Thursday, March 28, 2024
Google search engine
Homeಜನಮನಕರೋನಾ: ಅಪಾಯ ಕಮ್ಮಿ-ಹೆದರಿಸಬೇಡಿ ಕೆಮ್ಮಿ!

ಕರೋನಾ: ಅಪಾಯ ಕಮ್ಮಿ-ಹೆದರಿಸಬೇಡಿ ಕೆಮ್ಮಿ!

ತುರುವೇಕೆರೆ ಪ್ರಸಾದ್


ಬೆಳಿಗ್ಗೆ ಎದ್ದು ಮೊಬೈಲ್ ತೆರೆದರೆ ಹಲವು ನಿಸರ್ಗ ಸೌಂದರ್ಯದ ಚಿತ್ರಗಳು, ಉತ್ತೇಜನಕಾರಿ ಸಂದೇಶಗಳನ್ನೊಳಗೊಂಡ ಶುಭಾಶಯಗಳು ಬಂದಿರುತ್ತಿದ್ದವು. ಅವನ್ನು ನೋಡಿ, ಓದಿ ಮನಸ್ಸು ಪ್ರಪುಲ್ಲವಾಗುತ್ತಿತ್ತು.

ಆದರೆ ಈಗ ಕೆಲವು ದಿನಗಳಿಂದ ಬೆಳಿಗ್ಗೆ ಎದ್ದ ಕೂಡಲೇ ಇಡೀ ವಾಟ್ಸಪ್,ಫೇಸ್‍ಬುಕ್ ತುಂಬಾ ಕರೋನ ವೈರಸ್ ಕುರಿತ ಚಿತ್ರಗಳು, ಜಾಗೃತಿ ಸಂದೇಶಗಳು, ಔಷಧೋಪಚಾರಗಳ ಕ್ರಮ, ತಡೆಗಟ್ಟುವ ಕ್ರಮಗಳು, ಅದರಲ್ಲಿ ಆಯುರ್ವೇದ, ಯುನಾನಿ,ಅಲೋಪತಿ ಇತ್ಯಾದಿ ವಿವಿಧ ಚಿಕಿತ್ಸಾ ಕ್ರಮಗಳ ಉದ್ದುದ್ದ ಸಾಲುಗಳೇ ತುಂಬಿ ತಲೆ ಕೆಟ್ಟು ಹೋದಂತಾಗುತ್ತಿದೆ.

ಅದರಲ್ಲೂ ಬಹಳಷ್ಟು ಸಂದೇಶಗಳು ನಮ್ಮ ಮನಸ್ಸಿನಲ್ಲಿ ಆತಂಕ,ಭಯ ಮೂಡಿಸುವಂತಹವುಗಳೇ ಅಗಿರುತ್ತವೆ. ಟಿವಿ ಆನ್ ಮಾಡಿದರಂತೂ ಮುಗಿದೇ ಹೋಯಿತು.

ನ್ಯೂಸ್ ಚಾನಲ್‍ಗಳು ಕೊರೋನೋ ವೈರಸ್‍ನಿಂದ ಸತ್ತವರ ಮಾಹಿತಿ, ಹೊಸ ಸೋಂಕು ಪೀಡಿತರ ಕುರಿತ ಉತ್ಪ್ರೇಕ್ಷಿತ ವರದಿಗಳು, ಕೊರೋನಾ ಎನ್ನುವುದು ಮನುಕುಲ ವಿನಾಶಕ, ಪ್ರಳಯಸ್ವರೂಪಿ, ಮಹಾ ಮೃತ್ಯಕಂಟಕ ಇತ್ಯಾದಿ ಎತ್ತರದ ಸ್ತರದ ಅಬ್ಬರದ ವರ್ಣನೆಗಳನ್ನು ಮಾಡುತ್ತಾ ಮನಸ್ಸನ್ನು ನಡುಗಿಸುತ್ತವೆ.

ಮುದ್ರಣ ಮಾಧ್ಯಮದ ಪತ್ರಿಕೆಗಳು ಸಹ ಇದಕ್ಕೇನೂ ಕಡಿಮೆ ಇಲ್ಲ. ಯಾರಿಗಾದರೂ ಫೋನ್ ಮಾಡಲೆಂದು ಮೊಬೈಲ್ ಒತ್ತಿದರೆ ಸಾಕು, ಅತ್ತಲಿಂದ ಕೊರ ಕೊರ ಕೆಮ್ಮವ ಧ್ವನಿ ಬಂದು ನಮ್ಮ ಪ್ರೀತಿಪಾತ್ರರು ಹುಶಾರು ತಪ್ಪಿದ್ದಾರೇನೋ ಎಂದು ಆತಂಕವಾಗುತ್ತದೆ. ಆಮೇಲೆ ಅದು ಕೊರೋನಾ ಜಾಗೃತಿ ಸಂದೇಶ ಎಂದು ಗೊತ್ತಾದಾಗ ಮನಸ್ಸಿಗೆ ಸಮಾಧಾನವಾಗುತ್ತದೆ.

ಈ ಜಾಗೃತಿ ಸಂದೇಶ ದಿನಕ್ಕೆ ಒಂದೆರಡು ಬಾರಿ ಬಂದರೆ ಸರಿ, ಆದರೆ ಮೊಬೈಲ್ ಒತ್ತಿದಾಗಲೆಲ್ಲಾ ಈ ಕೆಮ್ಮುವ ಧ್ವನಿ ಕರ ಕರ ಎಂದು ತೀವ್ರ ಕಿರಿಕಿರಿಯಾಗುತ್ತಿದೆ. ಕೊನೆಮೊದಲಿಲ್ಲದ ಸಲಹೆಗಳು, ಭಯಗೊಳಿಸುವ ಉತ್ಪ್ರೇಕ್ಷಿತ ವರದಿಗಳು, ಕೆಟ್ಟ/ ಅಸಹಜ ಭವಿಷ್ಯಗಳು ಮೊಬೈಲ್, ಸಾಮಾಜಿಕ ಜಾಲತಾಣದ ತುಂಬಾ ಉಕ್ಕಿ ಹರಿಯುತ್ತಿವೆ. ಆದರೆ ಜನ ನಂಬಿರುವಂತೆ ಈ ಯಾವ ವ್ಯಕ್ತಿಯೂ ಭವಿಷ್ಯ ಬರೆಯುವ ನಾಸ್ಟ್ರಾಡಮಸ್ ಖಂಡಿತಾ ಅಲ್ಲ.

ಕರೋನ ವೈರಸ್ ಬಹಳಷ್ಟು ವರ್ಷಗಳಿಂದ ನಮ್ಮ ಮಧ್ಯೆಯೇ ಇದೆ ಎನ್ನುವುದು ಆಶ್ಚರ್ಯವಾದರೂ ನಿಜ! ತೀವ್ರ ಉಸಿರಾಟದ ಸಮಸ್ಯೆ( ಸಿವಿಯರ್ ಅಕ್ಯೂಟ್ ರೆಸ್ಪಿರೇಟರಿ ಸಿಂಡ್ರೋಮ್(sars) ಮತ್ತು ಮಿಡಲ್ ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್(mers) ಸಾಂಕ್ರಾಮಿಕಗಳಿಗೂ ಸಹ ಕೊರೋನಾ ವೈರಸ್‍ಗಳೇ ಕಾರಣ. ಕ್ರಿಮಿನಾಶಕಗಳಾದ ಡೆಟಾಲ್ ಮತ್ತು ಲೈಸಾಲ್‍ಗಳ ಲೇಬಲ್‍ಗಳ ಮೇಲೆ ಸಹ ‘ಇವು ಕೊರೋನಾ ವೈರಸ್‍ಗಳನ್ನು (ಸಾಮಾನ್ಯ ಪ್ರಬೇಧ)ಕೊಲ್ಲುತ್ತವೆ’ ಎಂದು ಬರೆಯಲಾಗುತ್ತಿತ್ತು.

ಚೀನಾದ ವೊಹಾನ್‍ನಲ್ಲಿ ಕಂಡು ಬಂದಿರುವುದು ನಮಗೆಲ್ಲ ಗೊತ್ತಿದ್ದ ಕೊರೋನಾ ವೈರಸ್‍ನ ಒಂದು ಹೊಸ ಬಗೆಯ ಪ್ರಬೇದವಾಗಿದ್ದು ಇದನ್ನು ಕೋವಿಡ್-19 ಎಂದು ಹೆಸರಿಸಲಾಗಿದೆ.

ಸಾಮಾಜಿಕ ಜಾಲತಾಣಗಳು ಮತ್ತು ಡಿಜಿಟಲ್ ಯುಗದ ಈ ಕಾಲಮಾನದಲ್ಲಿ ಯಾವುದೇ ತಪ್ಪುಮಾಹಿತಿ ವೈರಸ್ ಹರಡುವ ವೇಗಕ್ಕಿಂತ ಸಾವಿರ ಪಟ್ಟು ವೇಗವಾಗಿ ಹರಡುತ್ತದೆ ಮತ್ತು ನಾವು ಹಿಂದೆ ಮುಂದೆ ಯೋಚಿಸದೆ, ಸತ್ಯಾಸತ್ಯತೆಗಳನ್ನು ಪರಿಶೀಲಿಸದೆ ಅಗ್ಗದ ಪ್ರಚಾರಕ್ಕಾಗಿ ಇವನ್ನು ಫಾರ್ವರ್ಡ್ ,ಶೇರ್ ಮಾಡುತ್ತಿದ್ದೇವೆ.

ವಿಶ್ವ ಆರೋಗ್ಯ ಸಂಸ್ಥೆ ಜನರಲ್ಲಿ ಗೊಂದಲ, ಭಯ ಮೂಡಿಸುವ ಇನ್‍ಫೋಡಮಿಕ್ (ಸಾಂಕ್ರಾಮಿಕ ಸುಳ್ಳು ಮಾಹಿತಿ) ವಿರುಧ್ಧ ಎಚ್ಚರಿಕೆಯ ಹೇಳಿಕೆ ಬಿಡುಗಡೆ ಮಾಡಿದೆ. ಕೋವಿಡ್-19 ವೈರಸ್ ನಿಜವಾಗಿ ಇರುವುದಕ್ಕಿಂತ ಹೆಚ್ಚು ಅಪಾಯಕಾರಿ ಎನ್ನುವ ಭಯ ಹರಡುತ್ತಿದೆ.

ಕೋವಿಡ್-19ರ ದುಷ್ಪರಿಣಾಮದ ಸಾವಿನ ಪ್ರಮಾಣ ಕೇವಲ ಶೇ.3.4. ಚೀನಾದ ವೋಹಾನ್‍ನಲ್ಲಿ ಆರಂಭಿಕ ಹಂತದಲ್ಲಿ ಕಾಣಿಸಿಕೊಂಡ ತೀವ್ರತೆ 17.3%ರಷ್ಟಿತ್ತು. ಆ ಪ್ರಮಾಣ ಈಗ ವೋಹಾನ್‍ನಲ್ಲಿ ಶೇ.5.8ಕ್ಕೆ ಹಾಗೂ ಇಡೀ ಚೀನಾದಲ್ಲಿ ಶೇ.0.7ಕ್ಕೆ ಇಳಿದಿದೆ. ಸಾರ್ಸ್ (10%)ಮತ್ತು ಮಿಯರ್ಸ್‍ಗೆ(34%) ಹೋಲಿಸಿದೆರೆ ಇದು ಅಂತಹ ಗಣನೀಯ ಸಾವಿನ ಪ್ರಮಾಣವೇನಲ್ಲ.

ಆದರೆ ಆಗ ಈಗಿನಂತೆ ಸಾಮಾಜಿಕ ಜಾಲತಾಣಗಳಿರಲಿಲ್ಲ, ಹಾಗಾಗಿ ಯಾರೂ ಈಗಿನಂತೆ ಹೆಜ್ಜೆ ಹೆಜ್ಜೆಗೂ ನಿರಂತರ ಭಯದಲ್ಲಿ ನರಳುವ ಪ್ರಮೇಯವಿರಲಿಲ್ಲ, ಒಂಭತ್ತು ವರ್ಷದೊಳಗಿನ ಯಾವುದೇ ಹುಡುಗ/ಹುಡುಗಿ ಕೊವಿಡ್-19ರಿಂದ ಸತ್ತಿಲ್ಲ ಹಾಗೂ 60 ವರ್ಷದೊಳಗಿನ ವ್ಯಕ್ತಿಗಳ ಸಾವಿನ ಪ್ರಮಾಣವೂ ತೀರಾ ಕಡಿಮೆಯೇ! 60 ವರ್ಷಕ್ಕೆ ಮೇಲ್ಪಟ್ಟವರು, ಅದರಲ್ಲೂ ಶ್ವಾಸಕೋಶ ಸಂಬಂಧೀ ಸಮಸ್ಯೆ, ಕಾಯಿಲೆಗಳನ್ನು ಹೊಂದಿದವರು, ಇತರೆ ರೋಗದಿಂದ ಬಳಲಿ ರೋಗನಿರೋಧಕ ಶಕ್ತಿಯನ್ನು ಕಳೆದುಕೊಂಡಿರುವವರು ಮಾತ್ರ ಕೋವಿಡ್-19ನ ಅಪಾಯಕಾರಿ ವರ್ತಲದಲ್ಲಿದ್ದಾರೆ ಎನ್ನುವುದನ್ನು ಬಿಟ್ಟರೆ ಅದು ಮಾಧ್ಯಮಗಳು ವರ್ಣಿಸುವಂತೆ ಮನುಕುಲದ ಕಂಟಕವೇನಲ್ಲ.

ಕಳೆದ ವಾರದ ಅಂಕಿಅಂಶಗಳ ಪ್ರಕಾರ ಪ್ರಪಂಚದಾದ್ಯಂತ 1,03,882 ಕೊವಿಡ್-19 ಪ್ರಕರಣಗಳು ದಾಖಲಾಗಿದ್ದವು ಮತ್ತು ಅವುಗಳಲ್ಲಿ 3522 ಸಾವುಗಳು ಸಂಭವಿಸಿತ್ತು. ಇವುಗಳಲ್ಲಿ 80,651 ಪ್ರಕರಣಗಳು ಚೀನಾದಲ್ಲಿ ವರದಿಯಾಗಿದ್ದವು. ಚೀನಾ ದೇಶವೊಂದರಲ್ಲೇ 3070 ಜನ ಕೊವಿಡ್-19ಗೆ ಬಲಿಯಾಗಿದ್ದರು. (ಇದರಲ್ಲಿ ಬಹುತೇಕರು ಸಾವನ್ನಪ್ಪಿದ್ದು ಆರಂಭದಲ್ಲಿ ಉಂಟಾದ ಬೇಕಿಂಗ್‍ನಲ್ಲಿ) ಭಾರತದಲ್ಲಿ 33 ಜನ ಕೋವಿಡ್-19 ಸೋಂಕಿತರಿದ್ದರು.ಅವರಲ್ಲಿ ಮೂವರು ಪೂರ್ಣಪ್ರಮಾಣದಲ್ಲಿ ಗುಣಮುಖರಾಗಿದ್ದರು.

ಅಲ್ಲದೆ ಬೇರೆ ಯಾರೂ ತೀವ್ರವಾಗಿ ನರಳಿ ಸಾವು ಬದುಕಿನ ನಡುವೆ ಹೋರಾಡಿದ ಉದಾಹರಣೆ ಇಲ್ಲ. ಹಾಗಿದ್ದರೂ ನಾವೇಕೆ ಇಷ್ಟು ಭಯಭೀತರಾಗಿ ನಮ್ಮ ನೆರಳಿಗೇ ನಾವು ಹೆದರುವಂತಾಗಿದ್ದೇವೆ ?.ಜನರು ಆರೇಳು ಪಟ್ಟು ಹೆಚ್ಚು ಬೆಲೆ ತೆತ್ತು ಮಾಸ್ಕ್‍ಗಳನ್ನು ಏಕೆ ಕೊಳ್ಳಬೇಕು ? ಎಂಬುದೇ ಅರ್ಥವಾಗುತ್ತಿಲ್ಲ. ಆ ಮಟ್ಟಿಗೆ ನಾವು, ನಮ್ಮ ಮಾಧ್ಯಮಗಳು ಜನರನ್ನು ಹೆದರಿಸಿ ಹಿಂಡಿ ಹಿಪ್ಪೆಮಾಡಿಟ್ಟಿವೆ.

ಇನ್ನು ಮುಖಕ್ಕೆ ಧರಿಸುವ ಮಾಸ್ಕ್‍ಗಳಿಂದ ನಮಗೆ ಕೋವಿಡ್-19ನಿಂದ ರಕ್ಷಣೆ ಸಿಗುತ್ತದೆ ಎಂಬುದು ಶೇ.100ನಿಜವಲ್ಲ. ಯಾರಾದರೂ ಕೋವಿಡ್-19 ಸೋಂಕು ಪೀಡಿತರು ನಿಮ್ಮ ಮುಖದ ಮುಂದೆ ಸೀನದೆ ವಾತಾರಣದ ಗಾಳಿಯ ಮೂಲಕ ಹರಡುವುದಿಲ್ಲ. ಅಂದರೆ ಕರೋನ ವೈರಸ್ ಹರಡುವಿಕೆಗೆ ಗಾಳಿ ಮಾಧ್ಯಮವಾಗಲಾರದು. ಅದು ಮೇಲ್ಮೈಗಳ (ಸರ್‍ಫೇಸ್) ಮೂಲಕ ಹರಡುತ್ತದೆ. ಹಾಗಾಗಿ ಮಾಸ್ಕ್ ಕೋವಿಡ್-19ರಿಂದ ಸಂಪೂರ್ಣ ರಕ್ಷಣೆಯೇನಲ್ಲ. ಅದರಿಂದ ಇನ್ನೂ ಹೆಚ್ಚು ಕರೋನ ವೈರಸ್‍ಗೆ ನಾವಾಗೇ ಆಹ್ವಾನಕೊಟ್ಟಂತೆ ಎನ್ನುವುದು ವಿಚಿತ್ರವಾದರೂ ನಿಜ.

ಮಾಸ್ಕ್ ಮುಜಗರ, ಕಿರಿಕಿರಿ ಅನಿಸಿದಾಗ, ಯಾರೊಂದಿಗಾದರೂ ಮಾತಾಡಲೇಬೇಕಾದಾಗ, ತಿಂಡಿ, ಊಟ ಮಾಡುವಾಗ ನಾವು ಪದೇ ಪದೇ ಮಾಸ್ಕರನ್ನು ಕೆಳಗೆ ಎಳೆಯಬೇಕಾಗುತ್ತದೆ. ಪ್ರತಿಸಾರಿ ಹಾಗೆ ಮಾಡಿದಾಗಲೂ ನಾವು ಮುಖ ಅದರಲ್ಲೂ ಮೂಗು ಮುಟ್ಟಿಕೊಳ್ಳುವ ಸಂಭವವೇ ಹೆಚ್ಚು.

ನಮ್ಮ ಕೈ ಅಕಸ್ಮಾತ್ ಜೀವಂತ ವೈರಸ್ ಇರುವ ಮೈಲ್ಮೈನ ಸಂಪರ್ಕ ಪಡೆದಿದ್ದರೆ ಸೋಂಕು ನಮಗೆ ತಗಲುವ ಸಂಭವವೇ ಹೆಚ್ಚು. ಪ್ರತಿಭಾರಿ ನಾವು ಮಾಸ್ಕ್ ಸರಿಸುವಾಗ, ತೆಗೆಯುವಾಗ ಕೈ ತೊಳೆದುಕೊಳ್ಳುವುದು ಸಾಧ್ಯವಿಲ್ಲದ ಮಾತು.

ಮಾಸ್ಕ್ ಧರಿಸುವ ವ್ಯಕ್ತಿ ಇತರೆ ಸಾಮಾನ್ಯ ವ್ಯಕ್ತಿಗಿಂದ ಹೆಚ್ಚು ಸಾರಿ ಮುಖ/ಮೂಗು ಮುಟ್ಟಿಕೊಳ್ಳುತ್ತಾನೆ. ಹಾಗಾಗಿ ಅವನಿಗೆ ಇತರರಿಗಿಂತ ಹೆಚ್ಚು ಬೇಗ ಸೋಂಕು ತಗಲುವ/ಹರಡುವ ಸಂಭವವೇ ಹೆಚ್ಚು. ನಮಗೆ ನಿಜಕ್ಕೂ ವೈರಸ್ ಸೋಂಕು ತಗುಲಿದೆ ಎಂದು ಖಾತರಿಯಾಗಿದ್ದರೆ ಅಥವಾ ಆ ಅನುಮಾನವಿದ್ದರೆ ಮಾತ್ರ ನಾವು ಅದನ್ನು ಹರಡದಂತೆ ಮಾಸ್ಕ್ ಧರಿಸುವುದು ವಿಹಿತ.

ಅಮೇರಿಕಾದ ಸರ್ಜನ್ ಜನರಲ್ ಡಾ.ಜೆರೊಮೋವ್ ಅಡಮ್ಸ್ ‘ಮಾಸ್ಕ್ ಕೊಳ್ಳುವುದನ್ನು ಕೂಡಲೇ ನಿಲ್ಲಿಸಿ’ ಎಂದು ಫೆ.29ರಂದು ಟ್ವೀಟ್ ಮಾಡಿ ಜನರನ್ನು ಎಚ್ಚರಿಸಿರುವುದನ್ನು ಗಮನಿಸಬೇಕು.

ಫೇಸ್‍ಬುಕ್, ಟ್ವಿಟ್ಟರ್, ಯೂಟ್ಯೂಬ್ ಮತ್ತಿತ್ತರ ಸಾಮಾಜಿಕ ಜಾಲತಾಣ ವೇದಿಕೆಗಳು ಇನ್‍ಫೋಡೆಮಿಕ್ ವಿರುದ್ಧ ಜಾಗೃತಿ ಮೂಡಿಸಲು ಕೋವಿಡ್-19ರ ಕುರಿತ ಅಧಿಕೃತ ಮಾಹಿತಿ ಇರುವ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‍ಓ) ಮತ್ತು ಅಮೇರಿಕಾದ ಸಿಡಿಸಿ ಜಾಲ ತಾಣಗಳ ಕುರಿತು ಮಾಹಿತಿ, ನಿರ್ದೇಶನ ನೀಡುತ್ತಿವೆ.

ಫೇಸ್‍ಬುಕ್ ವಸ್ತು ವಿಮರ್ಶಕರು (ಫ್ಯಾಕ್ಟ್ ಚೆಕರ್ಸ್ )ಸಹ ಹಗಲು ರಾತ್ರಿ ತಪ್ಪು ಹಾಗೂ ಕಪೋಲಕಲ್ಪಿತ ಮಾಹಿತಿಗಳು, ಬೋಗಸ್ ಚಿಕಿತ್ಸಾ ಕ್ರಮಗಳು ಮೊದಲ ಸತ್ಯಕ್ಕೆ ದೂರವಾದ, ಜನರಲ್ಲಿ ಗಾಬರಿ ಹುಟ್ಟಿಸುವ ವಿಷಯಗಳನ್ನು ತೆಗೆದು ಹಾಕಲು ಶ್ರಮಿಸುತ್ತಿದ್ದಾರೆ. ಆದರೆ ಈ ಪ್ರಯತ್ನ ನದಿ ಪ್ರವಾಹಕ್ಕೆ ವಿರುದ್ಧವಾಗಿ ಈಜಿದಂತಾಗಿದೆ. ತಮ್ಮ ಜಾಲತಾಣದ ವೇಗ ಮತ್ತು ಪಾರಸ್ಪರಿಕತೆಯೇ ಅವರಿಗೆ ಮುಳ್ಳಾಗಿದೆ. ಫೇಸ್‍ಬುಕ್ ಸತ್ಯಶೋಧಕರು ಒಂದು ಪೋಸ್ಟ್ ತೆಗೆಯುವಷ್ಟರಲ್ಲಿ ಅದು ಮಿಂಚಿನಂತೆ ಲಕ್ಷಾಂತರ ಬಾರಿ ಶೇರ್ ಆಗಿರುತ್ತದೆ. ಅದರಲ್ಲೂ ಹೆದರಿಕೆಯ, ಪ್ರಚೋದನೆಯ ಪೋಸ್ಟ್‍ಗಳು ಮಿತಿಯಿಲ್ಲದೆ ಶೇರ್ ಆಗುತ್ತವೆ. ಇದೇ ಸಾಮಾಜಿಕ ಜಾಲತಾಣ ನಿರ್ವಾಹಕರಿಗೆ ಒಂದು ದೊಡ್ಡ ತಲೆನೋವಿನ ಕೆಲಸವಾಗಿದೆ.

ಹಾಗೆಂದು ಕೊರೋನಾದ ಹೊಸ ರೂಪ ಕೋವಿಡ್-19 ಬಗ್ಗೆ ಒಂದಿಷ್ಟು ಜಾಗೃತಿ ಮೂಡಿಸಲೇಬಾರದೆಂದಲ್ಲ. ಖಂಡಿತವಾಗಿ ಜನರಲ್ಲಿ ಈ ಕುರಿತು ಜಾಗೃತಿ ಮೂಡಿಸಬೇಕು. ಆದರೆ ಕೋವಿಡ್-19 ಕುರಿತು ಅತಿರಂಜಿತ ವರದಿಗಳು, ಭಯಾನಕ ಕಥನಗಳು, ವ್ಯಾಖ್ಯೆಗಳು ಗಂಭೀರತೆಯನ್ನು ಮೀರಿದ ತಮಾಷೆ ಎನಿಸುವಂತಿವೆ.

ಭಾರತೀಯರಾದ ನಮ್ಮ ದೇಹದಲ್ಲಿ ಪ್ರಪಂಚದಲ್ಲೇ ಹೆಮ್ಮೆ ಪಡಬಹುದಾದ ಅತಿ ದಕ್ಷ ರೋಗನಿರೋಧಕ ವ್ಯವಸ್ಥೆ ಇದೆ. ನಾವು ಸಾಕಷ್ಟು ಕಲುಶಿತ ವಾತಾವರಣದಲ್ಲೇ ಬೆಳೆದಿರುವುದರಿಂದ ಮುಂದುವರಿದ ರಾಷ್ಟ್ರಗಳ ಜನರಿಗಿಂತ ನಮ್ಮ ರೋಗನಿರೋಧಕ ಶಕ್ತಿ ಬಲಿಷ್ಠವಾಗಿದೆ. 2003ರಲ್ಲಿ ಕಾಣಿಸಿಕೊಂಡ ಸಾರ್ಸ್ ಪ್ರಪಂಚದ 29 ದೇಶಗಳಲ್ಲಿ ವ್ಯಾಪಿಸಿ 1000ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡಿತ್ತು.ಆದರೆ ಭಾರತದಲ್ಲಿ 3 ಜನರಲ್ಲಿ ಮಾತ್ರ ಈ ಸೋಂಕು ಕಾಣಿಸಿಕೊಂಡು ಅವರು ಸಂಪೂರ್ಣ ಗುಣಮುಖರಾದರು.

ಭಾರತ ಮತ್ತು ಪಶ್ಚಿಮ ಏಷ್ಯಾ ದೇಶಗಳ ನಡುವಣ ನಿಕಟ ಸಂಪರ್ಕವಿದ್ದರೂ ಮೀರ್ಸ್ ಭಾರತಕ್ಕೆ ಕಾಲಿಡಲೇ ಇಲ್ಲ. ಕೋವಿಡ್-19ರ ವಿಷಯವನ್ನೇ ತೆಗೆದುಕೊಳ್ಳಿ. ವೊಹಾನ್‍ನಲ್ಲಿ ಈ ರೋಗ ತೀವ್ರವಾಗಿ ಸಾವಿನ ಪ್ರಮಾಣ ಏರುಗತಿಯಲ್ಲಿದ್ದಾಗ ಅಲ್ಲಿಂದ ಬಂದ 327 ಭಾರತೀಯರಿಗೆ ಈ ಸೋಂಕು ತಗುಲಿರಲೇ ಇಲ್ಲ.

ಹಾಗಾಗಿ ನಮ್ಮ ಸಹಜ ಜೀವನ ಶೈಲಿಯಿಂದ ವರವಾಗಿ ಬಂದಿರುವ ನಮ್ಮ ರೋಗನಿರೋಧಕ ಶಕ್ತಿ ನಿಜಕ್ಕೂ ಸಾಟಿಯಿಲ್ಲದ್ದು.

ಭಾರತೀಯರಾದ ನಮ್ಮ ಬಲಿಷ್ಠ ರೋಗನಿರೋಧಕ ಶಕ್ತಿಯನ್ನು ಈ ಕೆಳಕಂಡ ಅಂಕಿ-ಅಂಶಗಳು ಸಾಬೀತು ಪಡಿಸುತ್ತವೆ. 2010-11 ರಿಂದ 2018-19ರವರೆಗೆ ಅಮೇರಿಕಾದಲ್ಲಿ ವರ್ಷಕ್ಕೆ 37,444 ಜನರಂತೆ ಒಟ್ಟು 3,37,000 ಜನ ಫ್ಲೂಗೆ ಬಲಿಯಾದರು. ಆದರೆ ಈ 10 ವರ್ಷಗಳಲ್ಲಿ ಭಾರತದಲ್ಲಿ ಅಮೇರಿಕಾದ ನಾಲ್ಕು ಪಟ್ಟು ಜನಸಂಖ್ಯೆ ಇದ್ದೂ ಕೇವಲ 11030 ಜನ ಮಾತ್ರ ಫ್ಲೂನಿಂದ ಮೃತರಾಗಿದ್ದಾರೆ.

ನಾವು ಅತ್ಯುತ್ತಮ ರೋಗನಿರೋಧಕ ಶಕ್ತಿ ಮತ್ತು ದೀರ್ಘಾಯುಷ್ಯ ಹೊಂದಿದ್ದೇವೆ. ಹಾಗಾಗಿ ನಾವು ವಿನಾಕಾರಣ ಕರೋನಾ ಭೀತಿಯಂದ ಆತಂಕ ಪಡಬೇಕಿಲ್ಲ. ದುಬಾರಿ ಬೆಲೆ ತೆತ್ತು ಮಾಸ್ಕ್ ಕೊಳ್ಳಬೇಕಿಲ್ಲ. ಅವಾಗವಾಗ ನಾವು ಸೋಪಿನಿಂದ ಕೈ ತೊಳೆದುಕೊಳ್ಳುವುದನ್ನು ಅಭ್ಯಾಸ ಮಾಡಿಕೊಂಡರೆ ಸಾಕು.

ಊಟ, ತಿಂಡಿಗೆ ಮುಂಚೆ ಕೈ ಕಾಲು ತೊಳೆದುಕೊಳ್ಳುವ ಅಭ್ಯಾಸ ನಮಗೆ ಹೇಗೂ ಇದ್ದೇ ಇದೆ. ಅದನ್ನೇ ದಿನಕ್ಕೆ ಇನ್ನೊಂದು ನಾಲ್ಕು ಬಾರಿ ಮಾಡಿದರಾಯಿತು. ನಮ್ಮ ಶತಾಯುಷಿ ವಜ್ರದೇಹಕ್ಕೆ ಖಂಡಿತಾ ಕರೋನಾ ಹಿಮ್ಮೆಟ್ಟಿಸುವ ತಾಕತ್ತಿದೆ.


( ಫೈನಾನ್ಸಿಯಲ್ ಎಕ್ಸ್‍ಪ್ರೆಸ್‍ನ ಮಾಜಿ ಸಂಪಾದಕ ಹಗೂ ಸ್ವರಾಜ್ಯ ಪತ್ರಿಕೆಯ ಸಂಸ್ಥಾಪಕ ಸಂಪಾದಕ ಸಂದಿಪನ್ ದೇಬ್ ಅವರ ಲೇಖನ ಆಧಾರಿತ)
ತುರುವೇಕೆರೆ ಪ್ರಸಾದ್
ಎಲ್.ಎನ್.ಪ್ರಸಾದ್
ನಂ.6, ಪಂಚವಟಿ
ಗಾಂಧಿನಗರ
ತುರುವೇಕೆರೆ-572 227
ಮೊಬೈಲ್:94486 77560

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?