಟನೆಯೂ ಭಾನುವಾರ ಸಂಜೆ ನಡೆದಿದೆ.

ಸೋಮವಾರ ತಾಲ್ಲೂಕಿನ ಎಲ್ಲಾ ಭಾಗಗಳಿಗೆ ಏಜೆಂಟರ ಮೂಲಕ ಪ್ರತಿ ಶಿಕ್ಷಕರಿಗೆ ಸಾವಿರ ರೂಪಾಯಿಗಳನ್ನು ನೀಡುವ ಮೂಲಕ ಪ್ರಜಾಪ್ರಭುತ್ವ ಆಶಯವನ್ನೇ ಬುಡಮೇಲು ಮಾಡಲು ಹೊರಟಿರುವ ಶಿಕ್ಷಕರ ಒಂದು ತಂಡ ಸಾರ್ವತ್ರಿಕ ಚುನಾವಣೆಗೂ ಮಿಗಿಲಾಗಿ ಹಣದ ಹೊಳೆ ಹರಿಸಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಕೆಲವು ಮನೆಗಳಲ್ಲಿ ಅಭ್ಯರ್ಥಿಗಳು ನೀಡಿದ ಗಿಫ್ಟ್‌ಗಳನ್ನು ಮುಖಕ್ಕೆ ಹೊಡೆದ ಹಾಗೆ ವಾಪಾಸ್‌ ನೀಡಿರುವುದು ಹಾಗೂ ಪತಿ ಮನೆಗೆ ಬಂದ ನಂತರ ಗಿಫ್ಟ್‌ ವಿಷಯ ಗೊತ್ತಾಗಿ, ಗಲಾಟೆಗಳೂ ನಡೆದಿರುವ ಉದಾಹರಣೆಗಳಿವೆ.

ತಾಲೂಕಿನ ಪ್ರಜ್ಞಾವಂತ ಹಾಗೂ ವಿಚಾರವಂತ ಶಿಕ್ಷಕರು ಯೋಚಿಸಿ ಮತ ನೀಡಬೇಕಾದ ಅನಿವಾರ್ಯತೆ ಇದ್ದು, ಎಲ್ಲದಕ್ಕೂ ಇಂದು ಸಂಜೆ ಉತ್ತರ ಸಿಗಲಿದೆ.


ಚುನಾವಣೆ ನಡೆಯುವ ಸ್ಥಳ: ಸರ್ಕಾರಿ ಪದವಿ ಪೂರ್ವ ಕಾಲೇಜು,
ಸಮಯ: ಬೆಳಿಗ್ಗೆ 7.30ರಿಂದ ಸಂಜೆ 4ರವರೆಗೆ
ಮತದಾನ ಮಾಡಲು ಕಡ್ಡಾಯವಾಗಿ ಭಾವಚಿತ್ರ ಇರುವ ಗುರುತಿನ ಚೀಟಿ ತರುವುದು ಕಡ್ಡಾಯ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?