Publicstory
ತುಮಕೂರು: ವಿವಿಧ ಜಾತಿ, ಧರ್ಮ, ಪಂಥಗಳಿಗೆ ಸೇರಿದ ಭಾರತೀಯರೆಲ್ಲರೂ ಭಾವೈಕ್ಯತೆಯಿಂದ ಒಗ್ಗೂಡಿ ಕೆಲಸ ಮಾಡುವ ಮೂಲಕ ದೇಶವನ್ನು ಅಭಿವೃದ್ಧಿ ಪಥದ ಕಡೆ ಕೊಂಡೊಯ್ಯಬೇಕಿದೆ ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ಅನಂತಪ್ಪ ಬರಗೂರುಪಾಳ್ಯ ಕರೆ ನೀಡಿದರು.
ನಗರದ ನೆಹರು ಯುವ ಕೇಂದ್ರ ಕಚೇರಿಯಲ್ಲಿ ಕೇಂದ್ರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ತುಮಕೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಜಯಂತಿ ಅಂಗವಾಗಿ ನಡೆದ ಸದ್ಭಾವನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿಯೊಬ್ಬರು ಸಮಾನತೆ, ಸಹಬಾಳ್ವೆ ಮತ್ತು ಸಹೋದರತ್ವವನ್ನು ಮೈಗೂಡಿಸಿಕೊಳ್ಳಬೇಕು. ಎಲ್ಲಾ ಧರ್ಮ, ಭಾಷೆ ಹಾಗೂ ಜನರಲ್ಲಿ ಸೌಹಾರ್ದತೆ ಉತ್ತೇಜಿಸಿ ಎಲ್ಲರಲ್ಲೂ ಸದ್ಭಾವನೆ ಮೂಡಿಸಿ ಹಿಂಸಾಚಾರ ತ್ಯಜಿಸುವಂತೆ ಮಾಡುವುದು ಸದ್ಭಾವನ ದಿನದ ಉದ್ದೇಶವಾಗಿದೆ ಎಂದರು.
ಸದ್ಭಾವನಾ ದಿನಾಚರಣೆ ಅಂಗವಾಗಿ ಪ್ರತಿಜ್ಞಾವಿಧಿ ಬೋಧಿಸಲಾಯಿತು.
‘ಜಾತಿ, ಧರ್ಮ, ಪ್ರದೇಶ, ಮತ ಅಥವಾ ಭಾಷೆಯ ಬೇಧ ಭಾವವಿಲ್ಲದೇ ಭಾರತದ ಎಲ್ಲಾ ಜನತೆಯ ಭಾವೈಕ್ಯ ಮತ್ತು ಸೌಹಾರ್ದಕ್ಕಾಗಿ ಕಾರ್ಯ ನಿರ್ವಹಿಸುತ್ತೇನೆ. ಹಿಂಸಾಚಾರಕ್ಕೆ ಅವಕಾಶ ನೀಡದೆ ಸಮಾಲೋಚನೆ ಹಾಗೂ ಸಂವಿಧಾನಾತ್ಮಕ ಕ್ರಮಗಳ ಮೂಲಕ ಪರಿಹರಿಸುತ್ತೇನೆಂದು ಪ್ರತಿಜ್ಞೆ ಮಾಡುತ್ತೇನೆ’ ಎಂಬ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಕಾರ್ಯಕ್ರಮದಲ್ಲಿ ಎನ್ ವೈ ವಿ ಗಳಾದ ಮಾರುತೇಶ್ ಕಾಳಾಪುರ, ಉಮೇಶ್, ದಿವ್ಯ, ರಶ್ಮಿ, ರವಿಕುಮಾರ್, ವಿಜಯ್ ಕುಮಾರ್ ಜಿ.ಆರ್,ಚಂದನ್ ಡಿ ಎನ್, ಕುವೆಂಪು, ಲೆಕ್ಕಾಧಿಕಾರಿ ಶೇಖರ್, ಸಿಬ್ಬಂದಿ ರಾಮಮೂರ್ತಿ ಇನ್ನಿತರರು ಉಪಸ್ಥಿತರಿದ್ದರು.