Publicstory
ತುಮಕೂರು: ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಕರ್ನಲ್ (ಪ್ರೊ.) ವೈ. ಎಸ್. ಸಿದ್ದೇಗೌಡ ಅವರು ರಾಷ್ಟ್ರೀಯ ಸಿಬ್ಬಂದಿ ನಿರ್ವಹಣಾ ಸಂಸ್ಥೆ (ಎನ್‌ಐಪಿಎಂ)ಯ ಪ್ರತಿಷ್ಠಿತ ಫೆಲೋಷಿಪ್ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
ಎನ್‌ಐಪಿಎಂಗೆ ಎರಡು ಬಾರಿ ಅಧ್ಯಕ್ಷರಾಗಿದ್ದ ಪ್ರೊ. ಸಿದ್ದೇಗೌಡ ಅವರು ಸಂಸ್ಥೆಯ ಪ್ರಗತಿ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಕ್ಷೇತ್ರಕ್ಕೆ ನೀಡಿರುವ ಒಟ್ಟಾರೆ ಕೊಡುಗೆಯನ್ನು ಪರಿಗಣಿಸಿ ಈ ಫೆಲೋಷಿಪ್‌ಗೆ ಆಯ್ಕೆ ಮಾಡಲಾಗಿದೆ.
ತಮ್ಮ ೩೭ ವರ್ಷಗಳ ಶೈಕ್ಷಣಿಕ ಕ್ಷೇತ್ರದ ಸೇವೆಯ ಸಂದರ್ಭದಲ್ಲಿ ರಾಷ್ಟ್ರದಾದ್ಯಂತ ವಿವಿಧ ಹಂತಗಳ ಮಾನವ ಸಂಪನ್ಮೂಲ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕವಿರಿಸಿಕೊಂಡು ಸಾವಿರಾರು ಯುವಕರು ಉತ್ತಮ ಹುದ್ದೆಗಳನ್ನು ಪಡೆಯುವಲ್ಲಿ ಪ್ರೊ. ಸಿದ್ದೇಗೌಡ ಅವರು ಮಾರ್ಗದರ್ಶನ ನೀಡಿದ್ದಾರೆ.
ಸಮಾಜ ಕಾರ್ಯ ಕ್ಷೇತ್ರದ ವಿದ್ಯಾರ್ಥಿಗಳಲ್ಲದೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ವಿವಿಧ ಅಧ್ಯಯನ ವಿಭಾಗಗಳಲ್ಲಿ ಪದವಿ ಪೂರೈಸಿದ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಸಮರ್ಥ ವೃತ್ತಿಜೀವನವನ್ನು ಕಟ್ಟಿಕೊಳ್ಳುವಲ್ಲಿ ಅವರು ನೆರವಾಗಿದ್ದಾರೆ.
ಮೂರು ವಿಶ್ವವಿದ್ಯಾನಿಲಯಗಳಲ್ಲಿ ನಾಲ್ಕು ಬಾರಿ ಕುಲಸಚಿವರಾಗಿ ಸೇವೆ ಸಲ್ಲಿಸಿದ್ದ ಪ್ರೊ. ಸಿದ್ದೇಗೌಡ ಅವರು ತಾವು ಸೇವೆ ಸಲ್ಲಿಸಿದ ಸಂಸ್ಥೆಗಳಲ್ಲಿ ಹಾಗೂ ಪ್ರಸ್ತುತ ಕುಲಪತಿಗಳಾಗಿರುವ ತುಮಕೂರು ವಿವಿಯಲ್ಲೂ ವಿದ್ಯಾರ್ಥಿಗಳ ಔದ್ಯೋಗಿಕ ಭವಿಷ್ಯಕ್ಕೆ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.
ಕಳೆದ ಒಂದೇ ವರ್ಷದಲ್ಲಿ ಪ್ರೊ. ವೈ. ಎಸ್. ಸಿದ್ದೇಗೌಡರು ಪಡೆದಿರುವ ಪ್ರತಿಷ್ಠಿತ ಐದನೇ ಪುರಸ್ಕಾರ ಇದಾಗಿದೆ. ಪ್ರಸ್ತುತ ಸಾಧನೆಗಾಗಿ ರಾಷ್ಟ್ರೀಯ ಸಿಬ್ಬಂದಿ ನಿರ್ವಹಣಾ ಸಂಸ್ಥೆ ಹಾಗೂ ತುಮಕೂರು ವಿವಿಯ ಸಹೋದ್ಯೋಗಿಗಳು ಅವರನ್ನು ಅಭಿನಂದಿಸಿದ್ದಾರೆ.