Sunday, September 8, 2024
Google search engine
Homeಜನಮನಕತ್ತಲೊಳಗಿನ ಬೆಳಕು ಬೆಳಗಿಸಲಿ ಬದುಕು!

ಕತ್ತಲೊಳಗಿನ ಬೆಳಕು ಬೆಳಗಿಸಲಿ ಬದುಕು!

ತುರುವೇಕೆರೆ ಪ್ರಸಾದ್


ನಮ್ಮ ಪ್ರಧಾನಿ ಮೋದಿಯವರು ಕೊರೊನಾ ವಿರುದ್ಧ ಹೋರಾಟದ ಒಂದು ನೈತಿಕ ಸಂಕೇತವಾಗಿ ಇಂದು ರಾತ್ರಿ (ಭಾನುವಾರ) 9 ಗಂಟೆಗೆ ನಮ್ಮ ಮನೆಗಳ ವಿದ್ಯುತ್ ದೀಪಗಳನ್ನು ಆರಿಸಿ ಹಣತೆ, ಮೇಣದ ಬತ್ತಿಗಳನ್ನು ಹಚ್ಚುವಂತೆ ನಮಗೆಲ್ಲಾ ಕರೆ ಕೊಟ್ಟಿದ್ದಾರೆ. ನಮ್ಮ ಮನೆ,ಮನಸ್ಸುಗಳು ಕರೋನಾ ತಮಸ್ಸನ್ನು ಭೇಧಿಸಿ ಉಜ್ವಲ ಬೆಳಕಿನಿಂದ ಕಂಗೊಳಿಸಲಿ ಎಂದು ನಾವೆಲ್ಲಾ ಒಬ್ಬರಿಗೊಬ್ಬರು ಆಶಿಸಬೇಕಿದೆ.

ಧರ್ಮಾಂಧತೆಯ ಕತ್ತಲಿನಲ್ಲಿ ಮನುಕುಲವನ್ನೇ ನಾಸ ಮಾಡಲು ಹೊರಟಿರುವವರ ತಮದ ಅಂಧಕಾರವನ್ನು ತೊಡೆದು ಜ್ಞಾನದ ಪ್ರಖರ ದೀಪವನ್ನು ಹಚ್ಚಬೇಕಿದೆ. ಆ ಬೆಳಕಿನಲ್ಲಿ ನಾವು ಪರಸ್ಪರ ಒಬ್ಬರನ್ನೊಬ್ಬರು ಕಂಡುಕೊಳ್ಳಬೇಕು,

ನಮ್ಮೊಳಗಿನ ಅಜ್ಞಾನವನ್ನು ಓಡಿಸಿ ಜ್ಞಾನದ ಹಣತೆ ಹಚ್ಚಬೇಕು. ಹಾಗೆ ನಮ್ಮೊಳಗಿನ ಹಣತೆಯನ್ನು ಬೆಳಗುವಂತೆ ಹೊರಗಿನ ಅಂಧಕಾರವನ್ನು ತೊಡೆಯಲೂ ಸಾಲು ಸಾಲು ಹಣತೆಗಳನ್ನು ಹಚ್ಚುತ್ತಾ ಹೋಗಬೇಕು. ಆದರೆ ಜಿಎಸ್‍ಎಸ್ ಹೇಳುವಂತೆ ಜಗದ ಅಂಧಕಾರವನ್ನೇ ತೊಡೆದು ಬಿಡುತ್ತೇನೆಂಬ ಅಹಂಕಾರದಿಂದ ಬೀಗಬಾರದು.

ನಾವು ಹಚ್ಚುವ ಹಣತೆ ಮತ್ತೊಬ್ಬರ ದಾರಿ ದೀಪವಾಗಬೇಕು. ನಮ್ಮೊಳಗಿನ ಮತ್ತು ನಮ್ಮ ಹೊರಗಿನ ಎಲ್ಲಾ ಬದುಕು ನಿಚ್ಛಳವಾಗಿ ಕಾಣುವಷ್ಟು ಬೆಳಕು ಮಾತ್ರ ನಮಗೆ ಸಾಕು ಎಂಬುದರ ದ್ಯೋತಕವೇ ಈ ಹಣತೆ ಹಚ್ಚುವ ಪ್ರಕ್ರಿಯೆ!

ನಾವು ಈ ಆಧುನಿಕ ಬೆಳಕಿಗೆ ಎಷ್ಟೊಂದು ಹೊಂದಿಕೊಂಡು ಬಿಟ್ಟಿದ್ದೇವೆ ಎಂದು ಯೋಚಿಸಿದರೇ ಅಚ್ಚರಿ ಎನಿಸುತ್ತದೆ.ಆಧುನಿಕ ಬೆಳಕಿಲ್ಲದೆ ಬದುಕೇ ಇಲ್ಲ ಎನ್ನುವಂತಾಗಿದೆ. ಬೆಳಕಿಗೂ ಆಧುನಿಕತೆಗೂ ನೇರಾ ನೇರ ಸಂಬಂಧ ಕಲ್ಪಿಸಿರುವ ಮನುಷ್ಯ ಕತ್ತಲನ್ನು ಒಂದು ಘೋರ ಅನುಭವ ಎಂದು ಭ್ರಮಿಸಿಬಿಟ್ಟಿದ್ದಾನೆ.

ಮನೆಯಲ್ಲಿನ ಪ್ರತಿ ವಸ್ತುವು ಜೀವಂತವಾಗಿರಲು, ಚಲನಶೀಲತೆಯಿಂದಿರಲು ವಿದ್ಯುತ್ ಬೇಕೇ ಬೇಕು. ಮನೆಯ ಟಿವಿ, ಟೇಪ್‍ರೆಕಾರ್ಡರ್, ಡಿವಿಡಿ, ಮೊಬೈಲ್ಗಳು, ಎಲ್‍ಇಡಿ ಬಲ್ಬ್‍ಗಳು, ವೈಭವೋಪೇತ ಶಾಂಡಲಿಯರ್‍ಗಳು ಎಲ್ಲದಕ್ಕೂ ವಿದ್ಯುತ್ ಬೇಕು. ವಿದ್ಯುತ್‍ನಿಂದ ಇವೆಲ್ಲಾ ಝಗಮಗಿಸಬೇಕು.ಆ ಬೆಳಕಿನ ವೈಭೋಗವನ್ನು ಮನುಷ್ಯ ಕಣ್ತುಂಬಿಕೊಳ್ಳಬೇಕು.

ಬೆಳಕು ಇಂದು ಕೇವಲ ಬಳಕೆಯ ಮೌಲ್ಯವಾಗಿಯಷ್ಟೇ ಉಳಿದಿಲ್ಲ,.ಅದರ ಕೊಡು ಕೊಳ್ಳುವ ವಿನಿಮಯ ಮೌಲ್ಯವೂ ಭಾರೀ ದುಬಾರಿಯೇ! ಅದರ ಸಂಕೇತ ಮೌಲ್ಯವಂತೂ ಅದರಷ್ಟೇ ವೇಗ,ವ್ಯಾಪಕತೆಯಲ್ಲಿ ಬೆಳೆದಿದೆ. ಆಧುನಿಕ ಬೆಳಕು ಅಭಿವೃದ್ಧಿಯ, ವೈಭೋಗದ, ಸುಖದ ಸಂಕೇತ. ಯಾರ ಮನೆ ಮುಂದೆ ಎಷ್ಟು ಬೆಳಕಿದೆ, ಎಂತಹ ವೈವಿಧ್ಯದ ಲೇಸರ್ ಬಣ್ಣದ ಬೆಳಕಿನ ಬಿಂಬಗಳಿವೆ, ಎಂಬ ಆಧಾರದ ಮೇಲೇ ಅಂತಸ್ತು, ಪ್ರತಿಷ್ಠೆ ನಿರ್ಧಾರವಾಗುತ್ತದೆ.

ಕತ್ತಲೆ ವಿನಾಶದ, ಭೀತಿಯ, ಅರಾಜಕತೆಯ ಸಂಕೇತ ಎಂದು ನಿರೂಪಿಸಲ್ಪಟ್ಟಿದೆ. ಬೆಳಕಿಗೆ ಪ್ರತಿಫಲಿಸುವ ಶಕ್ತಿಯಿದೆ. ಅದರಿಂದ ವಸ್ತುವಿನ ಆಕಾರ ನಮ್ಮ ಕಣ್ಣಿನಲ್ಲಿ ರೂಪ ಪಡೆಯುತ್ತದೆ. ಬೆಳಕು ಕೇವಲ ದಾರಿ ತೋರಿಸುವ ದೀವಿಗೆಯಾಗಿ, ಜ್ಞಾನದ ಬೆಳಕಾಗಿ ಉಳಿದಿಲ್ಲ. ವಸ್ತುವಿನ ಆಕಾರ, ರೂಪವನ್ನು ಇಮ್ಮಿಡಿಸಿ, ವೈಭವೀಕರಿಸಿ ಅದನ್ನು ಸುಖದ ಲೋಲುಪತೆಗೆ ಸಮೀಕರಿಸಲು ನಾವು ಬೆಳಕನ್ನು ಉಪಯೋಗಿಸುವುದನ್ನು ಕಲಿತುಬಿಟ್ಟಿದ್ದೇವೆ.ಹಾಗಾಗಿ ಬೆಳಕಿಲ್ಲದ ಪ್ರಪಂಚ ನಮ್ಮ ಪಾಲಿಗೆ ಘೋರ ನರಕ! ಬೆಳಕಿನಿಂದ ನಮ್ಮನ್ನು ನಾವು ನೋಡಿಕೊಳ್ಳುವುದನ್ನು ಕಲಿತಿದ್ದೇವೆ.

.ನಮ್ಮನ್ನು ನಾವು ವೈಭವೀಕರಿಸಿಕೊಳ್ಳುವುದನ್ನೂ ಕಲಿತು ಅದಕ್ಕೆ ಸೌಂದರ್ಯ ಎಂದು ಹೆಸರಿಸಿದ್ದೇವೆ. ಕತ್ತಲೆಗಿಲ್ಲದ ಬೆತ್ತಲೆಯ ಹಂಗು ಬೆಳಕಿಗಿದೆ..ಅದಕ್ಕೇ ಬೆಳಕಿನಲ್ಲಿ ಸೌಂದರ್ಯದ ಶೋಧನೆ, ಉತ್ಖನನ ನಡೆಯುತ್ತದೆ..

ದೊಡ್ಡ ದೊಡ್ಡ ಬಂಗಲೆಗಳನ್ನು ಅಪಾರ್ಟ್‍ಮೆಂಟ್‍ಗಳನ್ನು ಕಟ್ಟಿಸಿಕೊಂಡು ರೂಮಿಗೊಂದು ಡಜನ್ ಪ್ರಜ್ವಲಿಸುವ ಆಧುನಿಕ ವಿದ್ಯುದ್ದೀಪಗಳನ್ನು ಹಾಕಿಕೊಂಡು ನಾವು ಜನರಿಂದ ದೂರ ದೂರ ಉಳಿದುಹೋಗಿದ್ದೇವೆ. ಸೋಶಿಯಲ್ ಡಿಸ್ಟೆಂನ್ಸಿಂಗ್‍ನೇ ಆಣಕಿಸುವ ಪರ್ಸನಲ್ ಡಿಸ್ಟೆಂನ್ಸಿಂಗ್ ನಮ್ಮದು! ಬರೀ ಬಂಗಲೆಗಳು, ಅಪಾರ್ಟ್‍ಮೆಂಟ್‍ಗಳು ಮಾತ್ರವೇ ಅಲ್ಲ.ಮನೆ ಮನೆಗಳಲ್ಲು ಆಧುನಿಕ ಬೆಳಕಿನಿಂದಾಗಿ ನಾವು ದೈಹಿಕವಾಗಿ, ಮಾನಸಿಕವಾಗಿ ದೂರವೇ ಉಳಿದಿದ್ದೇವೆ.

ವಿದ್ಯುತ್ ಹಾಗೂ ಬೆಳಕಿನಪರಿಕರಗಳೇ ನಮ್ಮ ಬಂಧು, ಬಳಗ, ಮಿತ್ರರು. ನಮ್ಮ ಲ್ಯಾಪ್‍ಟ್ಯಾಪ್, ನಮ್ಮ ಮೊಬೈಲ್, ನಮ್ಮ ಟಿವಿ. ನಮ್ಮ ತಲೆಯ ಮೇಲಿನ ಬಲ್ಬೇ ನಮ್ಮ ಪ್ರಪಂಚ. ಒಂದು ಮೊಬೈಲ್, ಪೋಲೀಸರ ವಾಕಿಟಾಕಿ ತರ ಯಾವ ಬೆಳಕು, ಬಣ್ಣವನ್ನೂ ಪ್ರದರ್ಶಿಸದಿದ್ದರೆ ಇಷ್ಟೊಂದು ಜನ ಮೊಬೈಲ್ ಕೊಳ್ಳುತ್ತಲೇ ಇರಲಿಲ್ಲ. ಅದಕ್ಕೇ ಕೇವಲ ಜ್ಞಾನ ಕೊಡುವ ಬೆಳಕು ಸಮ್ಮೋಹನ ಶಕ್ತಿಯ ರೂಪ ಪಡೆದಿದೆ.

ಆ ಬೆಳಕಿನ ಹಂಗಲ್ಲೆ ನಾವು ಒಂಟಿಯಾಗಿ ಉಳಿದು ಬಿಡುತ್ತೇವೆ. ನಮಗೆ ಇನ್ನೊಬ್ಬ ಮನುಷ್ಯನ ಹಂಗೇ ಬೇಕಿಲ್ಲ..ಹೀಗಾಗಿ ಆಧುನಿಕ ಬೆಳಕು ಐಕ್ಯತೆ, ಒಗ್ಗೂಡುವಿಕೆ, ಸಮುದಾಯ ತತ್ವದ ಬದಲು ಮನುಷ್ಯನಲ್ಲಿ ಭಿನ್ನತೆಯ, ಒಡೆದು ಆಳುವ, ಮತ್ತೊಬ್ಬನನ್ನು ಧಿಕ್ಕರಿಸುವ ಸ್ವಭಾವವನ್ನು ಹುಟ್ಟಿ ಹಾಕಿದೆ.

ಆಧುನಿಕತೆಯ ಪ್ರಖರ ಬೆಳಕು ಮನುಷ್ಯನ ಅಹಂ ಉದ್ದೀಪಿಸಿ, ಸ್ವತಂತ್ರ್ತನಾಗಿ ಸ್ವೇಚ್ಛಾಚಾರಿಯಾಗಿ, ಅಹಂಕಾರಿಯಾಗಿ,ಒಂಟಿಯಾಗಿ ಮಾಡಿದೆ. ಈ ಬೆಳಕು ಮನಸ್ಸಿನ ವಿಕಾರವನ್ನು ಬಿಟ್ಟು ಮಿಕ್ಕೆಲ್ಲಾ ಆಕರ್ಷಣೆಗಳನ್ನು, ಆಕಾರ, ಗುಣ ರೂಪಗಳನ್ನು ಅಳೆದೂ ಸುರಿದೂ ತನ್ನ ಸ್ವಾರ್ಥಕ್ಕೆ ತಕ್ಕಂತೆ ಸ್ವೀಕರಿಸುವಂತೆ ಮಾಡುತ್ತದೆ.

ಕತ್ತಲ ಈ ಎಲ್ಲಾ ಸೃಷ್ಟಿಯ ಪ್ರಕ್ರಿಯೆಗಳನ್ನು ಸುಂದರವಾಗಿ ಬೆಳಕು ಕೇವಲ ಪ್ರದರ್ಶಿಸುತ್ತದೆ. ಬೆಳಕಿನ ಹಂಗಿನ ಮನುಷ್ಯ ಕಣ್ಮುಚ್ಚಿದರೆ ಎಷ್ಟೇ ಪ್ರಖರ ಬೆಳಕಿದ್ದರೂ ಕತ್ತಲೆಯೇ! ಆದರೆ ಕತ್ತಲೆಯಲ್ಲೇ ಕುಳಿತ ಮನುಷ್ಯ ಕಣ್ಮುಚ್ಚಿ ಬೆಳಕಿನ ಚಿತ್ರಗಳನ್ನು ತನ್ನ ಮನಸೋ ಇಚ್ಚೆ ಕಾಣಬಹುದು..ದಿಗ್ ದಿಗಂತಗಳಾಚೆ ಅವನು ಮನಸ್ಸಿನ ಬೆಳಕು ಹರಿದಾಡುತ್ತದೆ..ಸೃಷ್ಟಿಯ ಸುಂದರ ಚಿತ್ರಗಳನ್ನು ಅನಾವರಣಗೊಳಿಸುತ್ತದೆ. ಅದೇ ಧ್ಯಾನ, ಅದೇ ಯೋಗ..!

.ನಮ್ಮದೇ ಆಧುನಿಕತೆಯ ಬೆಳಕಿನಲ್ಲಿ, ಬದುಕಿನ ಧಾವಂತದಲ್ಲಿ ಕತ್ತಲೆಯು ಅನಾವರಣಗೊಳಿಸುವ ಪ್ರಕೃತಿಯ ಎಷ್ಟೋ ಅಚ್ಛರಿಗಳು, ಸಹಜ ಬೆಳಕುಗಳು ನಮಗೆ ಗೊತ್ತೇ ಇಲ್ಲ. ಶುಭ್ರ ಆಕಾಶದ ತುಂಬಾ ಪಳಗುಟ್ಟುವ ನಕ್ಷತ್ರಗಳು, ಗ್ರಹಗಳು! ಹಾಲುಚೆಲ್ಲಿದಂತೆ ದಕ್ಷಿಣದಿಂದ ಉತ್ತರಕ್ಕೆ ಹಾದು ಹೋಗುವ ಕ್ಷೀರಪಥ! ಇವೆಲ್ಲಾ ಮಕ್ಕಳಿಗಿರಲಿ ಎಷ್ಟೋ ಜನ ದೊಡ್ಡವರಿಗೂ ಸೋಜಿಗ ಎನಿಸುವುದಿಲ್ಲ.

ವಿಜ್ಞಾನ ಪುಸ್ತಕದಲ್ಲಿ ಓದುವ ದೃವ ನಕ್ಷತ್ರ, ಸಪ್ತರ್ಷಿಮಂಡಲ, ಶನಿ, ಗುರು, ಶುಕ್ರ ಮುಂತಾದ ಪ್ರಮುಖ ಆಕಾಶಕಾಯಗಳನ್ನು ಸಹ ನಮ್ಮ ಮಕ್ಕಳು ಗುರುತಿಸಲಾರರು.

ಕುಂತಿ, ನಕುಲ, ದ್ರೌಪದಿ ಮೊದಲಾದ ಪುಂಜಗಳ ಹೆಸರಿನ ಹಿಂದಿನ ಗ್ರೀಕ್ ಪುರಾಣದ ದಂತ ಕತೆಗಳನ್ನು ನಮ್ಮ ಮಕ್ಕಳು ಕೇಳಿರಲಿಕ್ಕೂ ಸಾಧ್ಯವಿಲ್ಲ. ಹಲವು ಮಕ್ಕಳು ಜೀವಮಾನದಲ್ಲಿ ಒಮ್ಮೆಯೂ ಕತ್ತೆತ್ತಿ ಆಕಾಶದ ಕಡೆ ನೋಡಿರಲಿಕ್ಕಿಲ್ಲ. ಆಧುನಿಕತೆಯ ಪ್ರತೀಕವಾದ ಪ್ರಜ್ವಲಿಸುವ ಮಕ್ರ್ಯುರಿ, ಸೋಡಿಯಂ ಲ್ಯಾಂಪಿನ ದೀಪಗಳ ಪ್ರಭಾವಳಿಯ ಆಚೆ ಅವರಿಗೆಂದೂ ಕತ್ತೆತ್ತಿ ನೋಡುವ ಅಗತ್ಯ ಬಿದ್ದಿರಲಿಕ್ಕಿಲ್ಲ.

ಹಾಗೊಂದು ವೇಳೆ ನೋಡುವ ಪ್ರಯತ್ನ ಮಾಡಿದ್ದರೂ ಅವರಿಗೆ ಪಟ್ಟಣದ ಪ್ರಖರ ದೀಪಗಳ ನಡುವೆ ಏನೂ ಕಾಣುತ್ತಲೂ ಇರಲಿಲ್ಲ. ಸಿಂಹ, ವೃಷ್ಚಿಕ ಮೊದಲಾದ ರಾಶಿಗಳು ಕೇವಲ ಟಿವಿ ಜ್ಯೋತಿಷಿಗಳ ಬಾಯಲ್ಲಿ ಕೇಳಿ, ಅವಕ್ಕೆ ಹೆದರಿ ತಾಯತ ಕಟ್ಟಿಸಿಕೊಂಡು ಶಾಂತಿ ಮಾಡಿಸಿಕೊಂಡವರೇ ಹೊರತು ಇವು ರಾತ್ರಿಯ ಆಗಸದಲ್ಲಿ ಎಷ್ಟು ಆಕರ್ಷಕವಾಗಿ, ಅನ್ವರ್ಥವಾಗಿ ಕಾಣುತ್ತವೆ ಎಂದು ಹಿರಿಯರೇ ತಮ್ಮ ಜೀವಿತಾವಧಿಯಲ್ಲೊಮ್ಮೆ ನೋಡಿರಲಾರರು.

ತಮ್ಮ ಜನ್ಮ ನಕ್ಷತ್ರ, ರಾಶಿಯನ್ನೂ ಆಕಾಶದಲ್ಲಿ ಗುರುತಿಸಬಹುದು ಎಂಬ ಜ್ಞಾನವನ್ನೂ ಯಾವ ಬೆಳಕೂ ನೀಡಿಲ್ಲದಿರುವುದೇ ಒಂದು ದುರಂತ. ಈ ಆಧುನಿಕತೆಯ ಬೆಳಕಿನ ಪ್ರಖರತೆ ಪ್ರಭಾವಳಿಯೇ ಹಾಗೇ!ಅದು ಸುತ್ತೆಲ್ಲಾ ಬೆಳಕು ಹರಡಿ ಮನಸ್ಸಿನ, ಅರಿವಿನ ಕತ್ತಲೆಯನ್ನು ಹಾಗೇ ಉಳಿಸಿಬಿಡುತ್ತದೆ. ಅಲ್ಲಮ ಪ್ರಭುಗಳ ಒಂದು ವಚನ ಹೀಗಿದೆ:

‘ಅಪರಿಮಿತ ಕತ್ತಲೆಯೊಳಗೆ ವಿಪರೀತದ ಬೆಳಕನಿಕ್ಕಿದವರಾರೋ?ಬೆಳಗೂ ಅದೇ, ಕತ್ತಲೆಯೂ ಅದೇ, ಇದೇನು ಚೋದ್ಯವೋ? ಒಂದಕ್ಕೊಂದಂಜದು! ಆನೆಯೂ ಸಿಂಹವೂ ಒಂದಾಗಿ ಉಂಬುದ ಕಂಡು ಬೆರಗಾದರು ಕಾಣ-ಗುಹೇಶ್ವರಾ’. ಬೆಳಕು ಕತ್ತಲೆಗೆ ಅಂಜುವುದಿಲ್ಲ, ಕತ್ತಲು ಬೆಳಕಿಗೆ ಅಂಜುವುದಿಲ್ಲ ಎಂಬುದು ಕಲ್ಪನೆಯೇ ಆದರೂ ನಿಜಕ್ಕೂ ಸತ್ಯ ಎನಿಸುತ್ತದೆ.

ಇಂತಹ ದ್ವಂದ್ವಗಳೇ ಬದುಕಲ್ಲಿ ಕುತೂಹಲನ್ನು ಉಳಿಸಿವೆ. ಆದರೆ ನಾವು ಇಂತಹ ದ್ವಂದ್ವಗಳಿಂದ ಆಚೆ ಹೋಗಿ ಬೆಳಕಿಗೇ ಹೆಚ್ಚು ಮಹತ್ವ ಕೊಟ್ಟಿರುವುದರಿಂದ ಕತ್ತಲೊಳಗಿನ ಬೆಳಕನ್ನೂ ಕುತೂಹಲದಿಂದ ನೋಡುವ ಶಕ್ತಿಯನ್ನೇ ಕಳೆದುಕೊಂಡಿದ್ದೇವೆ.

ಈಗ ಕರೋನಾದಿಂದ ಮನುಷ್ಯನ ಅಟ್ಟಹಾಸಕ್ಕೆ ಅಹಮಿಕೆಗೆ ಒಂದು ಕಾಮ ಬಿದ್ದಿದೆ. ಅತಿಕಾಮಿಯಾದ ಮನುಷ್ಯ ತನ್ನ ಸ್ವಾತಂತ್ಯ್ರ, ಸ್ವೇಚ್ಛೆ ಕಳೆದುಕೊಂಡವನಂತೆ ಒದ್ದಾಡುತ್ತಿದ್ದಾನೆ. ತಾನೇ ಕಟ್ಟಿಕೊಂಡ ಮನೆಯೆಂಬ ತನ್ನ ಪ್ರೀತಿಯ ಗೂಡಿನಲ್ಲಿ ನೆಮ್ಮದಿಯಾಗಿರದೆ ರಾಪಾಡುತ್ತಿದ್ದಾನೆ. ಇಡೀ ಪ್ರಪಂಚವನ್ನೇ ಪರಿಶೋಧಿಸಿದ್ದ ಮನುಷ್ಯನಿಗೆ ಎಲ್ಲಾ ಅಂಗೈನಲ್ಲೇ ಸಿಗುವಂತಾಗಿತ್ತು.

ಈಗ ಎಷ್ಟು ತೊಳೆದರೂ ಪಾಪದ ಕರೆ ಅಳಿಸಲಾಗದೆ ಅಂಗೈನೇ ಪದೇ ಪದೇ ತೊಳೆದುಕೊಳ್ಳುತ್ತಾ ಕೂರುವಂತಾಗಿದೆ.
ಇಳೆಯಿಂದ ಮೊಳಕೆಯೊಗೆವಂದು ತಮಟೆಗಳಿಲ್ಲ
ಫಲಮಾಗುವಂದು ತುತ್ತೂರಿ ದನಿಯಿಲ್ಲ
ಬೆಳಕೀವ ಸೂರ್ಯಚಂದ್ರರದೊಂದೂ ಸದ್ದಿಲ್ಲ
ಹೊಲಿ ನಿನ್ನ ತುಟಿಗಳು ಮಂಕುತಿಮ್ಮ
ಎಂದು ಡಿವಿಜಿ ಹೇಳಿದಂತೆ ಮನುಷ್ಯ ಈ ಕರೋನ ಕೈ ಚಳಕದ ಎದುರು ಮಾತಿಲ್ಲದಂತೆ ತುಟಿ ಹೊಲೆದು ಕೂರಬೇಕಿದೆ.

ಹಾಗಂತ ಬದುಕೇನೂ ಇಲ್ಲಿಗೇ ಕೊನೆಯಾಗಿಲ್ಲ. ಈ ಸ್ಥಿತಿ ಶಾಶ್ವತವೂ, ನಿರಂತರವೂ ಅಲ್ಲ.ಕರೋನದಿಂದ ಮನುಷ್ಯನಿಗೆ ಬಿಡುವು ಸಿಕ್ಕಿದೆ. ಈ ಕರೋನ ರಜೆಯ ಸಂಭ್ರಮ ನಮ್ಮ ಧಾವಂತ ಬದುಕಿಗೆ ಸಿಕ್ಕ ಅಪೂರ್ವ, ಅಪರೂಪದ ಅನಿರ್ವಚನೀಯ ಚಂದ್ರಮ.ನಮ್ಮ ಸಂಬಂಧಗಳು ಕೇವಲ ಪ್ರತಿಷ್ಠೆಯ, ನಾಮಕಾವಸ್ಥೆಯ ಸಂಬಂಧಗಳಾಗಿದ್ದವು, ಹಲೋ, ಹಾಯ್ ಎಂದು ಪರಸ್ಪರ ಕೈ ಕೊಡುವುದಕ್ಕೇ ಮುಗಿದುಹೋಗುತ್ತಿದ್ದವು.

ಮನೆ ಎನ್ನುವುದು ಅಗತ್ಯಗಳನ್ನಷ್ಟೇ ಪೂರೈಸುವ ತಿಂದುಂಡು ಹಾಯ್, ಬಾಯ್ ಹೇಳಿ ಹೋಗುವ ತಂದುದಾಣ ಎನ್ನುವಂತಾಗಿತ್ತು. ನಾವು ಪರಕೀಯರಾಗೇ ಇದ್ದು, ಎದ್ದು ಹೋಗಿದ್ದೆವು. ಈಗ ನಮಗೆ ನಿಜ ಸಂಬಂಧಗಳು ಸಿಕ್ಕಿವೆ. ಅಮ್ಮನ ಕೈತುತ್ತ ಮಮತೆ, ಸಂಗಾತಿಯ ಕಣ್ಣ ಪ್ರೀತಿಗೆ ಅರ್ಥ ಸಿಕ್ಕಿದೆ. ತುಂಟ ಮಕ್ಕಳ ಹಾವ ಭಾವ,ಚೇಷ್ಟೆ, ಆಟೋಟಗಳ ಸವಿಯುವ ಬಾಲ್ಯದ ಮನಸ್ಥಿತಿ ಮರುಕಳಿಸುತ್ತಿದೆ.

ಎಲ್ಲ ನನ್ನವರೆಂಬ ಭಾವ ಹುಟ್ಟಿ, ಮನಸ್ಸುಗಳ ಅರಿತ ಬೆರೆತ ಧನ್ಯತೆ ಮೂಡುತ್ತಿದೆ.
ಈ ಲಾಕ್‍ಡೌನ್‍ನಿಂದ ಅಂತಹ ದೊಡ್ಡ ಅನರ್ಥವೇನೂ ಆಗಿಲ್ಲ. ಆಕಾಶವೇನೂ ಕಳಚಿ ತಲೆ ಮೇಲೆ ಬಿದ್ದಿಲ್ಲ. ಧಾವಂತ, ಕೊಳ್ಳುಬಾಕತನದಲ್ಲಿ ನಮ್ಮನ್ನೇ ಮರೆತು ಸುಷಪ್ತಿಯಲ್ಲಿದ್ದ ನಾವು ಮತ್ತೆ ಎಚ್ಚರಗೊಳ್ಳುತ್ತಿದ್ದೇವೆ. ಮಲಗಿದ ತೊಟ್ಟಿಲ ಮಗುವಿಗೆ ಅಮ್ಮ ಪರದೆ ಬಿಟ್ಟಂತೆ, ಆಮೆ ಚಿಪ್ಪೊಳಗೆ ಹುದುಗಿದಂತೆ ಸುಪ್ತಾವಸ್ಥೆ ತಲುಪಿದ್ದೇವೆ. ಭವ್ಯ ನೀಲಾಕಾಶದಲ್ಲಿ ಹೊಸ ಸೂರ್ಯನ ಉದಯಕ್ಕೆ, ನವ ಮನ್ವಂತರಕ್ಕೆ ಕಾದು ನಿಂತಿದ್ದೇವೆ. ನಿರಂತರ ದುಡಿದು ಬಳಲಿ ಬೆಂಡಾದ ಜೀವಗಳಿಗೆ ಇದು ದೇವರೇ ಕೊಟ್ಟ ವರ!

ಈಗಲಾದರೂ ಪಾಕವಾಗಿ ಪಕ್ವವಾಗಿ ಕ್ಯೂರ್ ಆಗಬೇಕಿದೆ ನಮ್ಮ ಬದುಕಿನ ಚಾದರ! ಒಂದಿಷ್ಟು ಟೊಂಗೆಗಳನ್ನು ಕಡಿಸಿಕೊಂಡರೂ ಮರ ಮತ್ತೆ ಚಿಗುರುತ್ತದೆ. ಕೋಶದಲ್ಲೇ ಕನಸು ಕಟ್ಟುವ ಕಂಬಳಿಹುಳ ಮತ್ತೆ ರೆಕ್ಕೆ ಬಿಚ್ಚಿ ಪಾತರಗಿತ್ತಿಯಾಗಿ ಹಾರುವ ಕನಸು ಕಾಣುತ್ತದೆ.ಅಂತೆಯೇ ಮತ್ತೆ ಈ ಹೆಪ್ಪಾದ ಹಾಲು ಕರಗಿ ಕ್ಷೀರಸಾಗರ ಮಥನವಾಗಬೇಕು. ಆ ಶಿವ ಗಂಟಲಲ್ಲೇ ಕರೋನ ಒತ್ತಿ ಹಿಡಿದು ಮತ್ತೆ ನೀಲಕಂಠನಾಗಬೇಕು. ನಾವು ಈ 21 ದಿನಗಳ ಅಗ್ನಿಪರೀಕ್ಷೆಯನ್ನು ಎದುರಿಸಬೇಕು. ಕನಿಷ್ಠ ಸೌಲಭ್ಯಗಳ ನಡುವೆಯೇ ನಮ್ಮ ಆಸೆ, ಬಯಕೆಗಳನ್ನು ಹತ್ತಿಕ್ಕಿ ಹೊರ ಬರದೆ ತಪಸ್ಸು ಮಾಡಬೇಕು.

ಓ ತಂದೆ! ಈ ಬಾನು, ಈ ಕಡಲು ಎಲ್ಲವೂ ನಿನದೇ! ಈ ವೈರಸ್ಸು,ಈ ಆಯಸ್ಸು ಎಲ್ಲವೂ ನಿನದೇ! ಸ್ವೀಕರಿಸು ನಮ್ಮೀ 21 ದಿನಗಳ ತಪಸ್ಸಿನ ಹವಿಸ್ಸು! ನೀ ಹರಸು ಅವಿರತ ಮನು ಕುಲದ ಶ್ರೇಯಸ್ಸು! ಎಂದು ದೀಪ ಹಚ್ಚಿ ಆ ದಯಾಮಯಿ ಭಗವಂತನನ್ನು ಪ್ರಾರ್ಥಿಸೋಣ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?