https://youtu.be/sEE5QtUyzsI
Publicstory. in
ತುಮಕೂರು: ಉಳ್ಳವರಿಗೆ ದಾನ ನೀಡುವುದು ಬೇಡ ಎಂಬ ಅಭಿಯಾನ ಉಳ್ಳವರಿಂದಲೇ ಆರಂಭವಾಗಬೇಕಾಗಿದೆ ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಬಿ.ಸುರೇಶಗೌಡ ಹೇಳಿದ್ದಾರೆ.
ಗೂಳೂರು ಜಿಲ್ಲಾ ಪಂಚಾಯತನ ಹರಳೂರು ಗ್ರಾಮದಲ್ಲಿ ಬಡವರಿಗೆ ಆಹಾರದ ಕಿಟ್ ಹಾಗೂ ಎಲ್ಲ ಜನರಿಗೂ ಮಾಸ್ಕ್ ಹಂಚುವ ಕೆಲಸಕ್ಕೆ ಚಾಲನೆ ನೀಡಿ ಮಾತನಾಡಿದರು.
ಕರೊನಾಕ್ಕೆ ಈವರೆಗೂ ಔಷಧಿ ಕಂಡು ಹಿಡಿಯಲು ಇಡೀ ಜಗತ್ತಿಗೆ ಸಾಧ್ಯವಾಗಿಲ್ಲ. ಹೀಗಾಗಿ ಬಡವರು ಮತ್ತಷ್ಟು ಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದರು.
ಕ್ಷೇತ್ರದಲ್ಲಿ ಕೆಲವರು ಉಳ್ಳವರಿಗೂ ದಾನ ನೀಡ ತೊಡಗಿದ್ದಾರೆ. ದಾನದ ಮೂಲಕ ರಾಜಕೀಯ ಶಕ್ತಿ ಗಳಿಸಿಕೊಳ್ಳಲು ಮುಂದಾಗಿದ್ದಾರೆ. ಇಂತಹ ಸಂದಿಗ್ಧ ಸ್ಥಿತಿಯಲ್ಲೂ ರಾಜಕೀಯ ಮಾಡುವ ಮನಸ್ಸನ್ನು ಯಾರೂ ಇಟ್ಟುಕೊಳ್ಳಬಾರದು ಎಂದು ಹೇಳಿದರು.
ಉಳ್ಳವರು ಯಾವುದೇ ಕಾರಣಕ್ಕೂ ಆಹಾರ ಕಿಟ್ ಪಡೆಯಬೇಡಿ. ನಾನು ಅದಕ್ಕಾಗಿ ಒಂದು ಕಿಟ್ ಗೆ 600-700 ರೂಪಾಯಿ ವೆಚ್ಚ ಮಾಡುತ್ತಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಕರೆಯಂತೆ ಪಡಿತರ ಕಾರ್ಡ್ ಇಲ್ಲದ, ಆಧಾರ್ ಗೆ ಪಡಿತರ ಕಾರ್ಡ್ ಲಿಂಕ್ ಆಗದ ಬಡವರಿಗೆ ಆಹಾರ ವಿತರಿಸುವ ಕೆಲಸ ಮಾಡುತ್ತಿದ್ದೇನೆ ಎಂದರು.
ಉಳ್ಳವರು ಯಾವುದೇ ಕಾರಣಕ್ಕೂ ತಪ್ಪು ಹುಡುಕಬೇಡಿ. ಬಡವರ ಬಗೆಗಿನ ಕಾಳಜಿ, ಗೌರವ, ಅವರ ಸ್ಥಿತಿಯನ್ನು ಕಂಡು ಮಾತನಾಡುತ್ತಿದ್ದೇನೆ. ಇದೇ ಪ್ರೀತಿ, ಗೌರವ ಬಡವರ ಬಗ್ಗೆ ನಿಮಗೂ ಇದೆ ಎಂದು ನಾನು ತಿಳಿದುಕೊಂಡಿದ್ದಾನೆ ಎಂದರು.
ರೈತರಿಗೆ ಬೆಳೆದಿರುವ ತರಕಾರಿ ಮಾರಲು ಸಾಧ್ಯವಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೂ ಒಳಿತಾಗಲೀ ಎಂಬ ಕಾರಣದಿಂದ ತರಕಾರಿ, ಗೆಣಸು, ಬಾಳೆಕಾಯಿ ಕೊಂಡು ಬಡವರಿಗೆ, ಅಗತ್ಯ ಇರುವವರಿಗೆ ಹಂಚುವ ಕೆಲಸ ಮಾಡುತ್ತಿದ್ದೇನೆ ಎಂದರು.
ತ್ಯಾಗದ ಹಿಂದೆ ಸುಖ ಇರಲಿದೆ. ಸ್ವಾಭಿಮಾನ ನಮಗೆ ಘನತೆ ತಂದು ಕೊಡುತ್ತದೆ. ನನ್ನ ಕ್ಷೇತ್ರದ ಜನರು ಸ್ವಾಭಿಮಾನಿಗಳು. ಹೀಗಾಗಿಯೇ ಕಳೆದ ಹತ್ತು ವರ್ಷದ ಅವಧಿಯಲ್ಲಿ ಜಿಲ್ಲೆಯಲ್ಲಿ ಯಾವ ಕ್ಷೇತ್ರದಲ್ಲಿ ಆಗದಷ್ಟು ಅಭಿವೃದ್ಧಿ ಕೆಲಸಗಳನ್ನು ಕ್ಷೇತ್ರದಲ್ಲಿ ಮಾಡಲು ಸಾಧ್ಯವಾಯಿತು ಎಂದು ಹೇಳಿದರು.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ, ಗೂಳೂರು ಜಿಲ್ಲಾ ಪಂಚಾಯ್ತಿಯ ಹರಳೂರು ಗ್ರಾಮ ಪಂಚಾಯತಿ ಪ್ರತಿ ಮನೆ ಮನೆಗೆ ಉಚಿತವಾಗಿ ಮಾಸ್ಕ್ ಹಾಗೂ ನೇರವಾಗಿ ರೈತರಿಂದ ಖರೀದಿ ಮಾಡಿದ ತರಕಾರಿಯನ್ನು ಮತ್ತು ರೇಷನ್ ಕಾರ್ಡ್ ರಹಿತ ಬಡ ಕುಟುಂಬಗಳಿಗೆ ರೇಷನ್ ಕಿಟ್ ನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶಿವಕುಮಾರ್, ಹರಳೂರು ಕುಮಾರಯ್ಯ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ರಾಜಣ್ಣ, ಗ್ರಾಮ ಪಂ ಸದಸ್ಯರಾದ ರಮೇಶ್, ಪುಟ್ಟರಾಜು, ಶಾಂತಕುಮಾರ್, ಕೃಷ್ಣಪ್ಪ, ಮುಖಂಡರಾದ ಹೊನ್ನೇಶ್ ಕುಮಾರ್, ಪಾಲಣ್ಣ ಮುಂತಾದವರು ಭಾಗವಹಿಸಿದ್ದರು.