Publicstory
Tumkuru: ಶಾಸಕ ಬಿ.ಸತ್ಯನಾರಾಯಣ್ ಸಾವಿನಿಂದ ತೆರವಾಗಿರುವ ಶಿರಾ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಚಿವ ಟಿ.ಬಿ.ಜಯಚಂದ್ರ ಕಣಕ್ಕೆ ಇಳಿಯುವುದು ಬಹುತೇಕ ಖಚಿತವಾಗಿದೆ.
ಜಯಚಂದ್ರ ಅವರ ಪುತ್ರ ಸಂತೋಷ್ ಜಯಚಂದ್ರ ಅವರು ಕಣಕ್ಕೆ ಇಳಿಯುವುದಿಲ್ಲ. ಈ ಹಿಂದಿನ ಚುನಾವಣೆಯಲ್ಲಿ ಅವರು ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು.
ಜಿಲ್ಲೆಯಲ್ಲಿ ಕುಟುಂಬ ರಾಜಕಾರಣ ಈಗಾಗಲೇ ಬೆಳೆದುನಿಂತಿದೆ. ಇದರಿಂದ ಜಯಚಂದ್ರ ಸಹ ಹೊರತಲ್ಲ. ತಮ್ಮ ಪುತ್ರನಿಗೆ ಅವರು ರಾಜಕೀಯ ನೆಲೆ ಸ್ಥಾಪಿಸಬೇಕಾಗಿದೆ. ತಮ್ಮ ಪುತ್ರನಿಗಾಗಿ ಕ್ಷೇತ್ರ ತ್ಯಾಗ ಮಾಡುತ್ತಾರೆ ಎಂಬ ಸುದ್ದಿ ಕಳೆದ ಚುನಾವಣೆಯ ಸಂದರ್ಭದಲ್ಲೇ ಜೋರು ಮುನ್ನೆಲೆಗೆ ಬಂದಿತ್ತು.
ಆದರೆ ಉಪ ಚುನಾವಣೆಯಲ್ಲಿ ಜೆಡಿಎಸ್ ಪರ ಅನುಕಂಪದ ಅಲೆ ಕೆಲಸ ಮಾಡಲಿದೆ. ಈ ಅನುಕಂಪದ ಅಲೆ ವಿರುದ್ಧ ಸಂತೋಷ್ ಜಯಚಂದ್ರ ಈಜುವುದು ಕಷ್ಟ ಸಾಧ್ಯ. ಅಲ್ಲದೇ ರಾಜ್ಯ ರಾಜಕಾರಣಕ್ಕೆ ಜಯಚಂದ್ರ ಸಹ ಅನಿವಾರ್ಯ ಆಗಿದ್ದಾರೆ. ಜಯಚಂದ್ರ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಅತ್ತ ಹಿರಿಯ ಮುಖಂಡ ಸಿದ್ದರಾಮಯ್ಯ ಇಬ್ಬರ ಬಳಿಯೂ ಚೆನ್ನಾಗಿದ್ದಾರೆ. ಜಿಲ್ಲೆಯಲ್ಲಿ ಅವರನ್ನು ಸೋಲಿಸಬೇಕು ಎಂದು ಪಣ ತೊಡುವವರಲ್ಲಿ ಕಾಂಗ್ರೆಸ್ ನ ಕೆ.ಎನ್.ರಾಜಣ್ಣ ಬಿಟ್ಟರೆ ಬೇರೆಯವರು ಹೇಳಲಾರರು.
ಕೆ.ಎನ್.ರಾಜಣ್ಣ ಅವರ ವಿರುದ್ಧ ಜಯಚಂದ್ರ ಈವರೆಗೂ ತುಟಿ ಬಿಚ್ಚಿಲ್ಲ. ಕೆ.ಎನ್.ರಾಜಣ್ಣ ಸಹ ಇಲ್ಲಿ ಟಿಕೆಟ್ ಆಕಾಂಕ್ಷಿ. ಆದರೆ ಕಾಂಗ್ರೆಸ್ ನಿಂದ ಅವರಿಗೆ ಟಿಕೆಟ್ ಸಿಗುವುದಿಲ್ಲ ಎಂಬುದು ಹಾಳೆಯ ಮೇಲೆ ಬರೆದಂತೆಯೇ ಸ್ಪಷ್ಟವಾಗಿದೆ.
ಇನ್ನೂ ರಾಜಣ್ಣ ಬೇರೆ ಪಕ್ಷಕ್ಕೆ ಹೋಗಬೇಕು ಅಥವಾ ಕಾಂಗ್ರೆಸ್ ನಲ್ಲೇ ಇರಬೇಕು. ಇವರಿಗೂ ಸಹ ತಮ್ಮ ಪುತ್ರನಿಗೆ ರಾಜಕೀಯ ನೆಲೆ ಕಲ್ಪಿಸುವುದು ಅನಿವಾರ್ಯವಾಗಿದೆ.
ಈಗಾಗಲೇ ಅವರು ಬಿಜೆಪಿ ಸಂಸದ ಜಿ.ಎಸ್.ಬಸವರಾಜ್ ಅವರೊಂದಿಗೆ ನಿಕಟ ಸಂಬಂಧ ದಲ್ಲಿದ್ದಾರೆ.ಇದು ವಿಧಾನ ಪರಿಷತ್ ಚುನಾವಣೆಯಲ್ಲಿ ತಮ್ಮ ಪುತ್ರ ಆರ್.ರಾಜೇಂದ್ರ ಅವರಿಗೆ ಪರೋಕ್ಷ ನೆರವು ಬಯಸುವ ಅಜೆಂಡಾವು ಆಗಿರಬಹುದು.ಇನ್ನೂ, ಕೆ.ಎನ್.ರಾಜಣ್ಣ ಅವರನ್ನು ಬಿಜೆಪಿಗೆ ಕರೆ ತರಲು ಒಂದು ವರ್ಗ ಶತಯಾ ಗತಾಯ ಪ್ರಯತ್ನದಲ್ಲೇ ಇದೆ. ಇದಕ್ಕಾಗಿ ಅವರ ಕೇಳುವ/ ಇಡುವ ಷರತ್ತುಗಳನ್ನು ಪೂರೈಸುವ ಸ್ಥಿತಿಯಲ್ಲಿ ಬಿಜೆಪಿ ಇಲ್ಲ. ಅದೂ ಅಲ್ಲದೇ, ಭವಿಷ್ಯದಲ್ಲಿ ಇದು ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚುವುದರಿಂದ ರಾಜಣ್ಣ ಅವರನ್ನು ಸ್ವಾಗತಿಸಿ ರತ್ನಗಂಬಳಿ ಹಾಸಲಾರದು. ಆದರೆ ಬಿಜೆಪಿಯ ಒಂದಿಷ್ಟು ವಾಗ್ದಾನಗಳಿಗೆ ಒಪ್ಪಿಕೊಂಡು ರಾಜಣ್ಣ ಬಂದರೂ ಅವರ ವ್ಯಕ್ತಿತ್ವಕ್ಕೆ ಬಿಜೆಪಿ ಉಸಿರುಕಟ್ಟಿಸಬಹುದು.
ಏನೇ ಆಗಲೀ, ಶಿರಾ ವಿಧಾನ ಸಭಾ ಕ್ಷೇತ್ರದಲ್ಲಿ ಜಯಚಂದ್ರ ವಿರುದ್ಧವೇ ಚುನಾವಣೆ ತಿರುಗಲಿದೆ. ಒಕ್ಕಲಿಗರ ಪ್ರಾಬಲ್ಯದ ಕ್ಷೇತ್ರದಲ್ಲಿ ಒಕ್ಕಲಿಗರನ್ನು ಬಿಟ್ಟು ಜೆಡಿಎಸ್, ಬಿಜೆಪಿ ಬೇರೆ ಅಸ್ತ್ರ ಪ್ರಯೋಗ ಮಾಡಿದರೆ ಅಷ್ಟರ ಮಟ್ಟಿಗೆ ತಿಮ್ಮನಹಳ್ಳಿ ಬೋರಯ್ಯ ಜಯಚಂದ್ರ ಅವರಿಗೆ ಮತ್ತಷ್ಟು ಖುಷಿಯಾಗಬಹುದು.