ಹರೀಶ್ ಕಮ್ಮನಕೋಟೆ
ತುಮಕೂರು; ಒಂದೆಡೆ ಇಡೀ ವಿಶ್ವವನ್ನೇ ಕೊರೊನಾ ಸೋಂಕು ತಲ್ಲಣಗೊಳಿಸುತ್ತಿದ್ದರೆ, ಇತ್ತ ಔಷಧಿ ಸಿಗದ ಕಾರಣ ಗ್ರಾಮೀಣ ಜನರು ಕೊರೊನಾ ಅಮ್ಮನ ಮೊರೆ ಹೋಗುತ್ತಿದ್ದಾರೆ.
ವೈದ್ಯರು, ನರ್ಸ್ ಗಳು, ಸ್ವಚ್ಛತಾ ಕರ್ಮಿಗಳು, ಪೋಲೀಸರು ಜನರ ಜೀವದ ರಕ್ಷಣೆಗೆ ಪಣತೊಟ್ಟಿದ್ದಾರೆ.
ಇದರ ನಡುವೆ ಜನರು ಹೆದರಿ ಕೊರೊನ ದೇವಿಯ ಪೂಜಿಸುತ್ತಿದ್ದಾರೆ. ತುಮಕೂರು ತಾಲ್ಲೂಕಿನ ಗೂಳೂರು ಹೋಬಳಿಯ ಕೊಂಡಾಪುರ ಗೋಮಾಳ ಗ್ರಾಮದಲ್ಲಿ ಶುಕ್ರವಾರ ದೇವಿಯ ಪೂಜೆ ನಡೆದಿದೆ.
ಹೌದು.. ಭಯವೇ ಭಕ್ತಿಯ ಮೂಲ ಎಂಬ ನಾಣ್ಣುಡಿಯಂತೆ, ಕೊರೊನ ಸೋಂಕಿಗೆ ಭಯಭೀತರಾಗಿ ತಾವೇ ಕೊರೊನ ದೇವಿಯನ್ನು ಸೃಷ್ಟಿಸಿ ಪೂಜೆಗೈದಿರುವ ಘಟನೆ ಶುಕ್ರವಾರ ಜರುಗಿದೆ.
ಹಿಂದಿನ ಕಾಲದಲ್ಲಿ ಸಿಡುಬು, ದಡಾರ, ಪ್ಲೇಗ್ ನಂತಹ ಸಾಂಕ್ರಾಮಿಕ ರೋಗಗಳು ಹರಡಿದರೆ ಬೇವಿನ ಮರದಮ್ಮನಿಗೆ ಶರಣಾಗುವ ಪದ್ಧತಿ ಇತ್ತು.
ಅದೇ ರೀತಿಯಾಗಿ ಇಲ್ಲಿಯೂ.. ಬೇವಿನ ಮರದ ಬುಡದಲ್ಲಿ ಚಿಕ್ಕದಾದ ಹಸಿರೆಲೆ ಹೊದಿಕೆಯ ಚಪ್ಪರವನ್ನು ಹಾಕಿ ಹಣ್ಣು, ಹೂ, ಕಾಯಿ, ಮೊಸರನ್ನ ಮತ್ತು ಪೊಂಗಲ್ ಎಡೆ ಇಟ್ಟು ಕೊರೊನ ಅಮ್ಮನಿಗೆ ಹರಕೆ ಹೊತ್ತಿದ್ದಾರೆ.
ನಮ್ಮೂರಿಗೆ ಯಾವುದೇ ಖಾಯಿಲೆ ಕಸಾರೆ ಬರದಿರಲಿ ಹಾಗೂ ಜನರ ಆರೋಗ್ಯ ಸುಧಾರಿಸಲಿ ಎಂಬ ಹಿತದೃಷ್ಟಿಯಿಂದ ಕೊರೊನ ದೇವಿಯ ಪೂಜೆಮಾಡಿದ್ದೇವೆ ಎನ್ನುತ್ತಾರೆ ಗ್ರಾಮಸ್ಥರಾದ ಕಂಬೇಗೌಡ.