Publicstory
ತುಮಕೂರು: ಮನೆ ಮನೆಗಳಿಗೆ ಕನ್ನಡ ಪುಸ್ತಕದ ಸುಗ್ಗಿ ಮಾಡಿದ ಚಂಪಾ ಅವರ ಕೊಡುಗೆ ಕನ್ನಡ ಸಾಹಿತ್ಯಕ್ಕೆ ಅಪಾರವಾದದ್ದು ಎಂದು ಡಾ. ಡಿ.ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷೆ ಪ್ರೊ. ಅಣ್ಣಮ್ಮ ಅಭಿಪ್ರಾಯ ಪಟ್ಟರು.
ನಗರದ ತುಮಕೂರು ವಿವಿಯ ಡಾ. ಡಿ.ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸೋಮವಾರ ನಡೆದ ಚಂಪಾ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಬಂಡಾಯ ಸಾಹಿತಿಯಾಗಿ ಗುರುತಿಸಿಕೊಂಡಿದ್ದ ಚಂಪಾ ಅವರು ಸಂಕ್ರಮಣ ಪತ್ರಿಕೆಯ ಮೂಲಕ ಕನ್ನಡ ಸಾಹಿತ್ಯದಲ್ಲಿ ಹೊಸ ಸಂಚಲನ ಸೃಷ್ಟಿಸಿದವರು. ಗೋಗಾಕ್ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದ ಚಂಪಾ ಅವರು ಹಿರಿಕಿರಿ ಬರಹಗಾರರನ್ನು ಬೆಳೆಸಿ ಪೋಷಿಸಿದ ಧೀಮಂತ.ಕಸಾಪ ಅಧ್ಯಕ್ಷರಾಗಿ ಪುಸ್ತಕ ಸಂತೆ ಸೇರಿದಂತೆ ಹಲವು ಕನ್ನಡ ಕಟ್ಟುವ ಕೆಲಸ ಮಾಡಿದ ಚಂಪಾ ಅವರು ನಮ್ಮನ್ನಗಲಿರುವುದು ಕನ್ನಡ ಸಾಹಿತ್ಯಕ್ಕೆ ತುಂಬಲಾರದ ನಷ್ಟ ಎಂದರು
ಪ್ರಾಧ್ಯಾಪಕ ಡಾ. ಡಿ.ವಿ ಪರಮಶಿವ ಮೂರ್ತಿ ಮಾತನಾಡಿ ನಿರ್ಭೀತ ಮಾತುಗಳು ಹಾಗೂ ಹಲವು ಪ್ರಕಾರದ ಸಾಹಿತ್ಯ ರಚನೆಯ ಮೂಲಕ ಕನ್ನಡ ಸಾಹಿತ್ಯದಲ್ಲಿ ಮುಂಚೂಣಿಯಲ್ಲಿದ್ದ ಚಂಪಾ ಅವರು ಅನಂತ ನಾಟಕಗಳನ್ನು ಜನಪ್ರಿಯಗೊಳಿಸಿದವರು. ಹರಿತ ಮನೋಚ್ಛ ಮಾತುಗಳಿಂದ ಹೆಸರಾದ ಚಂಪಾ ಅವರು ಟೀಕಿಸಿದವರನ್ನೂ ತೀಕ್ಷ್ಣವಾಗಿ ಪ್ರೀತಿಸಿದವರು ಎಂದು ತಿಳಿಸಿದರು.
ಪ್ರಾಧ್ಯಾಪಕ ಡಾ. ನಿತ್ಯಾನಂದ ಬಿ ಶೆಟ್ಟಿ ಮಾತನಾಡಿ ಚೇತೋಹಾರಿ ಹಾಗೂ ಗಂಭೀರವಾದ ಅವರ ಬರವಣಿಗೆ ಮತ್ತು ಸಂಕ್ರಮಣ ಪತ್ರಿಕೆಯ ಬಗ್ಗೆ ಕನ್ನಡದಲ್ಲಿ ಒಳ್ಳೆಯ ಸಂಶೋಧನೆ ನಡೆಯಬೇಕಿತ್ತು. ಸಾಹಿತ್ಯ ,ನೆಲ, ನೀರು, ಧರ್ಮ, ರಾಜಕೀಯ, ಸಾಹಿತ್ಯ ಪ್ರಶ್ನೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತಿದ್ದ ಚಂಪಾ ಅವರು ಕನ್ನಡ ಸಾಹಿತ್ಯದಲ್ಲಿ ಅಚ್ಚಳಿಯದೆ ನೆನಪಿಟ್ಟುಕೊಳ್ಳುವಂತಹ ಮೇರು ವ್ಯಕ್ತಿತ್ವ ಹೊಂದಿದ್ದರು ಎಂದರು.
ಅಗಲಿದ ಚಂಪಾ ಅವರಿಗೆ ಮೌನಾಚರಣೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಸಂಶೋಧನಾ ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.